ಮಂಡ್ಯ: ಕಳೆದ ಹನ್ನೊಂದು ತಿಂಗಳುಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಬಂದ ನಂತರ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಬಿ.ಎಸ್. ಯಡಿಯೂರಪ್ಪನವರು (BS Yediyurappa) ಮುಖ್ಯಮಂತ್ರಿಯಾಗಿದ್ದಾಗ 1,800 ಕೋಟಿ ರೂ. ಅನುದಾನವನ್ನು ಮಂಡ್ಯದ ಅಭಿವೃದ್ಧಿಗೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ರೈತ ಪರ ಯೋಜನೆಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕೆ.ಆರ್. ಪೇಟೆಯಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಟೀಕಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರ ಪರವಾಗಿ ಕೆ.ಆರ್.ಪೇಟೆಯಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ಸರ್ಕಾರ ಬಂದ ನಂತರ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಭೀಕರ ಬರಗಾಲ ಇದ್ದರೂ, 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಈ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ ಎಂದು ಟೀಕಿಸಿದರು.
ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದರು. ಹಿಂದೆ ಭೀಕರ ಪ್ರವಾಹ ಆದಾಗ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡಿದರು. ಮನೆ ಕಳೆದುಕೊಂಡ ರೈತರಿಗೆ 5 ಲಕ್ಷ ರೂ. ಪರಿಹಾರ ಕೊಟ್ಟಿದ್ದರು. ಬಡ ರೈತರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡುತ್ತೇನೆ ಎಂದು ಹೇಳಿ ಅದರಂತೆ ಮಾಡಿದ್ದರು. ಬಿಎಸ್‍ವೈ ಅವರು ರೈತರ ಪಂಪ್ ಸೆಟ್‍ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದರು. ಒಂದು ಕಡೆ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರೆ, ಬಿ.ಎಸ್. ಯಡಿಯೂರಪ್ಪ ಸಹ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ರೈತನಿಗೆ ಬರೆ ಎಳೆಯುವ ಕೆಲಸ
ಈಗ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಗಾಲದ ಸಂದರ್ಭದಲ್ಲಿ ರೈತನಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರೈತನೊಬ್ಬ ತನ್ನ ಹೊಲಕ್ಕೆ ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಳ್ಳಬೇಕಿದ್ದರೆ 25 ಸಾವಿರ ರೂ. ಕಟ್ಟಿದರೆ ಸಾಕಿತ್ತು. ಆದರೆ, ಈಗ ಸಿದ್ದರಾಮಯ್ಯ ಸರ್ಕಾರ ಬಂದ ನಂತರ ರೈತರು 3 ಲಕ್ಷ ರೂ. ಶುಲ್ಕ ಕಟ್ಟಬೇಕಾಗಿದೆ. ಈ ಬರದ ಸಂದರ್ಭದಲ್ಲಿ ರೈತರಿಗೆ 3 ಲಕ್ಷ ಕಟ್ಟುವ ಸಂಕಷ್ಟವನ್ನು ಹೇಗೆ ತಾನೇ ನಿಭಾಯಿಸಲು ಸಾಧ್ಯ? ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ರೈತ ಪರ ಯೋಜನೆ ಕಿತ್ತುಕೊಂಡಿರುವ ಕಾಂಗ್ರೆಸ್
ಗ್ಯಾರಂಟಿ ನೆಪ ಮಾಡಿಕೊಂಡು ಒಂದು ಕೈಯಲ್ಲಿ ಕಿತ್ತುಕೊಂಡು ಇನ್ನೊಂದು ಕೈಯಲ್ಲಿ ಕೊಡುವ ಕೆಲಸ ಮಾಡುತ್ತಿದೆ ಈ ಕಾಂಗ್ರೆಸ್ ಸರ್ಕಾರ. ಉಚಿತ ವಿದ್ಯುತ್ ಎನ್ನುತ್ತಲೇ ಸಣ್ಣ ಸಣ್ಣ ವ್ಯಾಪಾರಿಗಳು 5ರಿಂದ 8000 ರೂ. ವರೆಗೆ ಬಿಲ್ ಕಟ್ಟಬೇಕಾದ ಅನಿವಾರ್ಯತೆ ಬಂದಿದೆ. ಬಸ್ಸಲ್ಲಿ ಓಡಾಡಬೇಕಾದರೆ ಶೇ. 30-40ರಷ್ಟು ಟಿಕೆಟ್ ದರ ಜಾಸ್ತಿಯಾಗಿದೆ. ಹಾಲಿನ ದರ ಜಾಸ್ತಿಯಾದರೂ ಅದರ ಲಾಭ ರೈತರಿಗೆ ಆಗುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ರೈತರಿಗೆ ಹಾಲಿನ ಪ್ರೋತ್ಸಾಹಧನ 5 ರೂ. ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಪ್ರೋತ್ಸಾಹಧನವನ್ನು ನಿಲ್ಲಿಸಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 4,000 ರೂ. ಕೊಡುತ್ತಿದ್ದುದನ್ನು ಕೂಡ ನಿಲ್ಲಿಸಿದ್ದಾರೆ. ರೈತರಿಗೆ ನೆರವಾಗುವ ಎಲ್ಲ ಯೋಜನೆಗಳನ್ನು ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ ತಾನು ರೈತಪರ ಎಂದು ಯಾವ ಭಂಡ ಧೈರ್ಯದಿಂದ ಹೇಳಿಕೊಳ್ಳುತ್ತದೆ? ಎಂದು ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.
ಇದನ್ನೂ ಓದಿ: Lok Sabha Election 2024: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಂದು ಟ್ವಿಸ್ಟ್; ಎಚ್‌ಡಿಕೆ ವಿರುದ್ಧ ದರ್ಶನ್ ಪ್ರಚಾರ!
ಕೆ.ಆರ್ ಪೇಟೆಯ ವಿದ್ಯಾವಂತ ಮತದಾರರು ಯೋಚನೆ ಮಾಡಬೇಕಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ದೇಶದ ಜನತೆ ತೀರ್ಮಾನ ಮಾಡಿರುವ ಈ ಸಂದರ್ಭದಲ್ಲಿ ಬಡವರ ಪರ ಸದಾ ದುಡಿಯುವ ಎಚ್.ಡಿ ಕುಮಾರಸ್ವಾಮಿಯವರನ್ನು ಗೆಲ್ಲಿಸಬೇಕೇ ಹೊರತು ಜನರ ಕಿಸೆಗೆ ಕನ್ನ ಹಾಕುವವರನ್ನು ಗೆಲ್ಲಿಸಬಾರದು. ಹಣದ ದರ್ಪದಿಂದ ಗೆಲ್ಲುವ ಅಹಂಕಾರ ಪ್ರದರ್ಶಿಸುತ್ತಿರುವ ಕಾಂಗ್ರೆಸ್‍ನವರನ್ನು ಜನತೆ ತಿರಸ್ಕರಿಸಬೇಕು. ಮುಂದಿನ ದಿನಗಳಲ್ಲಿ ಮಂಡ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
"ಕರ್ನಾಟಕ ವಿಕಾಸದ ಹಾದಿ
— Vijayendra Yediyurappa (Modi Ka Parivar) (@BYVijayendra) April 17, 2024
ಮತ್ತೊಮ್ಮೆ ಮೋದಿ"
ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್ ಪೇಟೆಯಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಾಯಿತು. ಮಂಡ್ಯದ ಶ್ರಮಿಕ ಜನತೆ ಸದಾ ಅಭಿವೃದ್ಧಿ ಬಯಸುವವರಾಗಿದ್ದು ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ತರಲು ನಮ್ಮ ಎನ್.ಡಿ.ಎ ಅಭ್ಯರ್ಥಿ ಶ್ರೀ @hd_kumaraswamy ಅವರನ್ನು ಬಿಜೆಪಿ ಹಾಗೂ… pic.twitter.com/eZYBDCvhzQ
ಎಚ್ಡಿಕೆ ಗೆಲುವು ನಿಶ್ಚಿತ
ಮತಗಳ ಎಣಿಕೆಯ ದಿನದಂದು ದೇಶದ ಮೊದಲ ಫಲಿತಾಂಶ ಮಂಡ್ಯದಿಂದ ಬರಬೇಕು. ಎಚ್‍ಡಿಕೆ ಗೆಲ್ಲುವುದನ್ನು ಯಾವ ದುಷ್ಟ ಶಕ್ತಿಗಳೂ ತಡೆಯಲು ಸಾಧ್ಯವಿಲ್ಲ. ಮಂಡ್ಯದಿಂದ ಕುಮಾರಸ್ವಾಮಿಯವರು ಗೆದ್ದು ಮೋದಿಯವರ ಕೈ ಬಲಪಡಿಸುವ ಕೆಲಸ ಮಾಡುತ್ತಾರೆ. ಕರ್ನಾಟಕದ ಅಭಿವೃದ್ಧಿಗೂ ಕೈಜೋಡಿಸುತ್ತಾರೆ. ಅಂತಹ ಜನ ನಾಯಕನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುವುದಾಗಿ ಬಿ.ವೈ. ವಿಜಯೇಂದ್ರ ಹೇಳಿದರು.