ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ರಾಜ್ಯ ರಾಜಕೀಯದಲ್ಲಿ ಸ್ಟಾರ್ ಪ್ರಚಾರಕರ ಹವಾ ಜೋರಾಗಲಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಸ್ಟಾರ್ ನಟರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ರಾಯಚೂರು ಲೋಕಸಭಾ ಕ್ಷೇತ್ರದ (Raichur Lok Sabha constituency) ಬಿಜೆಪಿ ಅಭ್ಯರ್ಥಿ ಪರ ತೆಲುಗು ನಟ ಪವನ್ ಕಲ್ಯಾಣ್ (Pawan Kalyan) ಪ್ರಚಾರ ಮಾಡಲಿದ್ದು, ರೋಡ್ ಶೋ ಮೂಲಕ ಅಬ್ಬರಿಸಲಿದ್ದಾರೆ. ಇದರ ಜತೆಗೆ ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿಯೂ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಸ್ಟಾರ್ ನಟ ಪವನ್ ಕಲ್ಯಾಣ್ ಪ್ರಚಾರ ಮಾಡಲಿದ್ದಾರೆ. ಪವನ್ ಕಲ್ಯಾಣ್ ಮಾಸ್ ಹೀರೋ ಆಗಿದ್ದು, ಸಹೋದರ ಚಿರಂಜೀವಿ ಅವರಂತೆ ಭಾರಿ ಜನಪ್ರಿಯತೆಯುಳ್ಳ ವ್ಯಕ್ತಿಯಾಗಿದ್ದಾರೆ. ಅವರ ನಟನೆಯ ಬಹುತೇಕ ಸಿನಿಮಾಗಳು ಕರ್ನಾಟಕದಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತದೆ. ಅವರಿಗೆ ಕನ್ನಡಿಗ ಅಭಿಮಾನಿಗಳೂ ಇದ್ದಾರೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಕ್ಯಾಂಪೇನ್ ಮಾಡಲು ಅವರನ್ನು ಕರೆಸಿಕೊಳ್ಳಲಾಗುತ್ತಿದೆ.
ಏಪ್ರಿಲ್ 17ರಂದು ರಾಯಚೂರಿಗೆ ಭೇಟಿ ನೀಡಲಿರುವ ಪವನ್ ಕಲ್ಯಾಣ್, ಬೆಳಗ್ಗೆ 11ರಿಂದ 12 ಗಂಟೆವರೆಗೆ ಪ್ರಚಾರ ನಡೆಸಲಿದ್ದಾರೆ. ನಗರದ ಗಂಜ್ ವೃತ್ತದಿಂದ ಆರ್‌ಟಿಒ ಕಚೇರಿವರೆಗೆ ಪವನ್ ಕಲ್ಯಾಣ್ ರೋಡ್ ಶೋವನ್ನು ಹಮ್ಮಿಕೊಳ್ಳಲಾಗಿದೆ.
ಪವನ್ ಕಲ್ಯಾಣ್ ರೋಡ್ ಶೋ ರೂಟ್‌ಮ್ಯಾಪ್
ಈಗಾಗಲೇ ಪವನ್ ಕಲ್ಯಾಣ್ ರೋಡ್ ಶೋ ರೂಟ್‌ಮ್ಯಾಪ್ ಅನ್ನು ಸಹ ಬಿಜೆಪಿ ಸಿದ್ಧಪಡಿಸಿದೆ. ಗಂಜ್ ಸರ್ಕಲ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೈಲ್ವೆ ನಿಲ್ದಾಣ ಮಾರ್ಗವಾಗಿ ಆರ್‌ಟಿಒ ಸರ್ಕಲ್‌ವರೆಗೂ ನಟ ಪವನ್ ಕಲ್ಯಾಣ್ ರೋಡ್ ಶೋವನ್ನು ಆಯೋಜನೆ ಮಾಡಲಾಗಿದೆ. ರಾಯಚೂರು ನಗರದಲ್ಲಿ ಒಟ್ಟು 5 ಕಿ.ಮೀ.ವರೆಗೆ ಪವನ್ ಕಲ್ಯಾಣ್ ರೋಡ್ ಶೋ ನಡೆಸಲಿದ್ದಾರೆ. ಈ ಮೂಲಕ ಜನರನ್ನು ಸೆಳೆಯಲು ಬಿಜೆಪಿ ಪ್ಲ್ಯಾನ್ ಮಾಡಿಕೊಂಡಿದೆ.
ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ
ಪವನ್ ಕಲ್ಯಾಣ್ ನಟ ಮಾತ್ರವಲ್ಲದೆ, ರಾಜಕಾರಣಿಯೂ ಹೌದು. ಅವರು ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಪರ ಸಾಕಷ್ಟು ಒಲವು ಹೊಂದಿದ್ದಾರೆ. ಹೀಗಾಗಿ ಅವರು ಎನ್‌ಡಿಎ ಜತೆ ಕೈಜೋಡಿಸಿದ್ದಾರೆ. ಪವನ್ ಕಲ್ಯಾಣ್ ಅವರನ್ನು ರಾಯಚೂರು ಮಾತ್ರವಲ್ಲದೆ, ತೆಲುಗು ಪ್ರಾಬಲ್ಯ ಇರುವ ಬಳ್ಳಾರಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಜತೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿಯೂ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಏ. 14ರಂದು ಮೋದಿ ಬೆಂಗಳೂರು ಕಾರ್ಯಕ್ರಮ ರದ್ದು; ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ ರೋಡ್ ಶೋ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್ 14ರಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮೊದಲು ಅವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರೋಡ್ ಶೋ (Modi Road Show) ನಡೆಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಬೆಂಗಳೂರಿನ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಲಾಗಿದ್ದು, ಅಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಜತೆಗೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಲು ಪ್ರಧಾನಿ ಕಾರ್ಯಾಲಯದಿಂದ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆ ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಏ. 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮೈಸೂರು ಮಹಾರಾಜ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಕೊಡಗು – ಮೈಸೂರು, ಚಾಮರಾಜನಗರ, ಮಂಡ್ಯ ಲೋಕಸಭಾ ಕ್ಷೇತ್ರಗಳ ಜನರನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ.
ಮಂಗಳೂರು ರೋಡ್ ಶೋಗೆ ರೂಟ್ ಮ್ಯಾಪ್ ಸಿದ್ಧ
ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ಮೆಗಾ ರೋಡ್ ಶೋವನ್ನು ಆಯೋಜನೆ ಮಾಡಲಾಗಿದೆ. ಅಂದು ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಲಿದೆ. ನಾರಾಯಣ ಗುರು ಸರ್ಕಲ್ ಬಳಿ ಮೋದಿ ಆಗಮಿಸಿ, ಅಲ್ಲಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ರೋಡ್ ಶೋವನ್ನು ಆರಂಭಿಸಲಿದ್ದಾರೆ.
ಲೇಡಿಹಿಲ್ ನಾರಾಯಣ ಗುರು ಸರ್ಕಲ್‌ನಿಂದ ಲಾಲ್‌ಬಾಗ್‌ನ ಮಂಗಳೂರು ಪಾಲಿಕೆ ಕಚೇರಿ ಎದುರು ತಲುಪಲಿರುವ ರೋಡ್ ಶೋ, ಅಲ್ಲಿಂದ ಬಳ್ಳಾಲ್‌ಬಾಗ್ ದಾಟಿ ಎಂ.ಜಿ. ರಸ್ತೆ ಮೂಲಕ ಸಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ ತಲುಪಲಿದೆ. ಬಳಿಕ ಕೆ.ಎಸ್. ರಾವ್ ರಸ್ತೆ ಮೂಲಕ ಸಾಗಿ ಹಂಪನಕಟ್ಟೆ ಸಿಗ್ನಲ್ ಬಳಿ ರೋಡ್ ಶೋ ಅಂತ್ಯವಾಗಲಿದೆ. ಸುಮಾರು 2.5 ಕಿ.ಮೀ. ರೋಡ್ ಶೋ ಸಾಗಲಿದೆ.
ಈ ಮೊದಲು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಸಮಾವೇಶ ರದ್ದುಪಡಿಸಿ ರೋಡ್ ಶೋ ನಡೆಸಲು ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ
ಮೈಸೂರಲ್ಲಿ ಸಮಾವೇಶ
ಹಳೇ ಮೈಸೂರು, ಕರಾವಳಿ ಮೇಲೆ ಬಿಜೆಪಿ ಕಣ್ಣಿಟ್ಟಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೋಡಿ ಮಾಡಿಸಲು ಮುಂದಾಗಿದೆ. ಹೀಗಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು- ಕೊಡಗು ಸೇರಿದಂತೆ ಕ್ಲಸ್ಟರ್ ಹಂತದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸಲಾಗಿದೆ.
ಏಪ್ರಿಲ್ 19ರಂದು ಬೆಂಗಳೂರಿಗೆ ಮೋದಿ?
ಇನ್ನು ಏಪ್ರಿಲ್ 14ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಬೆಂಗಳೂರು ಕಾರ್ಯಕ್ರಮವನ್ನು ಪ್ರಧಾನಿ ಕಾರ್ಯಾಲಯದಿಂದ ರದ್ದು ಮಾಡಲಾಗಿದೆ. ಆದರೆ, ಇದೇ ಏಪ್ರಿಲ್ 19ರಂದು ಬೆಂಗಳೂರಿಗೆ ಮೋದಿ ಆಗಮಿಸಲಿದ್ದಾರೆ ಎನ್ನಲಾಗಿದೆ. ಅಂದು ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.