Site icon Vistara News

Lok Sabha Election 2024: ಕಾಂಗ್ರೆಸ್‌ ಕೊಟ್ಟ ಚೆಂಬುಗಳ ಪಟ್ಟಿ ಕೊಟ್ಟ ಅಶೋಕ್‌; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ

Lok Sabha Election 2024 R Ashok attacks on Congress Chembu Advertisement

ಆನೇಕಲ್‌: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಗುದ್ದಾಟ ಜೋರಾಗಿ ನಡೆಯುತ್ತಿದೆ. ಈ ವೇಳೆ ಚೆಂಬು ಪಾಲಿಟಿಕ್ಸ್‌ (Chembu Politics) ಎಂಟ್ರಿ ಕೊಟ್ಟಿದೆ. ಈ ಬಗ್ಗೆ ಕಾಂಗ್ರೆಸ್‌ ನೀಡಿದ ಜಾಹೀರಾತಿಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ತಿರುಗೇಟು ನೀಡಿದ್ದು, ಕಾಂಗ್ರೆಸ್‌ ಕೊಟ್ಟಿರುವ ಚೆಂಬುಗಳೇನು ಎಂದು ಪಟ್ಟಿ ಮಾಡಿ ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಅವರ ತಂದೆ, ಕಾಂಗ್ರೆಸ್‌ ಕಾರ್ಪೊರೇಟರ್‌ಗೆ ಕೂಡ ಸರ್ಕಾರ ಸಹಾಯ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು (CM Siddaramaiah) ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಸಿ.ಎನ್‌. ಮಂಜುನಾಥ್‌ ಪರ ಚುನಾವಣಾ ಪ್ರಚಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌. ಅಶೋಕ್‌, ರಾಜ್ಯದಲ್ಲಿ ತಾಲಿಬಾನ್‌ ಸರ್ಕಾರ ಆಡಳಿತ ನಡೆಸುತ್ತಿದೆ. ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟು ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ದುಷ್ಟ ಕಾಂಗ್ರೆಸ್‌ ಉಂಟುಮಾಡಿದೆ. ಮುಸ್ಲಿಂ ಮತಾಂಧವಾದಿಗಳಿಗೆ ಈ ಸರ್ಕಾರದಲ್ಲಿ ಬಹಳ ಗೌರವವಿದೆ. ನೀವು ನಮ್ಮ ಮತ ಬ್ಯಾಂಕ್‌ ಆಗಿದ್ದು, ನಿಮ್ಮ ಪೂರ್ತಿ ರಕ್ಷಣೆ ಮಾಡುತ್ತೇವೆ ಎಂದು ಸರ್ಕಾರವೇ ಹೇಳಿದೆ. ಜೈ ಶ್ರೀರಾಮ್‌ ಎಂದರೆ, ಮೋದಿ ಕುರಿತು ಹಾಡು ಹಾಕಿದರೆ ಹೊಡೆಯುತ್ತಾರೆ. ಪಾಕ್‌ ಜಿಂದಾಬಾದ್‌ ಎಂದವರಿಗೆ ಬಿರಿಯಾನಿ ಜತೆಗೆ ಪಾಸ್‌ ಕೂಡ ಕೊಡುತ್ತಾರೆ ಎಂದರು.

ಡಿ.ಕೆ. ಸುರೇಶ್‌ ಅವರ ರ‍್ಯಾಲಿಯಲ್ಲಿ ಕೆಲವರು ಪಾಕಿಸ್ತಾನ ಜೈ ಎಂದಿದ್ದಾರೆ. ಆದರೆ ಡಿ.ಕೆ.ಸುರೇಶ್‌ ಏನೂ ಮಾತಾಡದೆ ಸುಮ್ಮನೆ ನಿಂತಿದ್ದರು. ಈಗಾಗಲೇ ಅವರು ದೇಶ ಒಡೆಯುವ ಮಾತನಾಡಿದ್ದಾರೆ. ಭಾರತ ಮಾತೆಯನ್ನು ಪ್ರೀತಿಸುವ ಬೆಂಗಳೂರು ಗ್ರಾಮಾಂತರದ ಜನರು ಇವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

ನೇಹಾ ಕೇಸ್‌ ಮುಚ್ಚಿ ಹಾಕಲು ಯತ್ನ

ಹುಬ್ಬಳ್ಳಿಯಲ್ಲಿ ನಡೆದ ಘಟನೆ ನೋಡಿದರೆ ಕಾಲೇಜು ಆವರಣದಲ್ಲೇ ಭದ್ರತೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಕೊಲೆಯಾದ ನೇಹಾ ತಂದೆ ಕಾಂಗ್ರೆಸ್‌ನ ಕಾರ್ಪೊರೇಟರ್‌ ಲವ್‌ ಜಿಹಾದ್‌ ಇದೆ ಎಂದಿದ್ದಾರೆ. ಕಾಂಗ್ರೆಸ್‌ ನಾಯಕರು ಹೀಗೆ ಮಾತನಾಡಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕುಟುಂಬದವರು ಹೇಳಿದ್ದಾರೆ. ಇಷ್ಟಾದರೂ ಕಾಂಗ್ರೆಸ್‌ ನಾಯಕರು ಇದು ಲವ್‌ ಕೇಸ್‌ ಎಂದು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆರ್‌. ಅಶೋಕ್‌ ದೂರಿದರು.

ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಹೇಗಾಗುತ್ತಾರೆ?

ರಾಮೇಶ್ವರಂ ಕೆಫೆಯಲ್ಲಿ ನಡೆದ ಘಟನೆ ಭಯೋತ್ಪಾದನಾ ಚಟುವಟಿಕೆಯಾಗಿದ್ದು, ಇದನ್ನು ಮಾಡುವವರೆಲ್ಲ ಡಿ.ಕೆ.ಶಿವಕುಮಾರ್‌ ಅವರ ಸಹೋದರರೇ ಆಗಿದ್ದಾರೆ. ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದವನನ್ನು ಬ್ರದರ್‌ ಎಂದ ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಹೇಗಾಗುತ್ತಾರೆ? ಒಕ್ಕಲಿಗ ಮುಖಂಡ ಎಂದು ಹೇಳಿಕೊಂಡು ಮತ ಯಾಚಿಸುವುದು ಹೇಗೆ ಸಾಧ್ಯ ಎಂದು ಆರ್‌. ಅಶೋಕ್‌ ಪ್ರಶ್ನೆ ಮಾಡಿದರು.

ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಹೇಳಿಕೆ ನೀಡಿದ ನಂತರ ಕ್ಷಮೆ ಕೇಳುತ್ತಾರೆ. ಕಾಂಗ್ರೆಸ್‌ ಕಾರ್ಪೊರೇಟರ್‌ ತಮ್ಮ ಜತೆ ಈಗ ಯಾರೂ ಇಲ್ಲ ಎಂದಿದ್ದಾರೆ. ಕಾಂಗ್ರೆಸ್‌ ನಾಯಕರು ತಮ್ಮ ಕಾರ್ಯಕರ್ತರನ್ನೇ ಬಿಟ್ಟುಬಿಡುತ್ತಾರೆ ಎಂದು ಆರ್‌. ಅಶೋಕ್‌ ಹೇಳಿದರು.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ಗೆ ಚೆಂಬು ಗ್ಯಾರಂಟಿ. ರಾಹುಲ್‌ ಗಾಂಧಿಗೆ ನಾವು ಚೆಂಬು ಕಳುಹಿಸಿಕೊಡಲಿದ್ದು, ಅವರು ವಿದೇಶಕ್ಕೆ ಹೋಗಿ ಏನಾದರೂ ಮಾಡಲಿ. ಸೋತ ಬಳಿಕ ಅವರು ಖಂಡಿತ ವಿದೇಶಕ್ಕೆ ಹೋಗುತ್ತಾರೆ ಎಂದು ಆರ್‌. ಅಶೋಕ್‌ ಲೇವಡಿ ಮಾಡಿದರು.

ಕಾಂಗ್ರೆಸ್‌ ಕೊಟ್ಟ ಚೆಂಬುಗಳು

ಕಾಂಗ್ರೆಸ್‌ ಸರ್ಕಾರ ರೈತರಿಗೆ ಬೋರ್‌ವೆಲ್‌ ಅನುದಾನ ಕಿತ್ತುಕೊಂಡು ಮೊದಲ ಚೆಂಬು ನೀಡಿದೆ. ಕಿಸಾನ್‌ ಸಮ್ಮಾನ್‌ ಕಿತ್ತುಕೊಂಡಿದ್ದು ಎರಡನೇ ಚೆಂಬು, ಹಾಲಿನ ಪ್ರೋತ್ಸಾಹಧನ ನುಂಗಿದ್ದು ಮೂರನೇ ಚೆಂಬು, ಬರಗಾಲದ್ದು ನಾಲ್ಕನೇ ಚೆಂಬು, ಕಾವೇರಿ ನೀರನ್ನು ಸ್ನೇಹಕ್ಕೆ ತಮಿಳುನಾಡಿಗೆ ಬಿಟ್ಟಿದ್ದು ಐದನೇ ಚೆಂಬು, ವಿದ್ಯುತ್‌ ಶುಲ್ಕ ಹೆಚ್ಚಿಸಿದ್ದು ಆರನೇ ಚೆಂಬು. ಹಾಲು, ಮೊಸರು ದರ ಹೆಚ್ಚಳ, ಆಲ್ಕೋಹಾಲ್‌ ಬೆಲೆ ಹೆಚ್ಚಳ ಸೇರಿದಂತೆ ಹಲವಾರು ಚೆಂಬುಗಳನ್ನು ನೀಡಿದೆ ಎಂದರು.

ಕಾಂಗ್ರೆಸ್‌ ಬಂತು ನಕ್ಸಲ್‌ ತಂತು

ಕಾಂಗ್ರೆಸ್‌ ಬಂತು, ಭಯೋತ್ಪಾದನೆ ಬಂತು, ನಕ್ಸಲ್‌ ಬಂತು, ಬಾಂಬ್‌ ಬಂತು ಎಂಬ ಸ್ಥಿತಿ ಉಂಟಾಗಿದೆ. ಹಿಂದೂಗಳನ್ನು ರಕ್ಷಿಸುವ ಶಕ್ತಿ ಇರುವುದು ಶಕ್ತಿಮಾನ್‌ ನರೇಂದ್ರ ಮೋದಿ ಅವರಿಗೆ ಮಾತ್ರ. ಮೋದಿ ಸರ್ಕಾರ ಬಂದ ಬಳಿಕ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದೆ. ಬಿಜೆಪಿ ಸರ್ಕಾರ ಇದ್ದಾಗ ಬಾಂಬ್‌ ಸ್ಫೋಟವಾದರೂ ಆಗ ಅವರನ್ನು ಬೆಂಬಲಿಸದೆ ಹೆಡೆಮುರಿ ಕಟ್ಟಿದ್ದೇವೆ ಎಂದರು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ನಲ್ಲಿ ಸ್ಕಾಟ್ಲೆಂಡ್, ಐರ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ; ರಣಜಿ ತಂಡ ಕಾಣಲ್ಲವೇ ಎಂದ ಮೋಹನ್‌ದಾಸ್‌ ಪೈ

ಬೆಂಗಳೂರು ಗ್ರಾಮಾಂತರ ಹೃದಯವಂತ ಮಂಜುನಾಥ್‌ ಬೇಕೋ, ಕಲ್ಲು ಹೃದಯದ ಕಟುಕ ಡಿ.ಕೆ.ಸುರೇಶ್‌ ಬೇಕೋ ಎಂದು ಜನರು ತೀರ್ಮಾನಿಸುತ್ತಾರೆ. ಮಂಜುನಾಥ್‌ ಮೂರು ಲಕ್ಷ ಅಂತರದಲ್ಲಿ ಗೆಲ್ಲುತ್ತಾರೆ. ಈ ಕ್ಷೇತ್ರವನ್ನೂ ಗೆದ್ದರೆ ಒಂದು ಸೀಟು ಕೂಡ ಕಾಂಗ್ರೆಸ್‌ಗೆ ಸಿಗುವುದಿಲ್ಲ ಎಂದರು.

ಪೆಟ್ರೋಲ್‌ ದರ ಏರಿಕೆ ಭಾರತದಲ್ಲಿ ನಿಯಂತ್ರಣದಲ್ಲಿದೆ. ಬೆಲೆ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿದೆ. ಪೆಟ್ರೋಲ್‌ ದರ ಇಡೀ ಜಗತ್ತಿನಲ್ಲಾಗಿದೆ. ಆಗ ರಷ್ಯಾದಿಂದ ತೈಲ ತರಿಸಿಕೊಳ್ಳಲಾಯಿತು ಎಂದು ಆರ್.‌ ಅಶೋಕ್‌ ಹೇಳಿದರು.

ರಾಜ್ಯ ಸರ್ಕಾರ ಬೀಳಲಿದೆ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಿದ್ದಾರೆ. ಶಾಸಕರು ಈಗ ಗಂಟು ಮೂಟೆ ಕಟ್ಟಿ ತಯಾರಾಗಿದ್ದಾರೆ. ಬಿಜೆಪಿಯವರು ಸರ್ಕಾರ ಬೀಳಿಸುವುದಿಲ್ಲ ಎಂದು ಹೇಳಿದರು.

Exit mobile version