Site icon Vistara News

Lok Sabha Election 2024: ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ; ರಾಹುಲ್‌ ಗಾಂಧಿ ಹೇಳಿಕೆಗೆ ಮೋದಿ ಖಡಕ್‌ ಉತ್ತರ

Exit Poll 2024

Exit Poll 2024 Live Updates Watch Here in Vistara News Kannada

ಉತ್ತರಾಖಂಡ: ಲೋಕಸಭಾ ಚುನಾವಣೆ (Lok Sabha Election 2024)ಗೆ ಮುಹೂರ್ತ ನಿಗದಿಯಾಗಿದ್ದು, ವಿವಿಧ ಪಕ್ಷಗಳ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಈ ಮಧ್ಯೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳೂ ಸದ್ದು ಮಾಡುತ್ತಿವೆ. ಮಂಗಳವಾರ (ಏಪ್ರಿಲ್‌ 2) ಉತ್ತರಾಖಂಡದ ರುದ್ರಪುರದಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಇತ್ತೀಚೆಗೆ ನೀಡಿದ್ದ, ಬಿಜೆಪಿ ಮೂರನೇ ಬಾರಿಗೆ ಆಯ್ಕೆಯಾದರೆ ಭಾರತಕ್ಕೆ ಬೆಂಕಿ ಹತ್ತಿಕೊಳ್ಳಲಿದೆ ಎಂಬ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. “ಅವರು (ಕಾಂಗ್ರೆಸ್‌ನವರು) 60 ವರ್ಷಗಳ ಕಾಲ ದೇಶವನ್ನು ಆಳಿದರು. ಆದರೆ 10 ವರ್ಷಗಳ ಹಿಂದೆ ಅಧಿಕಾರದಿಂದ ಹೊರಬಂದ ನಂತರ ಅವರು ದೇಶಕ್ಕೆ ಬೆಂಕಿ ಹಚ್ಚುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.

ಭಾನುವಾರ (ಮಾರ್ಚ್‌ 31) ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳು ನಡೆಸಿದ್ದ ಬೃಹತ್ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಿ ಮೋದಿ ಅವರ ವಿರುದ್ಧ ಫಿಕ್ಸಿಂಗ್‌ ಆರೋಪ ಮಾಡಿದ್ದರು. ಈ ನಿಗದಿತ ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಸಂವಿಧಾನವನ್ನು ಬದಲಾಯಿಸಿದರೆ ದೇಶದಲ್ಲಿ ಬೆಂಕಿ ಹತ್ತಿಕೊಳ್ಳಲಿದೆ. ಇದನ್ನು ನೆನಪಿಡಿ ಎಂದು ಹೇಳಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮೋದಿ, ʼʼಇದು ಪ್ರಜಾಪ್ರಭುತ್ವದ ಭಾಷೆಯೇ? ಅಂತಹ ಜನರನ್ನು ಶಿಕ್ಷಿಸುತ್ತೀರಾ?ʼʼ ಎಂದು ಪ್ರಶ್ನಿಸಿದರು. ʼʼತುರ್ತು ಪರಿಸ್ಥಿತಿಯ ಮನಸ್ಥಿತಿ ಹೊಂದಿರುವ ಕಾಂಗ್ರೆಸ್ ಈಗ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್‌ ನಾಯಕರು ಜನಾದೇಶದ ವಿರುದ್ಧ ಜನರನ್ನು ಪ್ರಚೋದಿಸುವಲ್ಲಿ ನಿರತರಾಗಿದ್ದಾರೆ” ಎಂದು ಪ್ರಧಾನಿ ಹೇಳಿದರು.

ʼʼಈ ಚುನಾವಣೆಯಲ್ಲಿ ಎರಡು ಬಣಗಳು ಮುಖಾಮುಖಿಯಾಗುತ್ತಿವೆ. ಒಂದು ಕಡೆ ನಾವು ಜನರಿಗೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಆಡಳಿತ ಒದಗಿಸಲಿದ್ದೇವೆ. ಮತ್ತೊಂದೆಡೆ ಭ್ರಷ್ಟರು ಮತ್ತು ರಾಜವಂಶಗಳು ಗುಂಪುಗೂಡಿವೆ. ಈ ಭ್ರಷ್ಟರು ನನ್ನನ್ನು ನಿಂದಿಸುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ. ನಾವು ‘ಭ್ರಷ್ಟಾಚಾರವನ್ನು ತೆಗೆದುಹಾಕಿ’ ಎಂದು ಹೇಳುತ್ತಿದ್ದೇವೆ, ಅವರು ‘ಭ್ರಷ್ಟರನ್ನು ಉಳಿಸಿ’ ಎಂದು ಹೇಳುತ್ತಿದ್ದಾರೆ” ಎಂದು ಮೋದಿ ಹೇಳಿದರು.

“ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿಯ ವಿರುದ್ಧ ಕ್ರಮ ಮುಂದುವರಿಯುತ್ತದೆ” ಎನ್ನುವುದನ್ನು ಒತ್ತಿ ಹೇಳಿದ ಪ್ರಧಾನಿ, “ನಮ್ಮ ಮೂರನೇ ಅವಧಿಯ ಆರಂಭದಲ್ಲಿ, ಭ್ರಷ್ಟಾಚಾರದ ವಿರುದ್ಧ ದೊಡ್ಡ ದಾಳಿ ನಡೆಯಲಿದೆ. ನಾನು ಅದನ್ನು ಖಾತರಿಪಡಿಸುತ್ತೇನೆ” ಎಂದು ಭರವಸೆ ನೀಡಿದರು.

ಇದನ್ನೂ ಓದಿ: Lok Sabha Election 2024: ಪ್ರಧಾನಿ ಮೋದಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ; ರಾಹುಲ್‌ ಗಾಂಧಿ ಹೀಗೆ ಹೇಳಿದ್ಯಾಕೆ?

ಈ ಮಧ್ಯೆ ಇವಿಎಂಗಳ ಬಗ್ಗೆ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ʼʼನರೇಂದ್ರ ಮೋದಿ ಅಂಪೈರ್‌ಗಳನ್ನು ಆಯ್ಕೆ ಮಾಡಿದ ಈ ಚುನಾವಣೆಯಲ್ಲಿ ಇವಿಎಂಗಳನ್ನು ಸರಿಪಡಿಸದೆ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ಒತ್ತಡ ಹೇರದೆ ಅವರು (ಬಿಜೆಪಿ) 400 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಿಲ್ಲʼʼ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ʼʼರಾಹುಲ್ ಗಾಂಧಿ ಅವರ ಈ ಭಾಷಣವು ಚುನಾವಣಾ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಭಾರತೀಯರ ಮನಸ್ಸಿನಲ್ಲಿ ಅನುಮಾನ ಮತ್ತು ಅಪನಂಬಿಕೆಯ ಬೀಜಗಳನ್ನು ಬಿತ್ತುವ ಗುರಿ ಹೊಂದಿದೆ ಎಂದು ಬಿಜೆಪಿ ದೂರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version