ಧಾರವಾಡ/ಚಿಕ್ಕೋಡಿ/ಶಿವಮೊಗ್ಗ: ಲೋಕಸಭೆ ಚುನಾವಣೆ (Lok Sabha Election 2024) ಅಭ್ಯರ್ಥಿಗಳಾಗಿ ನಿಂತಿರುವ ಹಲವು ಘಟಾನುಘಟಿಗಳು ಇಂದು ತಮ್ಮ ನಾಮಪತ್ರ (Nomination) ಸಲ್ಲಿಸಲಿದ್ದಾರೆ. ಇವರಲ್ಲಿ ಪ್ರಹ್ಲಾದ್ ಜೋಶಿ (prahlad joshi), ಅಣ್ಣಾಸಾಹೇಬ್ ಜೊಲ್ಲೆ (Annasaheb Jolle) ಹಾಗೂ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಸೇರಿದ್ದಾರೆ.
ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ
ಧಾರವಾಡ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಹ್ಲಾದ್ ಜೋಶಿ ಇಂದು ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಿರಿಯ ಬಿಜೆಪಿ ನಾಯಕರಾದ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪ್ರಭಾಕರ ಕೋರೆ, ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಮಪತ್ರ ಸಲ್ಲಿಕೆಗೆ ಆಗಮಿಸಲಿದ್ದಾರೆ.
ಧಾರವಾಡದ ಶಿವಾಜಿ ಸರ್ಕಲ್‌ನಿಂದ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಆರಂಭಿಸಿ, ಡಿಸಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ಸಾಗಿ 11 ಗಂಟೆಗೆ ನಾಮಪತ್ರ ಸಲ್ಲಿಸಲು ಜೋಶಿ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯ ನಾಯಕರ ಜೊತೆಗೆ ಸ್ಥಳೀಯ ಬಿಜೆಪಿ ಶಾಸಕರೂ ಜೋಶಿಯವರಿಗೆ ಸಾಥ್ ನೀಡಲಿದ್ದಾರೆ.
ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ
ಚಿಕ್ಕೋಡಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರುವ ಅಣ್ಣಾಸಾಹೇಬ ಜೊಲ್ಲೆಯವರು ಬಿಜೆಪಿ ನಾಯಕರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಜೊಲ್ಲೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಬೈರತಿ ಬಸವರಾಜ ಸೇರಿದಂತೆ ವಿವಿಧ ಮುಖಂಡರು ಸಾಥ್ ನೀಡಲಿದ್ದಾರೆ. 11 ಗಂಟೆಗೆ ಚಿಕ್ಕೋಡಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನವೂ ನಡೆಯಲಿದೆ.
ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ನಿಂದ ಇಳಿದಿರುವ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಇಂದು ನಾಮಿನೇಷನ್ ಫೈಲ್ ಮಾಡಲಿದ್ದಾರೆ. ಇವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಾಥ್ ನೀಡುವ ಸಾಧ್ಯತೆ ಇದೆ. ಮಧ್ಯಾಹ್ನ 1.30ಕ್ಕೆ ಶಿವಮೊಗ್ಗಕ್ಕೆ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ.
ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ಗೀತಾ ಶಿವರಾಜ್ ಕುಮಾರ್‌ಗೆ ಪತಿ, ನಟ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ ಹಾಗೂ ಕುಟುಂಬ ಸದಸ್ಯರು ಸಾಥ್ ನೀಡಲಿದ್ದಾರೆ.
ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ನಗರದ ಮಹಾವೀರ ವೃತ್ತದಲ್ಲಿ ಬೃಹತ್ ಮೆರವಣಿಗೆ ಕೊನೆಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ತಮ್ಮ ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಗುರುದತ್ ಹೆಗಡೆ ಅವರಿಗೆ ಗೀತಾ ಸಲ್ಲಿಸಲಿದ್ದಾರೆ.