ಗಾಂಧಿನಗರ: ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಆರಂಭವಾಗಿದೆ. 93 ಕ್ಷೇತ್ರಗಳಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಅದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಗುಜರಾತ್‌ನ ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕಂಡರಿ ಶಾಲೆ (Nishan Higher Secondary School)ಯ ಮತದಾನ ಕೇಂದ್ರದಲ್ಲಿ ಬೆಳಗ್ಗೆ 7.45ರ ಸುಮಾರಿಗೆ ತಮ್ಮ ಹಕ್ಕು ಚಲಾಯಿಸಿದರು. ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರೊಂದಿಗೆ ಆಗಮಿಸಿದ ಅವರು ಸುತ್ತ ನೆರೆದಿದ್ದ ಸಾವಿರಾರು ಜನರತ್ತ ಕೈ ಬೀಸುತ್ತ ಮತದಾನ ಕೇಂದ್ರಕ್ಕೆ ತೆರಳಿ ವೋಟು ಮಾಡಿದರು. ಈ ಮಧ್ಯೆ ಎಲ್ಲರೂ ಮತದಾನ ಮಾಡುವಂತೆ ಅವರು ಕನ್ನಡದಲ್ಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ.
— Narendra Modi (@narendramodi) May 7, 2024
ಮತದಾನ ಕೇಂದ್ರದ ಬಳಿಗೆ ಪ್ರಧಾನಿ ಸುಮಾರು 7.30ರ ಹೊತ್ತಿಗೆ ಆಗಮಿಸಿದ್ದರು. ಅಮಿತ್ ಶಾ ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಸುತ್ತ ನೆರೆದಿದ್ದ ಸಾವರ್ಜನಿಕರತ್ತ ಕೈ ಬೀಸುತ್ತ ಮತಗಟ್ಟೆಗೆ ತೆರಳಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ಈ ಮಧ್ಯೆ ಅಭಿಮಾನಿಗಳಿಗೆ ಮೋದಿ ಆಟೋಗ್ರಾಫ್ ನೀಡುವುದನ್ನೂ ಮರೆಯಲಿಲ್ಲ. ಅಮಿತ್ ಶಾ ಸ್ಪರ್ಧಿಸುತ್ತಿರುವ ಗಾಂಧಿನಗರದಲ್ಲಿಯೂ ಇಂದು ಮತದಾನ ನಡೆಯಲಿದ್ದು, ಕೆಲ ಹೊತ್ತಿನಲ್ಲೇ ಅವರು ಹಕ್ಕು ಚಲಾಯಿಸಲಿದ್ದಾರೆ.
#WATCH | Prime Minister Narendra Modi shows his inked finger after casting his vote at a polling booth in Ahmedabad, Gujarat
— ANI (@ANI) May 7, 2024
#LokSabhaElections2024 pic.twitter.com/OI0LzIJ0dQ
ಹಕ್ಕು ಚಲಾಯಿಸಿದ ಗಣ್ಯರು
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಮತ ಚಲಾಯಿಸಿದರು. ಅಜಿತ್ ಅವರ ಪತ್ನಿ ಸುನೇತ್ರಾ ಮತ್ತು ತಾಯಿ ಕೂಡ ಬಾರಾಮತಿಯ ಕಟೇವಾಡಿ ಮತಗಟ್ಟೆಯಲ್ಲಿ ಬೆಳಿಗ್ಗೆ ಮತದಾನ ಮಾಡಿದರು.
ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಲು ಕರೆ
ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.
ಕರ್ನಾಟಕ ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಸೇರಿವೆ. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್ ಶಾ
ಮತದಾನ ನಡೆಯುವ ರಾಜ್ಯಗಳು
ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು (2), ಅಸ್ಸಾಂ (4), ಬಿಹಾರ (5), ಛತ್ತೀಸ್‌ಗಢ (7), ದಾದ್ರಾ, ಗೋವಾ (2), ಗುಜರಾತ್ (25), ಕರ್ನಾಟಕ (14), ಮಹಾರಾಷ್ಟ್ರ (11), ಮಧ್ಯಪ್ರದೇಶ (8), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳ (4)ಗಳಲ್ಲಿ ಮತದಾನ ನಡೆಯುತ್ತಿದೆ. ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆಲುವು ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್-ರಾಜೌರಿ ಲೋಕಸಭಾ ಕ್ಷೇತ್ರಕ್ಕೂ ಇಂದೇ ಮತದಾನ ನಿಗದಿಯಾಗಿತ್ತು. ಆದರೆ ಪ್ರತಿಕೂಲ ಹವಾಮಾನ ಕಾರಣದಿಂದ ಚುನಾವಣಾ ಆಯೋಗ ಇತ್ತೀಚೆಗೆ ಇದನ್ನು ಮೇ 25ಕ್ಕೆ ಮುಂದೂಡಿತ್ತು.