ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್ 14ರಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ರೋಡ್ ಶೋ (Modi Road Show) ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ 4 ಸಂಭಾವ್ಯ ರೂಟ್‌ಮ್ಯಾಪ್‌ಗಳನ್ನು ರಾಜ್ಯ ಬಿಜೆಪಿ ಸಿದ್ಧಪಡಿಸಿದೆ.
ಬೆಂಗಳೂರು ಉತ್ತರ ವ್ಯಾಪ್ತಿಯ ಹೆಬ್ಬಾಳ ವಿಧಾನಸಭೆ ಹಾಗೂ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲು ತೀರ್ಮಾನ ಮಾಡಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲೂ ಒಟ್ಟು 4 ರೂಟ್‌ಮ್ಯಾಪ್ ಸಿದ್ಧಪಡಿಸಲಾಗಿದೆ.
ಮೊದಲ ರೂಟ್‌ಮ್ಯಾಪ್
ಮೊದಲ ರೋಡ್ ಶೋ ರೂಟ್‌ಮ್ಯಾಪ್ ಹೆಬ್ಬಾಳ ಕ್ಷೇತ್ರದಲ್ಲಿ 6.4 ಕಿ.ಮೀವರೆಗೆ ಇರಲಿದೆ. ಇದು ಅಶ್ವಥ್ ನಗರ ಸರ್ಕಲ್‌ನಿಂದ ಆರಂಭವಾಗಲಿದೆ.
ಅಶ್ವಥ್ ನಗರ ಸರ್ಕಲ್ – ಗೆದ್ದಲಹಳ್ಳಿ ಸರ್ಕಲ್ – ರಾಧಾಕೃಷ್ಣ ದೇವಸ್ಥಾನ – ವೈಭವ್ ಥಿಯೇಟರ್ – ನಾಗಶೆಟ್ಟಿಹಳ್ಳಿ ಜಂಕ್ಷನ್ – ರಿಂಗ್ ರೋಡ್ ಜಂಕ್ಷನ್ – ಕೋಟೆ ಮುತ್ತುಸ್ವಾಮಿ ದೇವಸ್ಥಾನದವರೆಗೆ ಇರುವ ಸಂಭಾವ್ಯ ರೂಟ್‌ಮ್ಯಾಪ್ ಆಗಿದೆ.
2ನೇ ರೂಟ್‌ಮ್ಯಾಪ್
ಎರಡನೇ ರೋಡ್ ಶೋ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ 4.6 ಕಿ.ಮೀ. ವರೆಗೆ ಸಿದ್ಧಪಡಿಸಲಾಗಿದೆ.
ಬ್ಯಾಟರಾಯನಪುರದ ಗುಂಡಾಂಜನೇಯ ಸ್ವಾಮಿ ದೇವಸ್ಥಾನ – ಕೊಡಿಗೇಹಳ್ಳಿ ಗೇಟ್ – ಬ್ಯಾಟರಾಯನಪುರ ಸರ್ಕಲ್ – ಜಕ್ಕೂರು ಏರೋಡ್ರಮ್ ವರೆಗಿರುವ ಸಂಭಾವ್ಯ ರೂಟ್‌ಮ್ಯಾಪ್ ಆಗಿದೆ.
ಇದರ ಜತೆಗೆ 3ರಿಂದ 4 ಕಿ.ಮೀ. ವರೆಗಿನ ಇನ್ನೂ 2 ರೂಟ್‌ಮ್ಯಾಪ್‌ಗಳನ್ನು ಸೇರಿಸಿ ಒಟ್ಟು 4 ರೂಟ್‌ಮ್ಯಾಪ್‌ಗಳ ಪ್ರಧಾನಿ ಕಾರ್ಯಾಲಯಕ್ಕೆ ರಾಜ್ಯ ಬಿಜೆಪಿ ರವಾನೆ ಮಾಡಿದೆ. ಇನ್ನು ಪ್ರಧಾನಿ ಕಚೇರಿಯಿಂದ ರೋಡ್ ಶೋ ರೂಟ್‌ಮ್ಯಾಪ್ ಅಂತಿಮಗೊಳ್ಳಬೇಕಿದೆ. ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿಗೆ ಮೋದಿ; ದಾಖಲೆ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ!
ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡುತ್ತಿದ್ದು, ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಮೋದಿ ಮಾತನಾಡಲಿದ್ದಾರೆ. ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಈ ಸಮಾವೇಶಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಇಲ್ಲಿಯವರೆಗೆ ಸೇರದಷ್ಟು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಸೋಮವಾರ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Lok Sabha Election 2024: ಮೋದಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಬದಲಾವಣೆ: ಡಾ. ಸಿ.ಎನ್. ಮಂಜುನಾಥ್
ಬಿಜೆಪಿಯಿಂದ ಪ್ರಚಾರ ಅಭಿಯಾನ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರ ಅಭಿಯಾನಯನ್ನು ಮಾಡುತ್ತಿದ್ದೇವೆ. ದೊಡ್ಡ ಕಾರ್ಯಕ್ರಮಗಳನ್ನು ಮಾಡುವ ಬದಲು ಮನೆ ಮನೆಗೆ ತೆರಳುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಏಪ್ರಿಲ್ 10 ,11ಕ್ಕೆ ರಾಜ್ಯದ ಎಲ್ಲ ಕಡೆಗಳಲ್ಲಿ ಬೂತ್ ಮಟ್ಟದ ಸಭೆ ನಡೆಯಲಿದೆ. ಈ ವರ್ಷ ಮೂರು ಕಾರಣಕ್ಕಾಗಿ ಚುನಾವಣಾ ಮತ ಕೇಳಲು ಹೋಗುತ್ತಿದ್ದೇವೆ. “ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ, ವಿಕಸಿತ ಭಾರತ” ಎಂಬ ಮೂರು ವಿಷಯದಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದು ಸುನಿಲ್ ಕುಮಾರ್ ತಿಳಿಸಿದ್ದರು.