ಕಲಬುರಗಿ: ಲೋಕಸಭೆ ಚುನಾವಣೆ (Lok Sabha Election 2024) ಹೊತ್ತಿನಲ್ಲೇ ಕಲಬುರಗಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ (Malikayya Guttedar) ಘರ್ ವಾಪ್ಸಿಗೆ ಸಿದ್ಧತೆ ನಡೆಸಿದ್ದಾರೆ. ಅವರು ಶುಕ್ರವಾರ (ಏಪ್ರಿಲ್ 18) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ (KPCC Office) ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಅಫಜಲಪುರ ಶಾಸಕ ಎಂ.ವೈ. ಪಾಟೀಲ್‌ಗೆ ದೂರವಾಣಿ ಕರೆ ಹೋಗಿದೆ. ಅಲ್ಲಿ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರ ಒಪ್ಪಿಗೆಯನ್ನೂ ಪಡೆದುಕೊಳ್ಳಲಾಗಿದೆ. ಹೀಗಾಗಿ ಅವರ ಪಕ್ಷ ಸೇರ್ಪಡೆಗೆ ಯಾವುದೇ ವಿರೋಧ ಎದುರಾಗಿಲ್ಲ ಎನ್ನಲಾಗಿದೆ.
ಏಕೆ ಈ ನಿರ್ಧಾರ?
ಸಹೋದರ ನಿತಿನ್ ಗುತ್ತೇದಾರ್ ಹಾಗೂ ಮಾಲೀಕಯ್ಯ ಗುತ್ತೇದಾರ್ ನಡುವಿನ ಸಂಬಂಧ ಮೊದಲಿನಿಂದಲೂ ಎಣ್ಣೆ ಶೀಗೇಕಾಯಿ ಆಗಿತ್ತು. ಒಬ್ಬರು ಒಂದು ಪಕ್ಷದಲ್ಲಿದ್ದರೆ ಮತ್ತೊಬ್ಬರು ಆ ಪಕ್ಷವನ್ನು ತೊರೆಯುತ್ತಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಿತಿನ್ ಗುತ್ತೇದಾರ್ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಇದರಿಂದ ಮಾಲೀಕಯ್ಯ ಗುತ್ತೇದಾರ್ ಸೋಲು ಕಾಣಬೇಕಾಯಿತು. ಈಗ ಈಚೆಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿತಿನ್ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದು ಮಾಲೀಕಯ್ಯ ಅವರ ಕಣ್ಣನ್ನು ಕೆಂಪಗಾಗಿಸಿತ್ತು.
ಬಹಿರಂಗ ಅಸಮಾಧಾನ
ನಿತಿನ್ ಬಿಜೆಪಿ ಸೇರ್ಪಡೆ ಸಂಬಂಧ ಮಾಲೀಕಯ್ಯ ಗುತ್ತೇದಾರ್ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. 2018ರ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಗೆಲ್ಲಬೇಕಿತ್ತು. ನಿತಿನ್ ಮತ್ತು ಕೆಲವು ಬಿಜೆಪಿ ಮುಖಂಡರು ನನಗೆ ಮೋಸ ಮಾಡಿದರು. 2023ರಲ್ಲಿ ನಿತಿನ್ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ನನ್ನನ್ನು ಸೋಲಿಸಿದ್ದಾನೆ. ಈಗ ಆತನಿಂದ ಕೋಟಿ ಕೋಟಿ ಹಣ ಪಡೆದು ಅವನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ: Lok Sabha Election 2024: ಈ ಬಾರಿ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ
ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮಾಲಿಕಯ್ಯ ಗುತ್ತೇದಾರ್ ಈ ಹಿಂದೆ ಸಚಿವರೂ ಸಹ ಆಗಿದ್ದವರು. ಅಲ್ಲದೆ, ಜಿಲ್ಲೆಯಲ್ಲಿ ಅವರದ್ದೇ ಆದ ಪ್ರಭಾವವೂ ಇದೆ. ಈಗ ಅವರ ವಿರೋಧಿ ನಿತಿನ್ ಗುತ್ತೇದಾರ್ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಅವರನ್ನು ಸೆಳೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಅದಕ್ಕೆ ಸರಿಯಾಗಿ ಮಾಲೀಕಯ್ಯ ಸಹ ಕಾಂಗ್ರೆಸ್ ಕದವನ್ನು ತಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಆ ಭಾಗದ ಶಾಸಕ ಎಂ.ವೈ. ಪಾಟೀಲ್ ಅವರ ಒಪ್ಪಿಗೆಯನ್ನೂ ಪಡೆದುಕೊಂಡಿದ್ದಾರೆ. ಈಗ ಮಾಲೀಕಯ್ಯ ಅವರ ಸೇರ್ಪಡೆ ಕಾಂಗ್ರೆಸ್‌ಗೆ ಯಾವ ರೀತಿಯಾಗಿ ಲಾಭ ತಂದುಕೊಡಲಿದೆ ಎಂಬ ಲೆಕ್ಕಾಚಾರಗಳು ರಾಜಕೀಯ ಪಡೆಸಾಲೆಗಳಲ್ಲಿ ನಡೆಯುತ್ತಿವೆ.