ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಭಾನುವಾರದಿಂದಲೇ ಹಲವು ಕಡೆ ರೋಡ್ ಶೋ ನಡೆಸಿದ್ದ ಸಿಎಂ, ಸೋಮವಾರವೂ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪ್ರಚಾರದ ವೇಳೆ ಗನ್ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಸಿಎಂಗೆ ಹಾರ ಹಾಕಿ ತೆರಳಿದ್ದಾನೆ. ಇದು ಆತಂಕಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಭೈರಸಂದ್ರದಲ್ಲಿ ಪ್ರಚಾರ ನಡೆಸುವ ವೇಳೆ ಈ ಘಟನೆ ನಡೆದಿದೆ. ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದ ವ್ಯಕ್ತಿಯೊಬ್ಬರ ಕ್ಯಾಂಟರ್ ಏರಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದಾನೆ. ಬಳಿಕ ಅಲ್ಲಿಂದ ತೆರಳಿದ್ದಾನೆ.
ಆದರೆ, ಆ ವ್ಯಕ್ತಿ ಯಾರು? ಅವನ ಬಳಿ ಇದ್ದಿದ್ದು ಲೈಸೆನ್ಸ್ ಹೊಂದಿರುವ ಗನ್ ಆಗಿತ್ತೇ? ಆತ ಕಾಂಗ್ರೆಸ್ ಕಾರ್ಯಕರ್ತನಾ? ಮುಖಂಡನಾ? ಅಥವಾ ಇನ್ಯಾವುದೋ ವ್ಯಕ್ತಿಯಾ? ಎಂಬ ಪ್ರಶ್ನೆ ಮೂಡಿತ್ತು. ನಂತರ ಆತ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಎಂದು ತಿಳಿದುಬಂದಿದೆ. 5 ವರ್ಷದ ಹಿಂದೆ ರಿಯಾಜ್ ಮೇಲೆ ಕೊಲೆ ಯತ್ನ ಆಗಿತ್ತು ಎನ್ನಲಾಗಿದೆ. ಹೀಗಾಗಿ ಲೈಸೆನ್ಸ್ ಪಡೆದು ಗನ್ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಭದ್ರತಾ ವೈಫಲ್ಯ
ಈ ಘಟನೆಯನ್ನು ಪೊಲೀಸ್ ಭದ್ರತಾ ವೈಫಲ್ಯ ಎಂದೇ ಹೇಳಲಾಗುತ್ತಿದೆ. ಗನ್ ಇಟ್ಟುಕೊಂಡಿದ್ದ ಒಬ್ಬ ವ್ಯಕ್ತಿಯನ್ನು ಸಿಎಂ ಬಳಿ ಹೋಗಲು ಹೇಗೆ ಬಿಡಲಾಗುತ್ತದೆ? ಎಂಬ ಪ್ರಶ್ನೆಗಳು ಎದುರಾಗಿತ್ತು.
ರಿಯಾಜ್ ಗನ್ ಮುಟ್ಟುಗೋಲು
ಎಲೆಕ್ಷನ್ ಸಮಯದಲ್ಲಿ ಗನ್ ಸರೆಂಡರ್ ಮಾಡಿರದ ರಿಯಾಜ್, ತಮಗೆ ಜೀವಭಯವಿದೆ ಎಂದು ಅರ್ಜಿ ನೀಡಿ ಅನುಮತಿಯನ್ನು ಪಡೆದುಕೊಂಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗುವಾಗ ಗನ್ ತೆಗೆದುಕೊಂಡು ಹೋಗಬಾರದಿತ್ತು. Z ಸೆಕ್ಯುರಿಟಿ ಭದ್ರತೆ ಸಿಎಂಗೆ ಇದೆ. ಹೀಗಾಗಿ ಸಿಎಂ ಬಳಿ ಬರುವವರನ್ನು ತಪಾಸಣೆ ನಡೆಸಿ ಹತ್ತಿರ ಬಿಡಬೇಕಿತ್ತು. ಗನ್ ಅನ್ನು ರಿಯಾಜ್ ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದಾರೆ. ಹೀಗಾಗಿ ರಿಯಾಜ್ ಗನ್ ಮುಟ್ಟುಗೋಲು ಹಾಕಿಕೊಳ್ಳುವಂತೆ ದಕ್ಷಿಣ ವಿಭಾಗ ಡಿಸಿಪಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮೇಕೆದಾಟು ಯೋಜನೆಗೆ ಆಗಬೇಕಿದ್ದರೆ ಸೌಮ್ಯಾ ರೆಡ್ಡಿ ಗೆಲ್ಲಬೇಕು: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸಿಗಬೇಕೆಂದರೆ ಮೇಕೆದಾಟು ಯೋಜನೆ ಜಾರಿ ಆಗಬೇಕು. ಕೇಂದ್ರದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಸಿಗಬೇಕಾದರೆ ಬೆಂಗಳೂರು ಉತ್ತರ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ಗೆಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಎರಡನೇ ದಿನ ಬಿರುಸಿನ ರೋಡ್ ಶೋ ನಡೆಸಿದ ಮುಖ್ಯಮಂತ್ರಿಗಳು ಸಂಸದ ತೇಜಸ್ವಿ ಸೂರ್ಯ ಅವರ ಸರಣಿ ವೈಫಲ್ಯಗಳನ್ನು ಜನರ ಮುಂದಿಟ್ಟು ಸೌಮ್ಯಾ ರೆಡ್ಡಿ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಬೆಂಗಳೂರು ದಕ್ಷಿಣದಲ್ಲಿ ಕುಡಿಯುವ ನೀರಿಗೆ ಕಾವೇರಿ ಸಂಪರ್ಕ ಇನ್ನಷ್ಟು ಆಗಬೇಕಿದೆ. ಈಗ ಆಗಿರುವುದು ಶೇ. 60ರಷ್ಟು ಮಾತ್ರ. ಕಾವೇರಿ 5ನೇ ಹಂತವನ್ನು ಜಾರಿ ಮಾಡುತ್ತಿದ್ದೇವೆ. ಅದು ಜಾರಿಯಾದರೆ ಸ್ವಲ್ಪ ಅನುಕೂಲವಾಗಲಿದೆ. ಮೇಕೆದಾಟು ಯೋಜನೆ ಜಾರಿಯಾದರೆ ನೀರಿನ ಸಮಸ್ಯೆ ಆಗುವುದಿಲ್ಲ. ಈ ಬಿಜೆಪಿಯವರು ಮೇಕೆದಾಟು ಯೋಜನೆ ಬಗ್ಗೆ ಮಾತನಾಡಲಿಲ್ಲ. ಈ ಬಾರಿ ಬಿಜೆಪಿಯನ್ನು ಸೋಲಿಸಲೇಬೇಕು. ಆದ್ದರಿಂದ ಮೇಕೆದಾಟು ಯೋಜನೆ ಜಾರಿಯಾಗಬೇಕಾದರೆ ಸೌಮ್ಯಾ ರೆಡ್ಡಿ ಅವರ ಗೆಲುವು ಅತ್ಯಗತ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸೌಮ್ಯಾ ರೆಡ್ಡಿಗೆ ನೀವು ನ್ಯಾಯ ಕೊಡಿ
ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಸೌಮ್ಯಾ ರೆಡ್ಡಿಗೆ ಅನ್ಯಾಯವಾಗಿದೆ. ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಜನತಾ ನ್ಯಾಯಾಲಯದಲ್ಲಿ ನೀವು ನ್ಯಾಯ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಬರ ಪರಿಹಾರ ಕೊಡಲಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಕೊಟ್ಟಿಲ್ಲ. ಸೌಮ್ಯಾ ರೆಡ್ಡಿಗೆ ನೀವು ಆಶೀರ್ವಾದ ಮಾಡಿದರೆ ಲೋಕಸಭೆಯಲ್ಲಿ ರಾಜ್ಯದ ಪರ ಮಾತನಾಡುತ್ತಾರೆ. ಅದಕ್ಕಾಗಿ ನೀವು ಸೌಮ್ಯಾ ರೆಡ್ಡಿಗೆ ಮತ ಹಾಕಬೇಕು. ಜಯನಗರ ಅಭಿವೃದ್ಧಿ ಆಗಬೇಕು ಅಂದರೆ ಸೌಮ್ಯಾ ರೆಡ್ಡಿಯನ್ನು ನೀವು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದವರು ನುಡಿದಂತೆ ನಡೆದಿದ್ದಾರಾ?
ಕೇಂದ್ರ ಸರ್ಕಾರದವರು ನುಡಿದಂತೆ ನಡೆದಿದ್ದಾರಾ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಹೇಳಿದರು. ಆ ಹಣವನ್ನು ಇದುವರೆಗೆ ಹಾಕಿದರಾ? ಅಚ್ಚೇ ದಿನ್ ಅಂದ್ರು ಆಯ್ತಾ..? ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು. ಉದ್ಯೋಗ ಸೃಷ್ಟಿ ಆಯ್ತಾ? ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿಕೊಂಡರು. ಅದು ಆಯ್ತಾ? ಪ್ರೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಯ್ತಾ? ಅವರು ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ನಾವು ನುಡೆದಿದ್ದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 8 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ನಮಗೇ ನೀವು ಆಶೀರ್ವಾದ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.