Site icon Vistara News

Lok Sabha Election 2024: ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದ ಮೋದಿ; ಕಾಂಗ್ರೆಸ್‌ನ ತುಷ್ಟೀಕರಣ ನೀತಿಯ ಬಗ್ಗೆ ಅರಿವು ಮೂಡಿಸಲು ಕರೆ

Fact check

Lok Sabha Election 2024

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಬಿಜೆಪಿಯ ಎಲ್ಲ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದು, ಎಸ್‌ಸಿ / ಎಸ್‌ಟಿ ಮತ್ತು ಒಬಿಸಿಯಿಂದ ಮುಸ್ಲಿಮರಿಗೆ ಮೀಸಲಾತಿ ನೀಡುವ ಕಾರ್ಯಸೂಚಿ, ಪಿತ್ರಾರ್ಜಿತ ಆಸ್ತಿ ತೆರಿಗೆಯ ಪ್ರಸ್ತಾವ ಸೇರಿದಂತೆ ಕಾಂಗ್ರೆಸ್‌ ಮತ್ತು ವಿಪಕ್ಷಗಳ ʼಇಂಡಿಯಾʼ ಒಕ್ಕೂಟಗಳ ಹಿಂಜರಿತ ರಾಜಕೀಯ ನೀತಿಯ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮತ್ತು ಗುಜರಾತ್‌ನ ಪೋರ್‌ ಬಂದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನ್ಸುಖ್ ಮಾಂಡವಿಯಾ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ಬರೆದಿರುವ ಪತ್ರವನ್ನು ಹಂಚಿಕೊಂಡು ಪ್ರಧಾನಿ ಅವರ ಪ್ರೇರಕ ಮಾತುಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. “ಈ ಸ್ಫೂರ್ತಿದಾಯಕ ಮಾತುಗಳಿಗಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. 10 ವರ್ಷಗಳಲ್ಲಿ ನೀವು ಮಾಡಿದ ಕೆಲಸಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿವೆ. ನಾವೆಲ್ಲರೂ ನಿಮ್ಮ ಸಲಹೆಯಂತೆ ಕಾರ್ಯ ನಿರ್ವಹಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?

ʼʼಇದು ಸಾಮಾನ್ಯ ಚುನಾವಣೆಯಲ್ಲ ಮತ್ತು ಬಿಜೆಪಿಗೆ ನೀಡುವ ಪ್ರತಿಯೊಂದು ಮತವು ಬಲವಾದ ಸರ್ಕಾರವನ್ನು ರಚಿಸುವ ಮತ್ತು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ವೇಗಗೊಳಿಸುತ್ತದೆʼʼ ಎಂದು ಪತ್ರದಲ್ಲಿ ಮೋದಿ ಹೇಳಿದ್ದಾರೆ. “ಈ ಚುನಾವಣೆ ನಮ್ಮ ವರ್ತಮಾನ ಮತ್ತು ಉಜ್ವಲ ಭವಿಷ್ಯವನ್ನು ನಿರ್ಮಿಸಲು ಎದುರಾಗಿರುವ ಸುವರ್ಣಾವಕಾಶ. ಐದಾರು ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಕುಟುಂಬ ಮತ್ತು ಕುಟುಂಬದ ಹಿರಿಯರು ಅನುಭವಿಸಿದ ಕಷ್ಟಗಳಿಂದ ಪರಿಹಾರ ಪಡೆಯಲು ಈ ಚುನಾವಣೆ ಒಂದು ಪ್ರಮುಖ ಅಸ್ತ್ರ ಎನಿಸಿಕೊಂಡಿದೆ. ಕಳೆದ ದಶಕದಲ್ಲಿ ಸಮಾಜದ ಪ್ರತಿಯೊಂದು ವರ್ಗದವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಮೂಲಕ ದೇಶವಾಸಿಗಳ ಅನೇಕ ತೊಂದರೆಗಳನ್ನು ತೊಡೆದುಹಾಕಲಾಗಿದೆʼʼ ಎಂದು ಬರೆದಿದ್ದಾರೆ.

“ಇದಲ್ಲದೆ ಕಾಂಗ್ರೆಸ್ ಮತ್ತು ಅದರ ʼಇಂಡಿಯಾʼ ಮೈತ್ರಿಕೂಟದ ವಿಭಜಕ ಮತ್ತು ತಾರತಮ್ಯದ ಉದ್ದೇಶಗಳ ವಿರುದ್ಧ ಮತದಾರರಿಗೆ ಮಾಹಿತಿ ನೀಡುವಂತೆ ನಾನು ಕೇಳಿಕೊಳ್ಳುತ್ತೇನೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಾಂವಿಧಾನಿಕವಾಗಿದ್ದರೂ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ʼಇಂಡಿಯಾʼ ಒಕ್ಕೂಟ ತಮ್ಮ ಮತ ಬ್ಯಾಂಕ್‌ ಆದ ಮುಸ್ಲಿಮರಿಗೆ ಮೀಸಲಾತಿ ನೀಡಲು ಮುಂದಾಗಿದೆ. ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಸಿದುಕೊಂಡು ಇವರಿಗೆ ನೀಡಲು ಮುಂದಾಗಿದೆ. ಜತೆಗೆ ಕಾಂಗ್ರೆಸ್‌ ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಪ್ರಸ್ತಾವಿಸಿದೆ. ಇದನ್ನು ತಡೆಯಲು ದೇಶವು ಒಂದಾಗಬೇಕಾಗಿದೆʼʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಈ ಪತ್ರವು ಆರೋಗ್ಯ ಸಲಹೆಯನ್ನೂ ಒಳಗೊಂಡಿದೆ. ʼʼಬೇಸಿಗೆಯ ಶಾಖವು ಎಲ್ಲರಿಗೂ ಸಮಸ್ಯೆಗಳನ್ನು ತಂದೊಡ್ಡಿದೆ. ಆದ್ದರಿಂದ ಮತದಾರರು ಬೆಳಗ್ಗೆಯೇ ಮತಗಟ್ಟೆಗೆ ತೆರಳಿ ಬಿಸಿಲಿನ ತಾಪ ಆರಂಭವಾಗುವ ಮುನ್ನ ಮತ ಚಲಾಯಿಸಬೇಕುʼʼ ಎಂದು ಮೋದಿ ಸಲಹೆ ನೀಡಿದ್ದಾರೆ. ಎಲ್ಲ ಪತ್ರಗಳು ವೈಯಕ್ತಿಕ ಉಲ್ಲೇಖವನ್ನೂ ಹೊಂದಿರುವುದು ವಿಶೇಷ. ಉದಾಹರಣೆಗೆ, ಮಾಂಡವಿಯಾ ಅವರನ್ನು ಉದ್ದೇಶಿಸಿ “ಸಣ್ಣ ಉದ್ಯಮಿಗಳಿಗಾಗಿ ಪಿಎಂ ಭಾರತೀಯ ಜನೌಷಧಿ ಕೇಂದ್ರವನ್ನು (PMBJAK) ಸ್ಥಾಪಿಸಲು ಮತ್ತು ಮೇಲ್ದರ್ಜೆಗೇರಿಸಲು ನೀವು ಮಾಡಿದ ಕೆಲಸ ಗಮನಾರ್ಹʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಅತ್ಯಂತ ಚಿಕ್ಕ ವಯಸ್ಸಿನಲ್ಲಿ, ನೀವು ಭಾರತೀಯ ಜನತಾ ಯುವ ಮೋರ್ಚಾದ ನಾಯಕರಾದಿರಿ ಮತ್ತು ವಿವಿಧ ಸ್ಥಾನಗಳಲ್ಲಿ ಸಂಘಟನೆಗಾಗಿ ಕೆಲಸ ಮಾಡಿದ್ದೀರಿ. ಮಧ್ಯಮ ವರ್ಗದ ರೈತ ಕುಟುಂಬದಿಂದ ಬಂದ ನೀವು ನಿಮ್ಮ ಮತದಾರರೊಂದಿಗೆ ಸಂಪರ್ಕ ಹೊಂದಿದ್ದೀರಿ. ನೀವು ಕೆಲವು ವರ್ಷಗಳ ಹಿಂದೆ ನಿಮ್ಮ ಡಾಕ್ಟರೇಟ್ ಪೂರ್ಣಗೊಳಿಸಿದ್ದೀರಿ, ಇದು ಅನೇಕ ಜನರಿಗೆ ಸ್ಫೂರ್ತಿಯ ಮೂಲವಾಗಿದೆ” ಎಂದು ಪತ್ರದಲ್ಲಿ ಕೇಂದ್ರ ಸಚಿವರನ್ನು ಶ್ಲಾಘಿಸಲಾಗಿದೆ.

ಇದನ್ನೂ ಓದಿ: PM Narendra Modi: ಡೀಪ್‌ ಫೇಕ್‌ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು? ವಿಡಿಯೊ ಕಂಡರೆ ನೀವೇನು ಮಾಡಬೇಕು?

Exit mobile version