ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣಾ (Lok Sabha Election 2024) ಕಣ ಕರ್ನಾಟಕದ ಮಟ್ಟಿಗೆ ರಂಗೇರಿದೆ. ಹಲವು ಕಡೆ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಪರಸ್ಪರರನ್ನು ಸೋಲಿಸಲು ನಾನಾ ಕಸರತ್ತುಗಳು ನಡೆಯುತ್ತಿವೆ. ಈ ನಡುವೆ ಡಿಕೆ ಬ್ರದರ್ಸ್ (DK Brothers) ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಪಣತೊಟ್ಟಿದ್ದಾರೆ. ಪ್ರಚಾರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರನ್ನು ಕರೆತರಲು ಡಿ.ಕೆ. ಸುರೇಶ್ (DK Suresh) ಪ್ಲ್ಯಾನ್ ಮಾಡಿದ್ದರು ಎಂಬುದು ತಿಳಿಯುತ್ತಿದ್ದಂತೆ ಚುರುಕಾದ ಮುನಿರತ್ನ, ದರ್ಶನ್ ಬಾರದಂತೆ ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರಿಗೆ ಸೋಲೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಬಾರಿ ಬಿಜೆಪಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಇದು ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿತ್ತು. ಅಲ್ಲದೆ, ಕಮಲ-ದಳ ನಾಯಕರು ಒಟ್ಟಾಗಿ ಡಿಕೆ ಸಹೋದರರನ್ನು ಸೋಲಿಸಲು ಪಣ ತೊಟ್ಟಿದ್ದರು.
ಲೆಕ್ಕಾಚಾರವೇ ಉಲ್ಟಾ
ಇದರಿಂದ ಎಚ್ಚೆತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಶಿವಕುಮಾರ್ ಎಲ್ಲಿಯೂ ಎಚ್ಚರ ತಪ್ಪಬಾರದು ಎಂಬ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರತಿ ಅಪಾರ್ಟ್‌ಮೆಂಟ್‌ಗಳಿಗೂ ಭೇಟಿ ನೀಡಿ ಮತ ಯಾಚನೆ ಮಾಡುತ್ತಿದ್ದಾರೆ. ಡಿಕೆಶಿ ಮುಂದಿನ ಸಿಎಂ ಎಂಬ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಪರವಾಗಿ ಖ್ಯಾತ ಸಿನಿಮಾ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆತರಲು ಡಿ.ಕೆ. ಸುರೇಶ್ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಕಾರಣ, ದರ್ಶನ್ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅವರದ್ದೇ ಆದ ಫ್ಯಾನ್ಸ್ ಫಾಲೋವರ್ಸ್‌ಗಳಿದ್ದಾರೆ. ಒಂದು ವೇಳೆ ದರ್ಶನ್ ಬಂದು ಪ್ರಚಾರ ಮಾಡಿದರೆ ಯುವ ಸಮುದಾಯದ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗಿತ್ತು ಎನ್ನಲಾಗಿದೆ.
ದರ್ಶನ್ ಬಾರದಂತೆ ತಡೆದ ಮುನಿರತ್ನ
ಬೆಂಗಳೂರು ಗ್ರಾಮಾಂತರಕ್ಕೆ ದರ್ಶನ್ ಬರುವ ಸುಳಿವು ಸಿಗುತ್ತಿದ್ದಂತೆ ಅಲರ್ಟ್ ಆದ ಮುನಿರತ್ನ ಅವರು ಯಾವುದೇ ಕಾರಣಕ್ಕೂ ಕ್ಷೇತ್ರಕ್ಕೆ ಬಂದು ಮತಯಾಚನೆ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ದರ್ಶನ್ ಅವರ ಹಲವು ಸಿನಿಮಾಗಳಿಗೆ ನಿರ್ಮಾಪಕರಾಗಿರುವ ಮುನಿರತ್ನ ಅವರು ದರ್ಶನ್‌ಗೆ ಒಳ್ಳೆಯ ಸ್ನೇಹಿತರು ಕೂಡಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರ ಮಾತನ್ನು ಒಪ್ಪಿ ದರ್ಶನ್ ಅವರು ಪ್ರಚಾರಕ್ಕೆ ಬರುವುದರಿಂದ ಹಿಂದೆ ಸರಿದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Lok Sabha Election 2024: ಏ. 26ಕ್ಕೆ ವೋಟ್ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್ ಡಿಸ್ಕೌಂಟ್!
ಮುನಿರತ್ನಗೆ ಜಿದ್ದು ಏಕೆ?
ಡಿಕೆ ಬ್ರದರ್ಸ್ ಅನ್ನು ಸೋಲಿಸಬೇಕು ಎಂದು ಶಾಸಕ ಮುನಿರತ್ನ ಅವರಿಗೆ ಜಿದ್ದು ತುಸು ಹೆಚ್ಚಾಗಿಯೇ ಇದೆ. ಇದಕ್ಕೆ ಕಾರಣ ಇಲ್ಲವೆಂದಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮುನಿರತ್ನ ಅವರನ್ನು ಸೋಲಿಸಬೇಕು ಎಂದು ಡಿಕೆ ಸಹೋದರರು ಪಣ ತೊಟ್ಟಿದ್ದರು. ಈ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮುನಿರತ್ನ ಗೆಲುವು ಸಾಧಿಸಿದ್ದರು. ಇನ್ನು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಆರ್ ಆರ್ ನಗರಕ್ಕೆ ಕೊಟ್ಟ ಅನುದಾನವನ್ನು ಡಿ.ಕೆ. ಶಿವಕುಮಾರ್ ವಾಪಸ್ ಪಡೆದುಕೊಂಡಿದ್ದರು. ಇದೆಲ್ಲ ರೀತಿಯಲ್ಲಿ ಮುನಿರತ್ನ ಅವರಿಗೆ ಡಿ.ಕೆ. ಸಹೋದರರ ಮೇಲೆ ಸಿಟ್ಟಿದೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಡಿಕೆ ಬ್ರದರ್ಸ್‌ಗೆ ಸೋಲಿನ ರುಚಿ ತೋರಿಸಲು ಪಣತೊಟ್ಟಿದ್ದಾರೆ ಎನ್ನಲಾಗಿದೆ.