Site icon Vistara News

Lok Sabha Election 2024: ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಮತ್ತೊಂದು ನೀತಿ ಸಂಹಿತಿ ಉಲ್ಲಂಘನೆ ದೂರು

Jayaprakash Hegde cannot prepare report on panchamasali reservation in a hurry says jayaprakash hegde

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ (Udupi Chikkamagaluru Lok Sabha constituency) ಜಯಪ್ರಕಾಶ್ ಹೆಗ್ಡೆ (Jayaprakash Hegde) ವಿರುದ್ಧ ಲೋಕಸಭೆ ಚುನಾವಣೆ (Lok Sabha Election 2024) ನೀತಿ ಸಂಹಿತೆ (Model Code of Conduct) ಉಲ್ಲಂಘನೆ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.

ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿರ್ವ ಗ್ರಾಮದ ಜಾರಂದಾಯ ದೈವಸ್ಥಾನದ ಜಾತ್ರೆಗೆ ತೆರಳಿ ಚುನಾವಣಾ ಪ್ರಚಾರ ಸಭೆ ನಡೆಸಿರುವ ಆರೋಪ ಬಂದಿದೆ.

ರಾತ್ರಿ 11:30ರ ಸುಮಾರಿಗೆ ಜಯಪ್ರಕಾಶ್‌ ಹೆಗ್ಡೆ ಶಿರ್ವ ಜಾರಂದಾಯ ದೈವಸ್ಥಾನದ ಜಾತ್ರೆಗೆ ತೆರಳಿದ್ದರು. ಅಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದ್ದರು. ಈ ಬಗ್ಗೆ ಕಾಪು ಪ್ರೈಯಿಂಗ್ ಸ್ಕ್ವಾಡ್ ಟೀಮ್‌ಗೆ ಮಾಹಿತಿ ಬಂದಿತ್ತು. ಅದರಂತೆ ತಂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿತ್ತು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದೈವಸ್ಥಾನದಲ್ಲಿ ತಡರಾತ್ರಿಯವರೆಗೆ ಕಾರ್ಯಕ್ರಮ ನಡೆಸಿದ ಆರೋಪ, ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಗೆ ಪ್ರಭಾವ ಬೀರಿದ ಆರೋಪದಲ್ಲಿ ಪ್ರೈಯಿಂಗ್ ಸ್ಕಾಡ್ ನೀಡಿದ ದೂರಿನ‌ ಅನ್ವಯ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ದೂರು

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಅವರಿಗೆ ಹಿಂದಿ, ಇಂಗ್ಲಿಷ್ ಬರುವುದಿಲ್ಲ. ಅವರಿಗೆ ಮತ ಹಾಕಬೇಡಿ ಎಂಬ ಹೇಳಿಕೆ ನೀಡಿದ್ದಕ್ಕಾಗಿಯೂ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಮುಖ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಈ ಹಿಂದೆ ದೂರು ನೀಡಿತ್ತು.

ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ, ವಕ್ತಾರ ಪ್ರಕಾಶ್, ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ್ ಕುಮಾರ್ ಜತೆಗಿದ್ದರು. ಜಯಪ್ರಕಾಶ್‌ ಹೆಗ್ಡೆ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.

ದೂರಿನಲ್ಲೇನಿದೆ?

“22.03.2024ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬ್ರಹ್ಮಾವರದಲ್ಲಿ ತಮ್ಮ ಚುನಾವಣಾ ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡುವಾಗ, ʼಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಕನ್ನಡ ಬಿಟ್ಟರೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ. ಅವರನ್ನು ಆಯ್ಕೆ ಮಾಡಿದರೆ ದೆಹಲಿಯಲ್ಲಿ ಕೆಲಸಗಳಾಗುವುದಿಲ್ಲʼ ಎಂದು ಹೇಳುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ.”

“ಸದರಿಯವರ ಹೇಳಿಕೆಯು ದಿನಾಂಕ: 23.03.2024ರ ಕನ್ನಡ ದಿನಪತ್ರಿಕೆಯಲ್ಲಿ “ಕೋಟಗೆ ಹಿಂದಿ, ಇಂಗ್ಲಿಷ್ ಬರಲ್ಲ, ಗೆಲ್ಲಿಸಬೇಡಿ” ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುತ್ತದೆ. ಸದರಿ ಹೇಳಿಕೆಯು ಭಾಷಾ ಸಾಮರಸ್ಯವನ್ನು ಹದಗೆಡಿಸುವ ಹಾಗೂ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವುದಲ್ಲದೆ ಪ್ರಾದೇಶಿಕ ಭಾಷೆಯ ಬಗ್ಗೆ ಅವಮಾನಕರ ಹೇಳಿಕೆಯಾಗಿರುತ್ತದೆ.”

“ಆದ್ದರಿಂದ ಭಾಷೆಯ ಹೆಸರಿನಲ್ಲಿ ಮತಯಾಚಿಸಿ ಪ್ರತಿಸ್ಪರ್ಧಿಯನ್ನು ಗೆಲ್ಲಿಸಬೇಡಿ ಎಂದು ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ” ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Exit mobile version