Site icon Vistara News

Lok Sabha Election 2024: ನನ್ನನ್ನು ಅನುಮಾನಿಸಿದರೆ ಮುಂದಾಗುವುದಕ್ಕೆ ಜವಾಬ್ದಾರನಲ್ಲ; ಸುಧಾಕರ್‌ಗೆ ವಿಶ್ವನಾಥ್‌ ವಾರ್ನಿಂಗ್!

Lok Sabha Election 2024 MLA SR Vishwanath warns Dr K Sudhakar

ಯಲಹಂಕ: ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ (Chikkaballapur Lok Sabha constituency) ಟಿಕೆಟ್‌ ಬೇಕು ಎಂದು ನಾವು ಆಸೆಪಟ್ಟಿದ್ದು ನಿಜ. ಟಿಕೆಟ್ ಸಿಗದಿದ್ದಾಗ ಯಲಹಂಕ ಕಾರ್ಯಕರ್ತರು ಪ್ರತಿಭಟನೆ ಮಾಡಿ ಡಾ. ಕೆ‌. ಸುಧಾಕರ್ (Dr K Sudhakar) ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರೂ ನಿಜ. ಆದರೆ, ಅದನ್ನೇ ಇಟ್ಟುಕೊಂಡು ನನ್ನ ಹಾಗೂ ನನ್ನ ಕಾರ್ಯಕರ್ತರ ಮೇಲೆ ಅನುಮಾನ ಪಡುವ ಅಗತ್ಯವಿಲ್ಲ. ಈ ಬಗ್ಗೆ ಹಿರಿಯ ನಾಯಕರ ಬಳಿ ಸುಧಾಕರ್‌ ಹೇಳಿಕೊಂಡಿದ್ದು ಗೊತ್ತಾಗಿದೆ. ಇನ್ನು ಇದು ಮುಂದುವರಿಯುವುದು ಬೇಡ. ನೀವು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ, ನಮ್ಮ ವಿಶ್ವಾಸ ನಿಮಗಿರುತ್ತದೆ. ಇಲ್ಲವಾದರೆ ಮುಂದೆ ಆಗುವ ಆಗುಹೋಗುಗಳಿಗೆ ನಾನು ಜವಾಬ್ದಾರನಲ್ಲ ಎಂದು ಶಾಸಕ ಎಸ್.ಆರ್.‌ ವಿಶ್ವನಾಥ್‌ (SR Vishwanath) ಅವರು ಸುಧಾಕರ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಯಲಹಂಕದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮಾತನಾಡಿದ ಎಸ್.ಆರ್.‌ ವಿಶ್ವನಾಥ್‌, ನನ್ನ ಮೇಲೆ ಅನುಮಾನಪಡುವ ಅಗತ್ಯವಿಲ್ಲ. ಟಿಕೆಟ್ ಸಿಗದಿದ್ದಾಗ ಯಲಹಂಕ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದನ್ನೇ ಮನಸ್ಸಿನಲ್ಲಿಟ್ಟುಕೊಳ್ಳುವುದು ಬೇಡ. ಈಗಾಗಲೇ ಬಿಜೆಪಿಯ ಹಿರಿಯ ನಾಯಕರಿಗೆ ಈ ಬಗ್ಗೆ ಸುಧಾಕರ್‌ ಹೇಳಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ಇದು ಮುಂದುವರಿಯುವುದು ಬೇಡ. ನಾವು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.

ವಿಶ್ವಾಸ ಕೊಟ್ಟು ಪಡೆಯಿರಿ!

ಚಿಕ್ಕಬಳ್ಳಾಪುರ ಕ್ಷೇತ್ರದ ಗೌರಿಬಿದನೂರು, ಬಾಗೇಪಲ್ಲಿ,, ಚಿಕ್ಕಬಳ್ಳಾಪುರದಲ್ಲಿ ಕೆಲವು ನಾಯಕರನ್ನು ಭೇಟಿ ಮಾಡಬೇಕು. ಅವರ ಬಳಿ ಮುಂದೆಯೂ ನಮಗೆ ಬೆಂಬಲ ಕೊಡಿ ಎಂದು‌ ಕೇಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಯಲಹಂಕದಿಂದ ಹತ್ತು ಸಾವಿರ ಜನರನ್ನು ಕರೆದುಕೊಂಡು ಹೋಗಲಾಗುವುದು. ಪ್ರಧಾನಿ ಮೋದಿ ಅವರ ಹೆಸರನ್ನು ಹೇಳಿದರೆ ಮಾತ್ರವೇ ಮತಗಳು ಬೀಳುತ್ತವೆ. ಕೆಲವರ ಹೆಸರು ಹೇಳಿ ಮತ ಬೀಳದಿದ್ದಾಗ ಕೆಲವರನ್ನು ಟಾರ್ಗೆಟ್ ಮಾಡಬಾರದು. ನನ್ನ ಮತ್ತು ನಮ್ಮ ಕಾರ್ಯಕರ್ತರ ಮೇಲಿನ‌ ಅನುಮಾನವನ್ನು ಬಿಡಬೇಕು. ಇಲ್ಲವಾದರೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ. ಡಾ. ಸುಧಾಕರ್ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ನಮ್ಮದೂ ವಿಶ್ವಾಸ ಇರುತ್ತದೆ. ಇಲ್ಲವಾದರೆ ಮುಂದೆ ಆಗುವ ಆಗುಹೋಗುಗಳಿಗೆ ನಾನು ಜವಾಬ್ದಾರನಲ್ಲ ಎಂದು ವಿಶ್ವನಾಥ್‌ ಅವರು ನೇರ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 14ರಂದು ಕರ್ನಾಟಕಕ್ಕೆ ಮೋದಿ; ಬೆಂಗಳೂರಲ್ಲಿ ರೋಡ್‌ ಶೋ

ನನಗೆ ಅಧಿಕಾರದ ದುರಾಸೆಯಿಲ್ಲ

ಈಗ ಕಾರ್ಯಕರ್ತರ ಸಭೆಗೆ ಹಾಜರಿದ್ದ ಸಾವಿರ ಸಂಖ್ಯೆಯ ಜನ 1 ಲಕ್ಷ ಮತದಾರರಿಗೆ ಸಮ. ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಪಕ್ಷ ಗೆಲ್ಲಬೇಕು. ನನ್ನ ಮಗ ಪಬ್ಲಿಕ್ ಅಡ್ಮಿನಿಷ್ಟ್ರೇಶನ್‌ನಲ್ಲಿ ಓದಿಕೊಂಡಿದ್ದ. ಹೀಗಾಗಿ ಅವನಿಗೆ ಟಿಕೆಟ್ ಸಿಗಲಿ ಎಂಬ ಆಸೆ ಇತ್ತು. ನನಗೆ ಅಧಿಕಾರದ ದುರಾಸೆಯಿಲ್ಲ. ನಲವತ್ತು ವರ್ಷ ರಾಜಕೀಯ ಜೀವನದಲ್ಲಿ ನಾನು ಯಾವುದಕ್ಕೂ ಆಸೆ ಪಟ್ಟಿಲ್ಲ. ಪದವಿ ಸಿಗದಿದ್ದಾಗ ನಾನು ಪಕ್ಷದ ವಿರುದ್ಧ ಒಂದು ಮಾತನ್ನೂ ಹೇಳಿಲ್ಲ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಪಕ್ಷ ಮತ್ತು ಹಿರಿಯ ನಾಯಕರು ಏನು ಹೇಳುತ್ತಾರೋ ಅದನ್ನು ನಾನು ಕೇಳುತ್ತೇನೆ ಎಂದು ಎಸ್.ಆರ್.‌ ವಿಶ್ವನಾಥ್‌ ಹೇಳಿದರು.

Exit mobile version