Site icon Vistara News

Lok Sabha Election 2024: ‌ಡಿಕೆಶಿ ಸುಳ್ಳು ಫ್ಯಾಕ್ಟರಿಯ ಮೇಟಿ ಎಂದ ಎಚ್‌ಡಿಕೆ; ಶುರುವಾಯ್ತು ಮೇಕೆದಾಟು ವಾರ್!

Lok Sabha Election 2024 Mekedatu war between DK Shivakumar and HD Kumaraswamy‌

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯದಲ್ಲೀಗ “ಮೇಕೆದಾಟು” (Mekedatu Project) ಗಲಾಟೆ ಹೆಚ್ಚಾಗಿದೆ. ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮೇಕೆದಾಟು, ಮಹದಾಯಿ ಯೋಜನೆಯನ್ನು ಏಕೆ ಮಾಡಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಕೇಳಿದ ಪ್ರಶ್ನೆಗೆ ಈಗ ಎಚ್‌ಡಿಕೆ ತಿರುಗೇಟು ನೀಡಿದ್ದಾರೆ. ಜನ ನಿಮ್ಮ ಕೈಯಲ್ಲಿ ಅಧಿಕಾರ ಕೊಟ್ಟಿದ್ದಾರೆ. ಈಗ ನೀವು ಮಾಡಬಹುದಲ್ಲವೇ? ನಿಮ್ಮಲ್ಲಿ ಶಕ್ತಿ ಇಲ್ಲವೇ? ಸುಮ್ಮನೆ ಏಕೆ ಹಳೆಯದನ್ನು ಕೆದಕುತ್ತೀರಿ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಡಿಸಿಎಂ ಡಿ‌.ಕೆ. ಶಿವಕುಮಾರ್ ವಿರುದ್ಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿ ಕಿಡಿಕಾರಿರುವ ಎಚ್‌.ಡಿ. ಕುಮಾರಸ್ವಾಮಿ, ಮೇಕೆದಾಟು ನಿರ್ಮಾಣಕ್ಕೆ 2018-19ರಲ್ಲೇ ಸಮಗ್ರ ಯೋಜನಾ ವರದಿ (DPR) ಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ಅಂದಿನ ನನ್ನ ಸರ್ಕಾರ. ಆ ಸರ್ಕಾರದಲ್ಲಿ ನೀವು ಸಚಿವರಿದ್ದಿರಿ. ಈ ಮಾಹಿತಿಯೇ ನಿಮಗಿಲ್ಲವೆಂದರೆ ಹೇಗೆ? ಎಂದೂ ತಿವಿದಿದ್ದಾರೆ.

ಇದನ್ನೂ ಓದಿ: Hanuman Chalisa: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ FIR;‌ ಪಾಕಿಸ್ತಾನವನ್ನು ಆಳುತ್ತಿದ್ದೀರಾ ಎಂದು ಸಿಎಂಗೆ ಜೋಶಿ ಪ್ರಶ್ನೆ

ಎಚ್‌ಡಿಕೆ ಪೋಸ್ಟ್‌ನಲ್ಲೇನಿದೆ?

ಅಧಿಕಾರ ಇರುವುದು ನಿಮ್ಮ ಕೈಯ್ಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೇ. ಕೆಲಸ ಮಾಡಿ ಎಂದರೆ ಹಳೆಯದನ್ನು ಕೆದಕುತ್ತಿದ್ದೀರಿ, ಯಾಕೆ? ಜನರು ಕೊಟ್ಟ ಪೆನ್ನು-ಪೇಪರ್ ಹಿಡಿದುಕೊಳ್ಳುವ ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತಾ ಡಿ.ಕೆ. ಶಿವಕುಮಾರ್‌ ಅವರೇ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ?

ಅಧಿಕಾರ ಇದ್ದಾಗಲೇ ಕುಮಾರಸ್ವಾಮಿ ಅವರು ಮೇಕೆದಾಟು ಮಾಡಲಿಲ್ಲ ಎಂದು ಹೇಳಿದ್ದೀರಿ! ಕುಮಾರಸ್ವಾಮಿ ಏನೂ ಮಾಡಿಯೇ ಇಲ್ಲವೆಂದು ಕಟ್ಟುಕಥೆ ಕಟ್ಟಿದ್ದೀರಿ. ಎಷ್ಟಾದರೂ ನೀವು ಸುಳ್ಳು ಫ್ಯಾಕ್ಟರಿಯ ಮೇಟಿ! ಮೇಕೆದಾಟುಗಾಗಿ ನಾನು ಏನೆಲ್ಲ ಮಾಡಿದೆ ಎನ್ನುವುದು ನಿಮಗೆ ಹೇಗೆ ಗೊತ್ತಾದೀತು? ಸತ್ಯಕ್ಕೂ ನಿಮಗೂ ಎಣ್ಣೆಶೀಗೇಕಾಯಿ ಸಂಬಂಧ! ಹೌದಲ್ಲವೇ?

ಸಮಗ್ರ ಯೋಜನಾ ವರದಿ ಕೊಟ್ಟಿದ್ದೇ ನಾನು!

ಮೇಕೆದಾಟು ನಿರ್ಮಾಣಕ್ಕೆ 2018-19ರಲ್ಲೇ ಸಮಗ್ರ ಯೋಜನಾ ವರದಿ (DPR) ಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ಅಂದಿನ ನನ್ನ ಸರ್ಕಾರ. ಆ ಸರ್ಕಾರದಲ್ಲಿ ನೀವು ಸಚಿವರಿದ್ದಿರಿ. ಈ ಮಾಹಿತಿಯೇ ನಿಮಗಿಲ್ಲವೆಂದರೆ ಹೇಗೆ? ಇದೆಂಥ ವಿಧಿ!? ಹಾಗಾದರೆ, ಜನರು ಕೊಟ್ಟ ಪೆನ್ನು-ಪೇಪರ್ ಗತಿ ಏನು?

2006-2007ರಲ್ಲೇ ಮಹದಾಯಿ ಯೋಜನೆಗೆ ಸಂಪುಟದಲ್ಲಿಯೇ ಒಪ್ಪಿಗೆ ನೀಡಿ, 100 ಕೋಟಿ ರೂಪಾಯಿ ಮಂಜೂರು ಮಾಡಿ ಆಗಲೇ ಶಂಕುಸ್ಥಾಪನೆಯನ್ನೂ ನೆರವೇರಿಸಲಾಯಿತು. ಆಮೇಲೆ 5 ವರ್ಷ ನಿಮ್ಮದೇ ಕಾಂಗ್ರೆಸ್‌ ಸರ್ಕಾರ ಇತ್ತಲ್ಲಾ..? ಏನ್ ಮಾಡ್ತಾ ಇದ್ದಿರಿ ಶಿವಕುಮಾರ್ ಅವರೇ? ಆಗ ಯಾಕೆ ತಾವು ನುಡಿದಂತೆ ನಡೆಯಲಿಲ್ಲ?

ಗಡ್ಕರಿಯನ್ನು 10 ಸಲ ಭೇಟಿಯಾಗಿದ್ದೆ

ಮೇಕೆದಾಟು, ಮಹದಾಯಿ ಸೇರಿ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ನಾನು ಮುಖ್ಯಮಂತ್ರಿಯಾಗಿ ಆಯಾ ಇಲಾಖೆಯ ಕೇಂದ್ರ ಸಚಿವರನ್ನು ಎಷ್ಟು ಸಲ ಭೇಟಿಯಾಗಿದ್ದೆ ಎನ್ನುವ ಮಾಹಿತಿಯೂ ನಿಮಗಿಲ್ಲವಲ್ಲ? ನಿತಿನ್ ಗಡ್ಕರಿ ಅವರೊಬ್ಬರನ್ನೇ ನಾನು 10 ಸಲ ಭೇಟಿಯಾಗಿದ್ದೆ.

90ರ ಇಳಿವಯಸ್ಸಿನಲ್ಲಿಯೂ ಎಚ್‌.ಡಿ. ದೇವೇಗೌಡರು ಸಂಸತ್ತಿನ ಒಳ-ಹೊರಗೆ ರಾಜ್ಯಕ್ಕಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಅವರು ಮೇಕೆದಾಟು ಬಗ್ಗೆ ದನಿ ಎತ್ತಿದರೆ, ರಾಜ್ಯದವರೇ ಆದ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮೌನವ್ರತ ಮಾಡುತ್ತಿದ್ದರು! ನಿಮ್ಮ ಪಕ್ಷದ ಉಳಿದ ಸದಸ್ಯರು ನಿಮ್ಮ ಅಧ್ಯಕ್ಷರು ಮಾಡಿದ್ದನ್ನೇ ಚಾಚೂ ತಪ್ಪದೇ ಪಾಲಿಸುತ್ತಿದ್ದರು!

ಮೌನಂ ಶರಣಂ ಗಚ್ಛಾಮಿ

ಕಾಂಗ್ರೆಸ್, ಡಿಎಂಕೆ ಅಣ್ತಮ್ಮ ಪಕ್ಷಗಳಲ್ಲವೇ? ಮೇಕೆದಾಟು ಮಾಡಲು ಕರ್ನಾಟಕದವರಿಗೆ ಬಿಡೋದೇ ಇಲ್ಲ ಎಂದು ಡಿಎಂಕೆ ಚುನಾವಣೆ ಪ್ರಣಾಳಿಕೆಯಲ್ಲೇ ಘೋಷಣೆ ಮಾಡಿದೆ. ಇದಕ್ಕೂ ನಿಮ್ಮದು, ನಿಮ್ಮ ಪಕ್ಷದ್ದು ‘ಮೌನಂ ಶರಣಂ ಗಚ್ಛಾಮಿʼ!!

ನಿಮ್ಮ ಸರ್ಕಾರದಲ್ಲಿ ಏನೇನ್ ನಡೀತಿದೆ ಶಿವಕುಮಾರ್ ಅವರೇ? ಪೆನ್ನು ಪೇಪರ್ ಕೂಡ ‘ಮೌನಂ ಶರಣಂ ಗಚ್ಛಾಮಿ’ ಎನ್ನುತ್ತಿವೆಯಾ.. ಹೇಗೆ?” ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಅಧಿಕಾರ ಇದ್ದಾಗ ಎಚ್‌ಡಿಕೆ ಯಾಕೆ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದ ಡಿಕೆಶಿ

ಮೇಕೆದಾಟು ಯೋಜನೆ ವಿಚಾರದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ಶಿವಕುಮಾರ್‌, ಇಲ್ಲಿನ ಜನರ ಕಷ್ಟಕ್ಕೆ ಪರಿಹಾರ ನೀಡಿ ಧೈರ್ಯ ತುಂಬುವವರು ನಾವು. ಬೇರೆ ಅಭ್ಯರ್ಥಿಗಳು ನಮ್ಮಂತೆ ಜನರಿಗೆ ಅಭಯ ನೀಡುವುದಿಲ್ಲ. ಕುಮಾರಸ್ವಾಮಿ ಅವರು ಈಗ ಮೇಕೆದಾಟು, ಮಹದಾಯಿ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕುಟುಕಿದ್ದರು.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್‌ ಶೋ

ಅಧಿಕಾರ ಇದ್ದಾಗ ಈ ವಿಚಾರದಲ್ಲಿ ಏನೂ ಮಾಡದವರು ಈಗ ಏನು ಮಾಡುತ್ತಾರೆ. ನಾನು ಮೇಕೆದಾಟು ಪಾದಯಾತ್ರೆ ಮಾಡುವಾಗ ಅವರು ಕೊಟ್ಟಿರುವ ಹೇಳಿಕೆ ನೋಡಿ. ನಮ್ಮ ಪಾದಯಾತ್ರೆ ಸಂದರ್ಭದಲ್ಲಿ ಕಬಾಬ್ ತಿನ್ನೋಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದ ಕುಮಾರಸ್ವಾಮಿ ಅವರು ಈಗ ಪಾದಯಾತ್ರೆ ಬಗ್ಗೆ ಮಾತಾಡುತ್ತಿದ್ದಾರೆ. ಮಂಡ್ಯಕ್ಕೆ ಬಂದ ನಂತರ ಅವರಿಗೆ ಬಿಸಿ ತಟ್ಟಿರುವಂತೆ ಕಾಣುತ್ತಿದೆ. ನಾವು ಹೋರಾಟ ಮಾಡಿದ್ದು ರಾಜ್ಯದ ಜನತೆಗಾಗಿ. ರಾಜಕಾರಣದಲ್ಲಿ ಅದು ನಮ್ಮ ಬದ್ಧತೆ. ಅದನ್ನು ಅವರಿಂದ ಸಹಿಸಲು ಆಗಲಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ಕಾವೇರಿ ಜಲಾನಯನ ಪ್ರದೇಶದ ಜನರಿಗೆ, ಬೆಂಗಳೂರು ಜನರಿಗೆ ಕುಡಿಯುವ ನೀರು ಪೂರೈಸಲು ನಾನು ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ನಾನು ಕೊಟ್ಟ ಮಾತಿನಂತೆ ನಡೆಯುತ್ತೇನೆ ಎಂದು ಜನರಿಗೆ ನಂಬಿಕೆ ಇದೆ. ಅವರ ನಂಬಿಕೆಗೆ ತಕ್ಕಂತೆ ನಡೆಯುತ್ತೇನೆ. ಇದು ಮತದಾರರಿಗೆ ಮನವರಿಕೆಯಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು.

Exit mobile version