Site icon Vistara News

Lok Sabha Election 2024: ಭ್ರಷ್ಟಾಚಾರಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕ್ರಮ ನಿಶ್ಚಿತ; ವಿಪಕ್ಷಗಳ ವಿರುದ್ಧ ಮೋದಿ ಗುಡುಗು

Lok Sabha Election 2024

Lok Sabha Election 2024

ಲಕ್ನೋ: ವಿಪಕ್ಷಗಳ ʼಇಂಡಿಯಾʼ ಒಕ್ಕೂಟ (INDIA bloc)ದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು, ʼʼತಮ್ಮ ಮೇಲಿನ ದಾಳಿಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ನಿಲ್ಲಿಸುವುದಿಲ್ಲ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಅವರ ಸ್ಥಾನಮಾನವನ್ನು ಲೆಕ್ಕಿಸದೆ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಘೋಷಿಸಿದ್ದಾರೆ. ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು (Lok Sabha Election 2024).

“ಮೋದಿ ಭ್ರಷ್ಟಾಚಾರದ ವಿರುದ್ಧ ಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತಿರುವಾಗ, ಇವರು ʼಇಂಡಿಯಾʼ ಮೈತ್ರಿಕೂಟವನ್ನು ರಚಿಸಿದ್ದಾರೆ. ನನ್ನನ್ನು ಬೆದರಿಸುತ್ತೇನೆ ಎಂದು ಅವರು ಭಾವಿಸುತ್ತಾರೆ. ಆದರೆ ಭಾರತೀಯರನ್ನು ಭ್ರಷ್ಟರಿಂದ ರಕ್ಷಿಸಲು ನಾನು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ” ಎಂದು ಮೋದಿ ಹೇಳಿದ್ದಾರೆ.

ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರನ್ನು ಬೆಂಬಲಿಸಿ ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ʼಇಂಡಿಯಾʼ ಮೈತ್ರಿಕೂಟದ ನಾಯಕರು ಭಾನುವಾರ ರ‍್ಯಾಲಿ ನಡೆಸಿ ಶಕ್ತಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದರಿಂದ ಕೆಲವರು ವಿಚಲಿತರಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. “ನನ್ನ ದೇಶವನ್ನು ಭ್ರಷ್ಟರಿಂದ ರಕ್ಷಿಸಲು ನಾನು ದೊಡ್ಡ ಯುದ್ಧವನ್ನು ನಡೆಸುತ್ತಿದ್ದೇನೆ. ಅದಕ್ಕಾಗಿಯೇ ಅವರು ಇಂದು ಜೈಲಿನಲ್ಲಿದ್ದಾರೆ ಮತ್ತು ಸುಪ್ರೀಂ ಕೋರ್ಟ್‌ನಿಂದಲೂ ಜಾಮೀನು ಪಡೆಯುತ್ತಿಲ್ಲ” ಎಂದಿದ್ದಾರೆ. “ಈ ಚುನಾವಣೆ ಎರಡು ಬಣಗಳ ನಡುವಿನ ಹೋರಾಟ. ಒಂದು ಕಡೆ ಭ್ರಷ್ಟಾಚಾರ ನಿರ್ಮೂಲನೆಗೆ ಎನ್‌ಡಿಎ ಬದ್ಧವಾಗಿದ್ದರೆ, ಮತ್ತೊಂದೆಡೆ ಭ್ರಷ್ಟ ನಾಯಕರನ್ನು ರಕ್ಷಿಸುವತ್ತ ʼಇಂಡಿಯಾʼ ಮೈತ್ರಿಕೂಟ ಗಮನ ಹರಿಸಿದೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನೀವು ನಿರ್ಧರಿಸಬೇಕು” ಎಂದು ಅವರು ಮೀರತ್‌ನಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.

“ಭ್ರಷ್ಟರು ನನ್ನ ಮೇಲೆ ಎಷ್ಟೇ ದಾಳಿ ಮಾಡಿದರೂ ಸುಮ್ಮನಿರುವುದಿಲ್ಲ. ಭ್ರಷ್ಟರು ಎಷ್ಟೇ ದೊಡ್ಡವರಾಗಿರಲಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ದೇಶವನ್ನು ಲೂಟಿ ಮಾಡಿದವನು ಅದನ್ನು ಹಿಂದಿರುಗಿಸಲೇ ಬೇಕಾಗುತ್ತದೆ. ಇದು ಮೋದಿ ನೀಡುವ ಗ್ಯಾರಂಟಿ” ಎಂದು ಭರವಸೆ ನೀಡಿದ್ದಾರೆ. ʼʼಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಮ್ಮ ಸರ್ಕಾರ ಸಿದ್ಧಪಡಿಸುತ್ತಿದೆʼʼ ಎಂದು ತಿಳಿಸಿದ್ದಾರೆ. ಮೀರತ್‌ ಚೌಧರಿ ಚರಣ್ ಸಿಂಗ್ ಅವರಂತಹ ನಾಯಕರನ್ನು ದೇಶಕ್ಕೆ ನೀಡಿದ ಕ್ರಾಂತಿಕಾರಿಗಳ ಭೂಮಿ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

“ಬಡವರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಯೋಜನೆಗಳನ್ನು ಸಿದ್ಧ ಪಡಿಸಿದ್ದೇವೆ. ನಾವು ಬಡವರನ್ನು ಸಬಲೀಕರಣಗೊಳಿಸಿದ್ದೇವೆ ಮಾತ್ರವಲ್ಲ, ಅವರ ಆತ್ಮಗೌರವವನ್ನೂ ಮರಳಿ ನೀಡಿದ್ದೇವೆ” ಎಂದು ಮೋದಿ ಹೇಳಿದ್ದಾರೆ. ಇತ್ತೀಚೆಗೆ ಎನ್‌ಡಿಎಗೆ ಸೇರ್ಪಡೆಯಾದ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ ಅವರು ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ನೈಬ್ ಸಿಂಗ್ ಸೈನಿ, ಮೀರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ, ‘ರಾಮಾಯಣ’ ಖ್ಯಾತಿಯ ಹಿರಿಯ ನಟ ಅರುಣ್ ಗೋವಿಲ್ ಮತ್ತಿತರರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Lok Sabha Election 2024: ಪ್ರಧಾನಿ ಮೋದಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ; ರಾಹುಲ್‌ ಗಾಂಧಿ ಹೀಗೆ ಹೇಳಿದ್ಯಾಕೆ?

Exit mobile version