Site icon Vistara News

Lok Sabha Election 2024: ಪ್ರಧಾನಿ ಮೋದಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ; ರಾಹುಲ್‌ ಗಾಂಧಿ ಹೀಗೆ ಹೇಳಿದ್ಯಾಕೆ?

Lok Sabha Election 2024

Lok Sabha Election 2024

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಗೆ ಮುಹೂರ್ತ ನಿಗದಿಯಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಇದಕ್ಕಾಗಿ ಭರದ ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟ ಶಕ್ತಿ ಪ್ರದರ್ಶನಕ್ಕಾಗಿ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾನುವಾರ ಸಭೆ ನಡೆಸಿದೆ. ಈ ʼಲೋಕತಂತ್ರ ಬಚಾವೋʼ (ಪ್ರಜಾಪ್ರಭುತ್ವ ಉಳಿಸಿ) ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು, ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿ, ಮ್ಯಾಚ್ ಫಿಕ್ಸಿಂಗ್‌ನ ಆರೋಪ ಹೊರಿಸಿದ್ದಾರೆ.

ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಟೀಕಿಸಲು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಹೋಲಿಸಿದರು. “ಈಗ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಅಂಪೈರ್‌ಗಳ ಮೇಲೆ ಒತ್ತಡ ಹೇರಿದಾಗ, ಆಟಗಾರರನ್ನು ಖರೀದಿಸಿದಾಗ ಮತ್ತು ನಾಯಕರಿಗೆ ಪಂದ್ಯಗಳನ್ನು ಗೆಲ್ಲುವಂತೆ ಬೆದರಿಕೆ ಹಾಕಿದಾಗ ಅದನ್ನು ಮ್ಯಾಚ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ. ಮುಂದೆ ನಡೆಯುವ ಲೋಕಸಭಾ ಚುನಾವಣೆಯ ಅಂಪೈರ್‌ಗಳನ್ನು ಪ್ರಧಾನಿ ಮೋದಿ ಆಯ್ಕೆ ಮಾಡಿದ್ದಾರೆʼʼ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಾರ್ಟಿ (AAP)ಯಿಂದ ಈ ರ‍್ಯಾಲಿ ಆಯೋಜಿಸಲಾಗಿದೆ.

ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಜತೆಗೆ ಭೂ ಹಗರಣದ ಸಂಬಂಧ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜನವರಿ 31ರಂದು ಬಂಧಿಸಲಾಗಿದೆ. ಈ ಇಬ್ಬರನ ಬಂಧನವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ, “ನಮ್ಮ ತಂಡದ ಇಬ್ಬರು ಆಟಗಾರರನ್ನು ಪಂದ್ಯಕ್ಕೆ ಮೊದಲೇ ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.

“ನರೇಂದ್ರ ಮೋದಿ ಅಂಪೈರ್‌ಗಳನ್ನು ಆಯ್ಕೆ ಮಾಡಿದ ಈ ಚುನಾವಣೆಯಲ್ಲಿ ಇವಿಎಂಗಳನ್ನು ಸರಿಪಡಿಸದೆ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ಒತ್ತಡ ಹೇರದೆ ಅವರು 400 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಿಲ್ಲʼʼ. ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ ಅವರು, “ನೀವು ಪೂರ್ಣ ಶಕ್ತಿಯಿಂದ ಮತ ಚಲಾಯಿಸದಿದ್ದರೆ, ಅವರ ಮ್ಯಾಚ್ ಫಿಕ್ಸಿಂಗ್ ಯಶಸ್ವಿಯಾಗುತ್ತದೆ. ಅದು ಯಶಸ್ವಿಯಾದರೆ ಸಂವಿಧಾನವು ನಾಶವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಅತಿದೊಡ್ಡ ಪ್ರತಿಪಕ್ಷವಾಗಿದ್ದರೂ ಚುನಾವಣೆಯ ಮಧ್ಯದಲ್ಲಿ ಎಲ್ಲ ಬ್ಯಾಂಕ್ ಖಾತೆಗಳನ್ನು ಬ್ಲಾಕ್‌ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. “ನಾವು ಚುನಾವಣೆಗೆ ಅಭಿಯಾನವನ್ನು ನಡೆಸಬೇಕು, ಪ್ರಚಾರ ಕೈಗೊಳ್ಳಬೇಕು, ಪೋಸ್ಟರ್‌ ಪ್ರಿಂಟ್‌ ಹಾಕಿಸಬೇಕು. ಆದರೆ ನಮ್ಮ ಎಲ್ಲ ಬ್ಯಾಂಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ. ಇದು ಯಾವ ರೀತಿಯ ಚುನಾವಣೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಮಾರ್ಚ್ 21ರಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಆಡಳಿತಾರೂಢ ಬಿಜೆಪಿ ತಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Narendra Modi: ಲಂಕಾಗೆ ಕಚ್ಚತೀವು ದ್ವೀಪ ಬಿಟ್ಟ ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ; ಮೋದಿ ವಾಗ್ದಾಳಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥ ಮೆಹಬೂಬ್ ಮುಫ್ತಿ ಸೇರಿದಂತೆ ವಿರೋಧ ಪಕ್ಷದ ನಾಯಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಅರವಿಂದ್‌ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಉಪಸ್ಥಿತರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version