ಶಿವಮೊಗ್ಗ/ಬಾಗಲಕೋಟೆ: ಲೋಕಸಭೆ ಚುನಾವಣೆ (Lok Sabha Election 2024) ಕಣದಲ್ಲಿರುವ ಶಿವಮೊಗ್ಗದ (Shimogga) ಬಿಜೆಪಿ ಅಭ್ಯರ್ಥಿ (BJP Candidate) ಬಿ.ವೈ.ರಾಘವೇಂದ್ರ (BY Raghavendra), ಬಾಗಲಕೋಟೆಯ (Bagalakote) ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ (PC Gaddigoudar) ಹಾಗೂ ಕಲಬುರಗಿಯ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಇಂದು ತಮ್ಮ ನಾಮಪತ್ರಗಳನ್ನು (Nomination) ಸಲ್ಲಿಸಲಿದ್ದಾರೆ. ಮೂರೂ ಕಡೆ ಬಿಜೆಪಿ ಶಕ್ತಿಪ್ರದರ್ಶನ ನಡೆಯಲಿದೆ.
ಶಿವಮೊಗ್ಗದಲ್ಲಿ ರಾಘವೇಂದ್ರ ಬೃಹತ್ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ರೋಡ್ ಶೋನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಬಿಜೆಪಿ ಬೃಹತ್ ಮೆರವಣಿಗೆ ನಡೆಸಲಿದೆ. ಮೆರವಣಿಗೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.
ಇಂದು ನಾಮಪತ್ರ ಸಲ್ಲಿಸುವ ಹಿನ್ನೆಲೆ ನಿನ್ನೆ ವಿವಿಧ ದೇವಸ್ಥಾನಗಳಿಗೆ ರಾಘವೇಂದ್ರ ಭೇಟಿ ನೀಡಿದ್ದರು. ಇಂದು 11:45ರ ಸುಮಾರಿಗೆ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಬಂಡಾಯದ ಬಾವುಟ ಹಾರಿಸಿದ್ದು, ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹಲವು ಬಿಜೆಪಿ ನಾಯಕರು ಮನವೊಲಿಸಲು ಪ್ರಯತ್ನಿಸಿದ್ದು, ಈಶ್ವರಪ್ಪ ಒಪ್ಪಿಲ್ಲ.
ಗದ್ದಿಗೌಡರ್ ಶಕ್ತಿಪ್ರದರ್ಶನ
ಬಾಗಲಕೋಟೆ: ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುನ್ನ ಬಿಜೆಪಿ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ನಗರದ ಬಸವೇಶ್ವರ ಕಾಲೇಜು ಆವರಣದಲ್ಲಿರುವಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಬಿಜೆಪಿ ಮೆರವಣಿಗೆ ಆರಂಭವಾಗಲಿದ್ದು, ಬಸವೇಶ್ವರ ವೃತ್ತ, ರೈಲ್ವೆ ನಿಲ್ದಾಣ, ರೋಟರಿ ಸರ್ಕಲ್, ಎಪಿಎಂಸಿ ಮಾರ್ಗವಾಗಿ ಡಿಸಿ ಕಚೇರಿವರೆಗೂ ನಡೆಯಲಿದೆ.
ಬಳಿಕ ಬಾಗಲಕೋಟೆ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಜಾನಕಿ ಕೆ.ಎಮ್. ಅವರಿಗೆ ಪಿ.ಸಿ. ಗದ್ದಿಗೌಡರ್ ನಾಮಪತ್ರ ಸಲ್ಲಿಸಲಿದ್ದಾರೆ. ಕೇಸರಿ ಕಲಿಗಳ ದುಂದುಭಿ ಮೊಳಗಲಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬಾಲಚಂದ್ರ ಜಾರಕಿಹೊಳಿ, ದೊಡ್ಡನಗೌಡ ಪಾಟೀಲ್ ಕುಷ್ಟಗಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ಸತತ ನಾಲ್ಕು ಬಾರಿ ಗೆದ್ದು ಬೀಗಿರುವ ಗದ್ದಿಗೌಡರ್, ಐದನೇ ಬಾರಿ ಮತ್ತೆ ಗೆಲುವಿನ ವಿಶ್ವಾಸದಲ್ಲಿ ಸ್ಪರ್ಧಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಉಮೇಶ್ ಜಾಧವ್ ನಾಮಪತ್ರ
ಕಲಬುರಗಿ: ಕಲಬುರಗಿಯಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ, ಅರವಿಂದ ಲಿಂಬಾವಳಿ, ವಿ.ರಾಜೀವ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆಯಾಗಲಿದೆ.
ಕಲಬುರ್ಗಿ ನಗರದ ನಗರೇಶ್ವರ ಶಾಲೆಯಿಂದ ಜಗತ ವೃತ್ತದ ವರೆಗೆ ಬಿಜೆಪಿ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಕಚೇರಿಯ ವರೆಗೆ ಬೃಹತ್ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಬಳಿಕ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್ ಅವರಿಗೆ ನಾಮಪತ್ರ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ: Lok Sabha Election 2024: ಜಯ ಘೋಷದ ಮಧ್ಯೆ ಪ್ರಲ್ಹಾದ್ ಜೋಶಿ ನಾಮಪತ್ರ ಸಲ್ಲಿಕೆ