ಹೈದರಾಬಾದ್: ಲೋಕಸಭೆ ಚುನಾವಣೆ (Lok Sabha Election 2024)ಯ ಕಣ ರಂಗೇರಿದೆ. ವಿವಿಧ ರಾಜಕೀಯ ಪಕ್ಷಗಳು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಘಟಾನುಘಟಿಗಳು ಸ್ಪರ್ಧಿಸುತ್ತಿರುವ ಕೆಲವೊಂದು ಕ್ಷೇತ್ರ ಈಗಾಗಲೇ ದೇಶದ ಗಮನ ಸೆಳೆದಿದೆ. ಈ ಪೈಕಿ ಹೈದರಾಬಾದ್ ಲೋಕಸಭೆ ಕ್ಷೇತ್ರವೂ ಒಂದು. ಇಲ್ಲಿ ಎಐಎಂಐಎಂ ಮುಖ್ಯಸ್ಥ, ಹಾಲಿ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಸ್ಪರ್ಧಿಸಲು ಬಿಜೆಪಿ ಹಿಂದು ಫೈರ್‌ಬ್ರ್ಯಾಂಡ್ ಡಾ. ಮಾಧವಿ ಲತಾ ಕೊಂಪೆಲ್ಲ (Madhavi Latha Kompella) ಅವರಿಗೆ ಟಿಕೆಟ್ ನೀಡಿದೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಾಧವಿ ಲತಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇತ್ತೀಚೆಗೆ ಲತಾ ಅವರು ಚಾನಲ್ ಒಂದಕ್ಕೆ ನೀಡಿದ ಸಂದರ್ಶನವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ ಅವರು ಬೆಂಬಲ ಸೂಚಿಸಿದ್ದಾರೆ.
ಲತಾ ಅವರ ಇತ್ತೀಚಿನ ಟಿವಿ ಸಂದರ್ಶನವನ್ನು ಮೋದಿ ಶ್ಲಾಘಿಸಿದ್ದಾರೆ. ʼʼಮಾಧವಿ ಲತಾ ಜೀ ನಿಮ್ಮ ʼಆಪ್ ಕಿ ಅದಾಲತ್ʼ ಸಂಚಿಕೆ ಅತ್ಯುತ್ತಮವಾಗಿತ್ತು. ಪ್ರತಿಯೊಂದು ಅಂಶವನ್ನು ಸರಿಯಾಗಿ ಮಂಡಿಸಿದ್ದೀರಿ. ನಿಮಗೆ ನನ್ನ ಶುಭ ಹಾರೈಕೆಗಳು. ಈ ಕಾರ್ಯಕ್ರಮ ಇಂದು ರಾತ್ರಿ 10 ಗಂಟೆಗೆ ಮರು ಪ್ರಸಾರವಾಗುತ್ತಿದೆ. ಪ್ರತಿಯೊಬ್ಬರೂ ಇದನ್ನು ವೀಕ್ಷಿಸಿʼʼ ಎಂದು ಮೋದಿ ಬರೆದುಕೊಂಡಿದ್ದಾರೆ.
Madhavi Latha Ji, your ‘Aap Ki Adalat’ episode is exceptional. You’ve made very solid points and also done so with logic and passion. My best wishes to you.
— Narendra Modi (@narendramodi) April 7, 2024
I also urge everyone to watch the repeat telecast of this programme at 10 AM or 10 PM today. You all will find it very…
ಸಂದರ್ಶನದಲ್ಲಿ ಏನಿದೆ?
ಖಾಸಗಿ ಚಾನಲ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಲತಾ ಅವರು ಪ್ರಧಾನಿ ಮೋದಿ ಅವರ ಪಾರದರ್ಶಕ ಆಡಳಿತವನ್ನು ಶ್ಲಾಘಿಸಿದ್ದಾರೆ ಮತ್ತು ಅವರನ್ನು ಈ ಯುಗದ ‘ಮಹಾಯೋಗಿ’ ಎಂದು ಕರೆದಿದ್ದಾರೆ. ʼʼನನ್ನ ಸಾಮಾಜಿಕ ಕಾರ್ಯಗಳನ್ನು ಗಮನಿಸಿ ಮೋದಿ ಅವರು ಟಿಕೆಟ್ ನೀಡಿದ್ದಾರೆ. ನಾನು ಓವೈಸಿಗೆ ಕಠಿಣ ಸ್ಪರ್ಧೆ ಒಡ್ಡಬಲ್ಲೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಓವೈಸಿ ಈ ಬಾರಿ ಸುಮಾರು 1,50,000 ವೋಟ್‌ಗಳಿಂದ ಸೋಲಲಿದ್ದಾರೆʼʼ ಎಂದು ಲತಾ ತಿಳಿಸಿದ್ದಾರೆ.
40 ವರ್ಷಗಳಿಂದ ಓವೈಸಿ ಕುಟುಂಬವು ಹೈದರಾಬಾದ್‌ನಿಂದ ಗೆಲ್ಲುತ್ತಿರುವ ಬಗ್ಗೆ ಮಾತನಾಡಿದ ಲತಾ, “ನಾವು ನಕಲಿ ಮತಗಳನ್ನು ಹೊಂದಿದ್ದರೆ, 4,000 ವರ್ಷಗಳವರೆಗೆ ನಿರಂತರವಾಗಿ ಗೆಲ್ಲಬಹುದು. ಆದರೆ ಏನು ಮಾಡಬೇಕು? ನಮ್ಮಲ್ಲಿ ನಕಲಿ ಮತಗಳಿಲ್ಲ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನೀವು ಒಂದು ಎಪಿಕ್ (ಚುನಾವಣಾ ಫೋಟೋ ಗುರುತಿನ ಚೀಟಿ) ಸಂಖ್ಯೆಯನ್ನು ಟೈಪ್ ಮಾಡಿದರೆ, ಒಂದೇ ಮತದಾರರ ಗುರುತಿನ ಚೀಟಿಯನ್ನು ಎರಡು ಸ್ಥಳಗಳಲ್ಲಿ ಕಾಣಬಹುದು. ಚಾರ್ಮಿನಾರ್ ಪ್ರದೇಶವೊಂದರಲ್ಲೇ ಓವೈಸಿ ಸುಮಾರು 1,60,000 ನಕಲಿ ಮತಗಳನ್ನು ಹೊಂದಿದ್ದಾರೆʼʼ ಎಂದು ಆರೋಪಿಸಿದ್ದಾರೆ.
ಮಾಧವಿ ಲತಾ ಹಿನ್ನೆಲೆ ಏನು?
ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಾಧವಿ ಲತಾ ಅವರು ಬಹುಮುಖ ಪ್ರತಿಭೆ ಎನಿಸಿಕೊಂಡಿದ್ದಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಇವರು ಉದ್ಯಮದ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆ, ಆರೋಗ್ಯ ಸೇವೆ ಹಾಗೂ ಆಹಾರ ವಿತರಣೆಯ ಮೂಲಕ ಗಮನ ಸೆಳೆದಿದ್ದಾರೆ. ಭರತನಾಟ್ಯ ಪ್ರವೀಣೆಯೂ ಆಗಿರುವ ಇವರು ಹಿಂದು ಧರ್ಮದ ಕುರಿತು ಮಾಡುವ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ.
ಇದನ್ನೂ ಓದಿ: Madhavi Lata: ಓವೈಸಿ ವಿರುದ್ಧ ಹಿಂದು ಸಿಂಹಿಣಿಗೆ ಟಿಕೆಟ್ ಕೊಟ್ಟ ಬಿಜೆಪಿ; ಯಾರಿವರು ಮಾಧವಿ?
ಹಿಂದು ಧರ್ಮದ ಕುರಿತು ಪ್ರಖರವಾಗಿ ಮಾತನಾಡುವ, ಹೈದರಾಬಾದ್‌ನಲ್ಲಿ ಎಐಎಂಐಎಂ ಪಕ್ಷದ ವೈಫಲ್ಯಗಳನ್ನು ತೋರಿಸುವ ಛಾತಿ ಹೊಂದಿರುವ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಹಿಂದು ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಹೈದರಾಬಾದ್‌ನಲ್ಲಿ ಡಾ. ಮಾಧವಿ ಲತಾ ಕೊಂಪೆಲ್ಲ ಅವರು ಅಸಾದುದ್ದೀನ್ ಓವೈಸಿ ಅವರಿಗೆ ತೀವ್ರ ಪೈಪೋಟಿ ನೀಡುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ