Site icon Vistara News

Lok Sabha Election 2024: ರಾಮ ನವಮಿ ಆಚರಣೆ; ಪಶ್ವಿಮ ಬಂಗಾಳದಲ್ಲಿ ಬಿಜೆಪಿ – ಟಿಎಂಸಿ ಮಧ್ಯೆ ವಾಗ್ವಾದ

Lok Sabha Election 2024

Lok Sabha Election 2024

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಜೋರಾಗಿದೆ. ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್‌ 19) ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಮಧ್ಯೆ ನಾಳೆ (ಏಪ್ರಿಲ್‌ 17) ರಾಮ ನವಮಿಯಂದು ಹೌರಾದಲ್ಲಿ ‘ಶೋಭಾ ಯಾತ್ರೆ’ ನಡೆಸುವುದಾಗಿ ತೃಣಮೂಲ ಕಾಂಗ್ರೆಸ್ (Trinamool Congress) ಮಂಗಳವಾರ ಘೋಷಿಸಿದೆ.

ಇತ್ತ ಪಶ್ಚಿಮ ಬಂಗಾಳದ ಬಾಲೂರ್ಘಾಟ್‌ನಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಬಿಜೆಪಿಯ ರಾಮ ನವಮಿಯ ಅಚರಣೆಗೆ ಅಡ್ಡಿಪಡಿಸಲು ಮತ್ತು ಸಿಎಎಯನ್ನು ವಿರೋಧಿಸಲು ಟಿಎಂಸಿ ಪ್ರಯತ್ನಿಸುತ್ತಿದೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಂಗಾಳದಲ್ಲಿ ರಾಮ ನವಮಿ ಆಚರಣೆಯನ್ನು ತಡೆಯಲು ಟಿಎಂಸಿ ಎಂದಿನಂತೆ ಪ್ರಯತ್ನಿಸಿದೆ ಎಂದು ಮೋದಿ ಹೇಳಿದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಟಿಎಂಸಿ ರಾಮ ನವಮಿಯಂದು ಶೋಭಾ ಯಾತ್ರೆ ನಡೆಸುವುದಾಗಿ ತಿಳಿಸಿದೆ. “ಹೌರಾ ಅಭ್ಯರ್ಥಿ ಪ್ರಸೂನ್ ಬ್ಯಾನರ್ಜಿ ಅವರೊಂದಿಗೆ ಪಕ್ಷದ ಸ್ಟಾರ್ ಪ್ರಚಾರಕರಾದ ಸಾಯೋನಿ ಘೋಷ್, ಅರೂಪ್ ರಾಯ್ ಮತ್ತು ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ ಮತ್ತಿತರರ ಸಮ್ಮುಖದಲ್ಲಿ ರಾಮ ನವಮಿಯ ಶೋಭಾ ಯಾತ್ರೆಯಲ್ಲಿ ಆಯೋಜಿಸಲಾಗಿದೆʼʼ ಎಂದು ಪಕ್ಷ ತಿಳಿಸಿದೆ.

ಹೌರಾ ನಗರದಲ್ಲಿ ರಾಮ ನವಮಿಯಂದು ಮೆರವಣಿಗೆ ನಡೆಸಲು ವಿಶ್ವ ಹಿಂದೂ ಪರಿಷತ್ (VHP)ಗೆ ಕೋಲ್ಕತ್ತಾ ಹೈಕೋರ್ಟ್ ಸೋಮವಾರ ಷರತ್ತುಬದ್ಧ ಅನುಮತಿ ನೀಡಿದೆ. ಹೌರಾದಲ್ಲಿ ವಿಶ್ವ ಹಿಂದೂ ಪರಿಷತ್‌ ನಡೆಸಲಿದ್ದ ರಾಮ ನವಮಿ ರ‍್ಯಾಲಿಯನ್ನು ನಿಷೇಧಿಸಲು ನಿರ್ದೇಶನ ನೀಡುವಂತೆ ಕೋರಿ ಟಿಎಂಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು ಎಂದು ಮೋದಿ ಟೀಕಿಸಿದ್ದಾರೆ.

“ಅಯೋಧ್ಯೆಯ ಭವ್ಯ ದೇವಾಲಯದಲ್ಲಿ ರಾಮ್ ಲಲ್ಲಾ ಸಿಂಹಾಸನಾರೋಹಣ ಮಾಡಿದ ಬಳಿಕ ಮೊದಲ ರಾಮ ನವಮಿ ಇದಾಗಿದೆ. ಟಿಎಂಸಿ ಎಂದಿನಂತೆ ಇಲ್ಲಿ ರಾಮನವಮಿ ಆಚರಣೆಯನ್ನು ತಡೆಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದೆ ಮತ್ತು ಹಲವು ಪಿತೂರಿಗಳನ್ನು ನಡೆಸಿದೆ. ಆದರೆ ಸತ್ಯ ಮಾತ್ರ ಗೆಲ್ಲುತ್ತದೆ. ಆದ್ದರಿಂದ ನ್ಯಾಯಾಲಯವು ಅನುಮತಿ ನೀಡಿದೆ ಮತ್ತು ನಾಳೆ ರಾಮ ನವಮಿ ಮೆರವಣಿಗೆಗೆ ಬೇಕಾದ ಸಿದ್ಧತೆ ನಡೆಸಲಾಗುವುದು. ಈ ಸಂದರ್ಭದಲ್ಲಿ ನಾನು ಬಂಗಾಳದ ನನ್ನ ಎಲ್ಲ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಮೆರವಣಿಗೆ ವೇಳೆ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಬಾರದು ಎಂದು ನ್ಯಾಯಮೂರ್ತಿ ಜಯ್ ಸೇನ್ ಗುಪ್ತಾ ಅವರು ನಿರ್ದೇಶನ ನೀಡಿದ್ದಾರೆ. ಗರಿಷ್ಠ 200 ಮಂದಿಯನ್ನು ಮೀರದಂತೆ ಮೆರವಣಿಗೆ ನಡೆಸಬೇಕು ಮತ್ತು ಐದು ಸ್ವಯಂಸೇವಕರು ಮೇಲ್ವಿಚಾರಣೆ ನಡೆಸಬೇಕು ಎಂದೂ ಸೂಚಿಸಿದ್ದಾರೆ.

ಇದನ್ನೂ ಓದಿ: BSP List: ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್‌ ಪತ್ನಿಗೂ ಟಿಕೆಟ್!

ಇತ್ತೀಚಿನ ವರ್ಷಗಳಲ್ಲಿ ಕೋಮು ಗಲಭೆಗಳಿಂದಾಗಿ ರಾಜ್ಯದಲ್ಲಿ ರಾಮನವಮಿ ರ‍್ಯಾಲಿಗಳು ಪ್ರಮುಖ ರಾಜಕೀಯ ವಿಷಯಗಳಾಗಿ ಮಾರ್ಪಟ್ಟಿವೆ. ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ಪರಸ್ಪರ ಹಿಂಸಾಚಾರವನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿವೆ. ಹೀಗಾಗಿ ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

Exit mobile version