ಹಾಸನ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಗುರುವಾರ (ಮಾ. 28) ಹಾಸನ ಲೋಕಸಭಾ ಕ್ಷೇತ್ರಕ್ಕೆ (Hassan Lok Sabha constituency) ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ (Prajwal Revanna) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 40.94 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
40 ಕೋಟಿ 94 ಲಕ್ಷ ರೂ. ಮೌಲ್ಯರ ಚರ – ಸ್ಥಿರಾಸ್ಥಿಯನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ. ಇದರಲ್ಲಿ 5.44 ಕೋಟಿ ರೂಪಾಯಿ ಚರ ಹಾಗೂ 35.40 ಕೋಟಿ ರೂಪಾಯಿ ಸ್ಥಿರ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಸದ್ಯ 9.29 ಲಕ್ಷ ರೂಪಾಯಿ ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ರೂ. ನಗದನ್ನು ಹೊಂದಿರುವ ಪ್ರಜ್ವಲ್ ರೇವಣ್ಣ, ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಕೃಷಿಯೇತರ ಮೂಲದಿಂದ 1.33 ಕೋಟಿ ರೂಪಾಯಿ ಆದಾಯವನ್ನು ಗಳಿಕೆ ಮಾಡಿದ್ದಾರೆ.
ಬೆಂಗಳೂರಲ್ಲಿ ವಾಣಿಜ್ಯ ಮಳಿಗೆ
31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಅನ್ನು ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡಗಳನ್ನು ಸಹ ಇವರು ಹೊಂದಿದ್ದಾರೆ. ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವ ಎಚ್.ಡಿ. ರೇವಣ್ಣ ಪುತ್ರ ಕೋಟಿಗಳ ಒಡೆಯರಾಗಿದ್ದಾರೆ.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಆಸ್ತಿ ಮೌಲ್ಯ 598 ಕೋಟಿ ರೂ.; 5 ವರ್ಷದಲ್ಲಿ 259.19 ಕೋಟಿ ರೂ. ಹೆಚ್ಚಳ!
ಕುಟುಂಬದವರಿಂದ 4.48 ಕೋಟಿ ರೂ. ಸಾಲ
ಅತ್ತೆ ಅನುಸೂಯ ಅವರಿಂದ 22 ಲಕ್ಷ ರೂ., ಅತ್ತೆ ಶೈಲಜಾರಿಂದ 10 ಲಕ್ಷ ರೂಪಾಯಿ ಹಾಗೂ ಅಜ್ಜಿ ಚನ್ನಮ್ಮರಿಂದ 23 ಲಕ್ಷ ರೂಪಾಯಿ, ತಂದೆ ರೇವಣ್ಣ ಅವರಿಂದ 86 ಲಕ್ಷ ರೂಪಾಯಿ, ಸಹೋದರ ಡಾ. ಸೂರಜ್ ಅವರಿಂದ 1 ಕೋಟಿ ರೂಪಾಯಿ ಸಾಲವನ್ನು ಪ್ರಜ್ವಲ್ ರೇವಣ್ಣ ಪಡೆದಿದ್ದಾರೆ. ಒಟ್ಟು 4.48 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.
ಸರ್ಕಾರಕ್ಕೆ 3.04 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಜಿಗಟ್ಟಲೆ ಚಿನ್ನ ಬೆಳ್ಳಿ ಹೊಂದಿರುವ ಪ್ರಜ್ವಲ್
ಪ್ರಜ್ವಲ್ ರೇವಣ್ಣ ಅವರ ಬಳಿ ಒಟ್ಟು 67 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನವಿದೆ. ಅಲ್ಲದೆ, 17.48 ಲಕ್ಷ ರೂಪಾಯಿ ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ರೂಪಾಯಿ ಮೌಲ್ಯದ ವಜ್ರದ ಆಭರಣವನ್ನು ಸಹ ಹೊಂದಿದ್ದಾರೆ.