Site icon Vistara News

Lok Sabha Election 2024: ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ – ಮಂಗಳಾ ಅಂಗಡಿ ಫೈಟ್‌; ಪಕ್ಷ ಮುಖ್ಯವಾದರೆ ಬೀಗರಿಗೇ ಏಕೆ ಟಿಕೆಟ್‌?

Lok Sabha Election 2024 Laxmi Hebbalkar and Mangala Angadi fight in Belagavi regarding Jagadeesh Shetter contest in Belagavi

ಬೆಳಗಾವಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರಿಂದ ಆರೋಪ – ಪ್ರತ್ಯಾರೋಪಗಳು ಕೇಳುವುದು ಸಹಜ. ಈಗ ಬೆಳಗಾವಿಯಲ್ಲಿ “ಬೀಗರ”, “ಕುಟುಂಬ ರಾಜಕೀಯ” ಹಾಗೂ “ಸಚಿವಗಿರಿ”ಯ ಜಗಳ ಆರಂಭವಾಗಿದೆ. ಸಚಿವೆಯಾಗಲು ಏನೆಲ್ಲ ಮಾಡಿದಿರಿ? ಜಿಲ್ಲೆಯ ಹಿರಿಯರನು ಕಡೆಗಣಿಸಿದಿರಿ ಎಂಬ ಸಂಸದೆ ಮಂಗಳಾ ಅಂಗಡಿ (Mangala Angadi) ಮಾತಿಗೆ ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Laxmi Hebbalkar) ಪ್ರತ್ಯುತ್ತರ ನೀಡಿದ್ದಾರೆ. “ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ನಾನು ಮಹಿಳಾ ಕೋಟಾದಿಂದ ಸಚಿವೆಯಾಗಿರುವೆ ಹೊರತು, ಯಾರಿಂದಲೂ ಕಸಿದುಕೊಂಡಿಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಯಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಮಾಡುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ಕಾಂಗ್ರೆಸ್‌ನಲ್ಲಿ ಹಿರಿಯರಿದ್ದರೂ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಸಚಿವ ಸ್ಥಾನವನ್ನು ಕಸಿದುಕೊಂಡಿದ್ದಾರೆ ಎಂಬ ಸಂಸದೆ ಮಂಗಳಾ ಅಂಗಡಿ ಆರೋಪದ ವಿರುದ್ಧ ಕಿಡಿಕಾರಿದರು.

ಮಂಗಳಾ ಅವರದ್ದು ಯಾರೋ ಬರೆದುಕೊಟ್ಟ ಹೇಳಿಕೆ!

ಸಚಿವ ಸಂಪುಟ ರಚಿಸುವಾಗ ಮಹಿಳಾ ಕೋಟಾ ಅಂತ ಇರುತ್ತದೆ. ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ರೂಪಾ ಶಶಿಧರ್ ಹಾಗೂ ನಾನು ಎರಡನೇ ಬಾರಿಗೆ ಆಯ್ಕೆಯಾದ ಶಾಸಕಿಯರು. ರೂಪಾ ತಂದೆ ಮುನಿಯಪ್ಪನವರು ಸಚಿವರಾದ ಕಾರಣ, ನನಗೆ ಮಹಿಳಾ ಕೋಟಾದಡಿ ಸಚಿವೆಯಾಗುವ ಅದೃಷ್ಟ ಒಲಿಯಿತು. ಆದರೆ, ಮಂಗಳಾ ಅಂಗಡಿ ಅವರಿಗೆ ಇಂಥ ಸೂಕ್ಷ್ಮವಾದ ವಿಚಾರಗಳು ತಿಳಿದಿಲ್ಲ. ಏಕೆಂದರೆ ಅವರು ತುಂಬಾ ಮುಗ್ದರು, ಯಾರೋ ಬರೆದುಕೊಟ್ಟ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

ಸುಮಲತಾ, ಮಂಗಳಾಗೆ ಏಕೆ ಬಿಜೆಪಿ ಟಿಕೆಟ್‌ ಇಲ್ಲ?

ಮಂಗಳಾ ಅಂಗಡಿ ಅವರು ವಯಸ್ಸಿನಲ್ಲಿ ನನಗಿಂತ ದೊಡ್ಡವರಾದರೂ ರಾಜಕೀಯ ಅನುಭವ ಕಡಿಮೆ. ಉಪ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಗೆದ್ದು ಬಂದವರು. ಅವರ ಬಗ್ಗೆ ನನಗೆ ಮರುಕವಿದೆ. ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ, ಹಾಲಿ ಸಂಸದರಾಗಿದ್ದರೂ ಸುಮಲತಾ ಮತ್ತು ಮಂಗಳಾ ಅಂಗಡಿ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.

ಕಳೆದ ಬಾರಿ ನಾವು ಪಂಚಮಸಾಲಿ ಸಮುದಾಯವನ್ನು 2ಎ ಕ್ಯಾಟಗೆರಿಗೆ ಸೇರಿಸಬೇಕು ಎಂದು ಹೋರಾಟ ಮಾಡಿದಾಗ, ಇದೇ ಜಗದೀಶ್ ಶೆಟ್ಟರ್ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಕ್ಯಾಟಗೆರಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕ್, ಅರಭಾವಿಯಲ್ಲಿ ಮುನ್ನಡೆ ಗಳಿಸುವ ವಿಶ್ವಾಸ

ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ್ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ ಸಿಗುವ ವಿಶ್ವಾಸವಿದೆ. ಅತ್ಯಂತ ಅಚ್ಚರಿಯ ಫಲಿತಾಂಶ ಈ ಕ್ಷೇತ್ರಗಳಲ್ಲಿ ಬರಲಿದೆ ಎಂದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್; ಪಾಕ್‌ ಪರ ಘೋಷಣೆ ಕೇಸ್‌ ವಿವಾದಿತ ನಾಸಿರ್‌ ಹುಸೇನ್‌ಗೂ ಸ್ಥಾನ!

ಬೆಳಗಾವಿ ಧ್ವನಿಯಾಗಿ ಮೃಣಾಲ್ ಕೆಲಸ ಮಾಡುತ್ತಾನೆ

10 ವರ್ಷಗಳಿಂದ ಈ ಭಾಗದ ಸಂಸದರು ನರೇಂದ್ರ ಮೋದಿ ಹೆಸರು ಹೇಳಿಕೊಂಡು ಗೆದ್ದಿದ್ದಾಯ್ತು. 20 ವರ್ಷಗಳಿಂದ ಒಬ್ಬರೇ ಸಂಸದರು (ದಿವಂಗತ ಸುರೇಶ್ ಅಂಗಡಿ – Suresh Angadi) ಇದ್ದರೂ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೇನು? ಬೆಳಗಾವಿ ಇತಿಹಾಸದಲ್ಲೇ ಅತಿದೊಡ್ಡ ಪ್ರವಾಹ ಉಂಟಾಯಿತು. ಅಂತ ವೇಳೆ ನರೇಂದ್ರ ಮೋದಿ ಅವರ ಹತ್ತಿರ ಪ್ರವಾಹದ ಬಗ್ಗೆ ಚರ್ಚೆ ನಡೆಸಿದ್ದರಾ? ಮೋದಿ ಹೆಸರು ಹೇಳಿಕೊಂಡು ವೋಟ್ ತೆಗೆದುಕೊಳ್ಳಲಿ, ಅದನ್ನು ಬೇಡ ಅನ್ನಲ್ಲ. ಆದರೆ, ಜನರ ಸಂಕಷ್ಟಕ್ಕೆ ಸ್ಪಂದಿಸದ ಕಿವುಡರಾಗಿ, ಮೂಕರಾಗಿರುವ ಸಂಸದರು ನಮಗೆ ಬೇಕಾ? ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ ಬೇಕು ಅಂತ ಜನ ಅಪೇಕ್ಷೆಪಡುತ್ತಾ ಇದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಶೆಟ್ಟರ್‌ಗೆ ಬೆಳಗಾವಿ ಹೇಗೆ ಕರ್ಮಭೂಮಿ ಆಗುತ್ತೆ?

6 ಬಾರಿ ಹುಬ್ಬಳ್ಳಿಯಲ್ಲಿ ಗೆದ್ದು, ಇಲ್ಲಿ ಬಂದು ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳಿದರೆ ಯಾರು ನಂಬುತ್ತಾರೆ? ಜಗದೀಶ್‌ ಶೆಟ್ಟರ್ ಅವರಿಗೆ ತಮ್ಮ ಮನೆ ವಿಳಾಸ ಗೊತ್ತಿದೆಯೇ? ಮಂಗಳಾ ಅಂಗಡಿ ಅವರು ಪಕ್ಷ ಮೊದಲು, ಕುಟುಂಬ ಆಮೇಲೆ ಅಂತ ಹೇಳ್ತಾ ಇದ್ದಾರೆ. ಹಾಗಾದರೆ ಬೀಗರಿಗೆ ಏಕೆ ಟಿಕೆಟ್ ಕೊಡಿಸಿದರು? ಬೀಗರ ಕುಟುಂಬ ಬಿಟ್ಟು ಬೆಳಗಾವಿಯಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಯಾರೂ ಇರಲಿಲ್ಲವೇ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.

Exit mobile version