ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕೇಂದ್ರದ ನಾಯಕರು ಕರ್ನಾಟಕಕ್ಕೆ ಆಗಮಿಸಿ ಮತಬೇಟೆಯನ್ನು ಶುರು ಮಾಡಿದ್ದಾರೆ. ಈಗಾಗಲೇ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಬಂದು ಹೋಗಿದ್ದಾರೆ. ಇದೇ ಏಪ್ರಿಲ್ 20ಕ್ಕೆ ಮೋದಿ ಮತ್ತೊಮ್ಮೆ ಬರುವವರಿದ್ದಾರೆ. ಇನ್ನು ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 23 ಮತ್ತು 24ರಂದು ಎರಡು ದಿನ ರಾಜ್ಯದಲ್ಲಿ ಠಿಕಾಣಿ ಹೂಡಲಿದ್ದಾರೆ. ಇವರಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda), ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಅವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಚುನಾವಣಾ ಸಂಚಾಲಕ ಸುನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಏಪ್ರಿಲ್ 23 ಮತ್ತು 24ರಂದು ಎರಡು ದಿನಗಳ ಕಾಲ ರಾಜ್ಯಕ್ಕೆ ಅಮಿತ್ ಶಾ ಅವರು ಭೇಟಿ ನೀಡಲಿದ್ದಾರೆ. ಈ ಬಾರಿ ಮೊದಲಿಗೆ ಅವರು ಸಭೆ ನಡೆಸಲಿದ್ದಾರೆ. ಅಲ್ಲದೆ, ಸರಣಿ ರೋಡ್ ಶೋಗಳನ್ನು ನಡೆಸಲಿದ್ದಾರೆ ಎಂದು ಹೇಳಿದರು.
23ರಂದು ಬೆಳಗ್ಗೆ ಯಶವಂತಪುರದಲ್ಲಿ ರೋಡ್ ಶೋ ನಡೆಯಲಿದೆ. 12.30ಕ್ಕೆ ಯಲಹಂಕದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜನೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಮಹದೇವಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು.
ಏ. 24ಕ್ಕೆ ಚಿಕ್ಕಮಗಳೂರು, ತುಮಕೂರು, ಹುಬ್ಬಳ್ಳಿಯಲ್ಲಿ ರೋಡ್ ಶೋ!
ಏಪ್ರಿಲ್ 24ರಂದು ಅಮಿತ್ ಶಾ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ, ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ, ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಯೋಗಿ ರೋಡ್ ಶೋ
ಏಪ್ರಿಲ್ 24 ರಂದು ರಾಜ್ಯದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದು, ವಿವಿಧ ಕಡೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ರೋಡ್ ಶೋ, ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ, ಉಡುಪಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಏ. 21ಕ್ಕೆ ನಡ್ಡಾ, 24ಕ್ಕೆ ರಾಜನಾಥ್ ಸಿಂಗ್
ಏಪ್ರಿಲ್ 21 ರಂದು ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು 24 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 21 ಮತ್ತು ಏಪ್ರಿಲ್ 28 ರಂದು ಬಿಜೆಪಿ ವಿಶೇಷ ಚುನಾವಣಾ ಅಭಿಯಾನ ನಡೆಸುತ್ತಿದೆ. ” ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು” ಅಭಿಯಾನ ನಡೆಯುತ್ತದೆ. ಈಗಾಗಲೇ ಮನೆ ಮನೆಗೆ ಪ್ರಚಾರ ಕಾರ್ಯ ಆರಂಭವಾಗಿದೆ. ಮನೆಯಂಗಳದಲ್ಲಿ ಸಭೆಗಳು ಬಿರುಸಿನಿಂದ ನಡೆಯುತ್ತಿವೆ. ವಿಶೇಷ ಅಭಿಯಾನವನ್ನು ತೆಗೆದುಕೊಳ್ಳಲಾಗಿದೆ. ಮೋದಿ ಪರ ಪ್ರಚಾರವನ್ನು ತಮ್ಮ ಮನೆಯ ಸುತ್ತಮುತ್ತ, ಕೆಲಸ ಮಾಡುವ ಸ್ಥಳ, ವಾಕಿಂಗ್ ಜಾಗದಲ್ಲಿ ಒಂದು ಬದಿಯನ್ನು ಮೀಸಲಿಡಿ ಎಂದು ಕರೆ ಕೊಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್ ಸೇರಿದ ಕರಡಿ ಸಂಗಣ್ಣ; ಪಕ್ಷ ಸೇರ್ಪಡೆಗೆ ಲಕ್ಷ್ಮಣ ಸವದಿ ಕಾರಣ!
ಈ ಅಭಿಯಾನಕ್ಕಾಗಿ 15 ಲಕ್ಷ ಜನ ಕೆಲವು ಗಂಟೆಗಳ ಕಾಲ ತೊಡಗಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದ 14 ಕ್ಷೇತ್ರದಲ್ಲಿ 28 ಸಾವಿರ ಬೂತ್ ಬರಲಿದೆ. ಒಂದೊಂದು ಬೂತ್‌ಗಳಲ್ಲಿಯೂ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಮೊದಲ ಹಂತದ ಚುನಾವಣೆ ಸ್ಥಳದಲ್ಲಿ ಏಪ್ರಿಲ್ 21ರಂದು ಹಾಗೂ ಎರಡನೇ ಹಂತದ ಚುನಾವಣಾ ಸ್ಥಳದಲ್ಲಿ ಏ. 28ರಂದು ಅಭಿಯಾನವನ್ನು ಮಾಡುತ್ತಿದ್ದೇವೆ ಎಂದು ಸುನಿಲ್ ಕುಮಾರ್ ಹೇಳಿದರು. ಇದೇ ವೇಳೆ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಅಂಜಲಿ ನಿಂಬಾಳ್ಕರ್ ಹೇಳಿಕೆ ಬಗ್ಗೆ ಸಿಎಂ ನಿಲುವೇನು?
ಉತ್ತರ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಕರ್ನಾಟಕದ ಕೆಲ ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಇದರಲ್ಲಿ ನಿಮ್ಮ ನಿಲುವು ಏನು? ನೀವು ಹೇಳಬೇಕಿರೋದನ್ನು ಉತ್ತರ ಕನ್ನಡ ಅಭ್ಯರ್ಥಿ ಬಾಯಲ್ಲಿ ಹೇಳಿಸಿದ್ದೀರಾ? ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದ ಹಲವೆಡೆ ಹೆಚ್ಚು ಭದ್ರತೆ ನೀಡಬೇಕು ಎಂದು ಸುನಿಲ್ ಕುಮಾರ್ ಮನವಿ ಮಾಡಿದರು.