ಚಿತ್ರದುರ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈಗ ಪ್ರಿಯಾಂಕಾ ಗಾಂಧಿ (Priyanka Gandhi) ಕರ್ನಾಟಕಕ್ಕೆ ಬಂದಿದ್ದು, ಚಿತ್ರದುರ್ಗ ಸಮಾವೇಶದಲ್ಲಿ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಸಂವಿಧಾನ ತಿದ್ದುಪಡಿ (Constitutional Amendment) ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ನ್ಯಾಯ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಜಾತಿ ಗಣತಿಯನ್ನು ಇಡೀ ದೇಶದಲ್ಲಿ ನಡೆಸುತ್ತೇವೆ. ಯಾವ ಸಮುದಾಯದವರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರತ್ಯೇಕ ಬಜೆಟ್ ಅನ್ನು ಮಂಡಿಸುತ್ತೇವೆ. ಅಲ್ಲದೆ, ಸಂವಿಧಾನ ತಿದ್ದುಪಡಿ ಮಾಡಿ ಶೇಕಡಾ 50ರಷ್ಟು ಮೀಸಲಾತಿ ಕೊಡುತ್ತೇವೆ. ಕೃಷಿಗಾಗಿ ಹೊಸ ನೀತಿ ಮಾಡುತ್ತೇವೆ ಎಂದು ಹೇಳಿದರು.
ಬಂಡವಾಳಶಾಹಿಗಳಿಗೆ ದೇಶದ ಆಸ್ತಿ ಮಾರಾಟ
ದೇಶದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ನಾನು ಮಾತನಾಡುತ್ತೇನೆ. ದೇಶದಲ್ಲಿ ಎರಡು ಸತ್ಯಗಳಿವೆ. ಒಂದು, ನೀವು ಬೆಲೆ ಏರಿಕೆಯಿಂದ ಕಷ್ಟ ಪಡುತ್ತಿದ್ದೀರಿ. ಮತ್ತೊಂದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾತನಾಡುವುದಾಗಿದೆ ಎಂದು ಮಾಧ್ಯಮಗಳು ಹೇಳುತ್ತಿರುವುದು. ಆದರೆ, ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆಗಳಿವೆ. ದೊಡ್ಡ ದೊಡ್ಡ ಮಾತುಗಳನ್ನು ಮೋದಿ ಆಡಿದ್ದರು. ಹೆಣ್ಣುಮಕ್ಕಳು ಹಬ್ಬ ಹರಿ ದಿನ ಮಾಡಲು ಕಷ್ಟ ಪಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಕಷ್ಟಪಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲದರಲ್ಲೂ ಬೆಲೆ ಏರಿಕೆ ಆಗಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ, ಜಿಎಸ್‌ಟಿಯಿಂದ ಜನ ಕಷ್ಟದಲ್ಲಿ ಇದ್ದಾರೆ. ದೇಶದ ಆಸ್ತಿಯನ್ನು ಬಂಡವಾಳಶಾಹಿಗಳಿಗೆ ಮೋದಿ ಮಾರಾಟ ಮಾಡುತ್ತಿದ್ದಾರೆ. ಅವರಿಗೆ 16 ಲಕ್ಷ ಕೋಟಿ ಸಬ್ಸಿಡಿ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಬಿಜೆಪಿಗೆ ಚಂದಾ ಕೊಟ್ಟಿರುವ ಐಟಿ ದಾಳಿಗೊಳಪಟ್ಟ ಕಂಪನಿಗಳು
ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದಾರೆ. ಒಬ್ಬರು ಸಿಎಂ, ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ. ಚುನಾವಣಾ ಬಾಂಡ್‌ಗಳ ಮೂಲಕ ಹಗರಣ ಮಾಡಿದ್ದಾರೆ. ದಾನ ಮಾಡಿದವರ ಹೆಸರು ಯಾರಿಗೂ ಗೊತ್ತಾಗುವುದಿಲ್ಲ. ಹೆಸರು ಮುಚ್ಚಿಡುವುದು ಸರಿಯಲ್ಲ, ಬಹಿರಂಗಗೊಳಿಸಿ ಎಂದು ಕೋರ್ಟ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಯಾರ ಬಳಿ ಚಂದಾ ವಸೂಲಿ ಮಾಡಿದ್ದಾರೆ ಎಂದು ಲಿಸ್ಟ್ ಹೊರಗೆ ಬಂದ ಮೇಲೆ ಗೊತ್ತಾಯಿತು. ಯಾವ ಕಂಪನಿಗಳ ಮೇಲೆ ದಾಳಿಯಾಗಿತ್ತೋ ಆ ಕಂಪನಿಗಳು ದಾನ ಕೊಟ್ಟಿವೆ. ಕಪ್ಪು ಹಣ ತರಲು ನೋಟು ರದ್ದು ಮಾಡಿದ್ದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ನೀವು ಕಷ್ಟ ಪಟ್ಟಿದ್ದೀರಿ. ಆದರೆ, ಅದೇ ಸಮಯದಲ್ಲಿ ಕಪ್ಪು ಹಣವನ್ನು ವೈಟ್ ಮಾಡಿಕೊಂಡರು. ಅವರ ತಪ್ಪು ಮುಚ್ಚಿಕೊಳ್ಳಲು ವಿಪಕ್ಷದವರು ಭ್ರಷ್ಟರು ಎಂದು ಕರೆಯುತ್ತಿದ್ದಾರೆ. ದೇಶವನ್ನು ಆರ್ಥಿಕವಾಗಿ ಹಾಳು ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಜಾತಿ, ಧರ್ಮದ ಬಗ್ಗೆ ಮಾತನಾಡಿ ಗಮನವನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
LIVE : ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ ಅವರ ಬಹಿರಂಗ ಪ್ರಚಾರ ಸಭೆ, ಚಿತ್ರದುರ್ಗ https://t.co/lduGUVVAIw
— Karnataka Congress (@INCKarnataka) April 23, 2024
ಸಂವಿಧಾನ ಬದಲಾವಣೆ ಮಾತನಾಡುವ ಬಿಜೆಪಿ ನಾಯಕರು
ನಿಮ್ಮ ಕಷ್ಟದ ಬಗ್ಗೆ ಮಾತನಾಡದ ನರೇಂದ್ರ ಮೋದಿ ಅವರು, 400 ಹೆಚ್ಚು ಸ್ಥಾನ ಕೊಡಿ, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಇದರ ಅರ್ಥವೇನು? ಜನರೇ ಸಾರ್ವಭೌಮರು ಎಂದು ಸಂವಿಧಾನ ಹೇಳಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ನಿಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.
ಸುಳ್ಳು ಬಿಟ್ಟರೆ ಬೇರೇನನ್ನೂ ಹೇಳಿಲ್ಲ
ದೇಶದಲ್ಲಿ ಜನರ ಕಷ್ಟಗಳು ದೊಡ್ಡದಾಗಿವೆ. ನೀವು ಎಷ್ಟು ಸಂಘರ್ಷ ಮಾಡುತ್ತಿದ್ದೀರ ಎಂಬುದು ನರೇಂದ್ರ ಮೋದಿ ಅವರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಪ್ರಧಾನ ಮಂತ್ರಿಗಳು ನಿಮ್ಮ ಹಳ್ಳಿ, ನಿಮ್ಮ ಮನೆಗಳಿಗೆ ಬರುತ್ತಿದ್ದರು. ಒಂದು ಕಾಲದಲ್ಲಿ ದೇಶದ ನಾಯಕರು ಸೇವಾ ಮನೋಭಾವದಿಂದ ಇರುತ್ತಿದ್ದರು. ಆದರೆ, ಇಂದಿನ ನಾಯಕನ ಬಳಿ ಅಹಾಂಕರ ಕಾಣುತ್ತಿದೆ. ಮೋದಿ ಸರ್ಕಾರ ಸುಳ್ಳು ಬಿಟ್ಟರೆ ಬೇರೆ ಏನನ್ನೂ ಹೇಳಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಬರ ಪರಿಹಾರದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಕಳಸಾ ಬಂಡೂರಿ ಯೋಜನೆಗೆ ಅನುಮತಿ ಕೊಟ್ಟಿಲ್ಲ. ಭದ್ರಾ ಯೋಜನೆಗೆ ಹಣ ಕೊಟ್ಟಿಲ್ಲ. ಕರ್ನಾಟಕಕ್ಕೆ ಯಾಕೆ ಮೋದಿ ಹೀಗೆ ಮಾಡುತ್ತಿದ್ದಾರೆ? ಯಾವ ರಾಜ್ಯದಲ್ಲಿ ಅವರಿಗೆ ಅಧಿಕಾರ ಇರುವುದದಿಲ್ಲವೋ ಅಲ್ಲಿ ಹಣ ಕೊಡೋದಿಲ್ಲ. ಕೇವಲ ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೆ ಮಾತ್ರ ಹಣ ಕೊಡಲಾಗುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದಾರೆ.
ಅಗ್ನಿಪಥ್‌ಗೆ ಬ್ರೇಕ್
ಗ್ಯಾರಂಟಿ ಯೋಜನೆಯಿಂದ ನಿಮ್ಮ ಬದುಕು ಬದಲಾಗಿಲ್ಲವಾ? ಸುಧಾರಣೆಯಾಗಿಲ್ಲವಾ ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ನ್ಯಾಯ ಪತ್ರವನ್ನು ಬಿಡುಗಡೆ ಮಾಡಿದೆ. ನಮ್ಮ ಪಕ್ಷ ಅಧಿಕಾರಿಕ್ಕೆ ಬಂದರೆ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಶೇಕಡಾ 50ರಷ್ಟನ್ನು ಮಹಿಳೆಯರಿಗೆ ಮೀಸಲಿಡುತ್ತೇವೆ. ಆರೋಗ್ಯ ವಿಮೆ, ಅಂಗನವಾಡಿ ಕಾರ್ಯಕರ್ತರ ಸಂಬಳವನ್ನು ಹೆಚ್ಚಳ ಮಾಡುತ್ತೇವೆ. ಶಿಕ್ಷಣಕ್ಕೆ ಸಾಲ ಕೊಡುತ್ತೇವೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಾಲ ಕೊಡುತ್ತೇವೆ. ನರೇಂದ್ರ ಮೋದಿ ಸರ್ಕಾರದಲ್ಲಿ ಎಷ್ಟು ಉದ್ಯೋಗ ಖಾಲಿ ಇದೆಯೋ ಅಷ್ಟನ್ನೂ ಭರ್ತಿ ಮಾಡುತ್ತೇವೆ. ಅಗ್ನಿಪಥ್ ನಿಲ್ಲಿಸಿ ಹಿಂದಿನ ರೀತಿಯಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.