ಬೆಳಗಾವಿ: ಬಿಜೆಪಿ ಸಮಾವೇಶದಲ್ಲಿ ಕೂಗಲಾಗುವ “ಜೈ ಶ್ರೀರಾಮ್” ಘೋಷಣೆ (Jai Shri Ram slogan) ಬಗ್ಗೆ ಲೋಕಸಭಾ ಚುನಾವಣಾ (Lok Sabha Election 2024) ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗೆ ಘೋಷಣೆ ಕೂಗುವವರು ಭಿಕಾರಿಗಳು ಎಂದು ಕಿಡಿಕಾರಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಹಿಂದೆ ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರಚಾರ ಮಾಡುವ ವೇಳೆ ಕಡಿಮೆ ಲೀಡ್ ಕೊಟ್ಟರೆ ಕರೆಂಟ್ ಕಟ್ ಎಂಬ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಬೆಳಗಾವಿಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ರಾಜು ಕಾಗೆ, ಬಿಜೆಪಿಯವರು ಪ್ರತಿ ಸಮಾವೇಶ, ರೋಡ್ ಶೋಗಳಲ್ಲಿ ‘ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾರೆ. ಇಂಥದ್ದನ್ನೆಲ್ಲ 40 ವರ್ಷಗಳ ಹಿಂದೆಯೇ ನಾನು ಮಾಡಿ ಬಿಟ್ಟಿದ್ದೇನೆ. ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ನಾನು ಸಮರ್ಥವಾಗಿ ಉತ್ತರ ಕೊಡುತ್ತೇನೆ. ಅವರು ಗತಿ ಇಲ್ಲದ ಭಿಕಾರ್ ಛೋಟ್ (ಗತಿ ಇಲ್ಲದ ಭಿಕಾರಿಗಳು) ಇದ್ದಾರೆ ಎಂದು ನಾವು ಆ ಲೆವೆಲ್‌ಗೆ ಇಳಿಯುವುದಕ್ಕೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಆಕ್ಷೇಪ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಬಿಟ್ಟು ರಾಮಮಂದಿರ ನಿರ್ಮಾಣ ಮಾಡುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ರಾಜು ಕಾಗೆ, ಕೇವಲ ಗುಡಿಗಳನ್ನು ಕಟ್ಟುವುದರಿಂದ ಸವರ್ಣೀಯರಾಗುತ್ತೇವೆಂದರೆ ನಾವು ಕೂಡ ನಿರಂತರವಾಗಿ ಗುಡಿಗಳನ್ನು ಕಟ್ಟುತ್ತೇವೆ. ನಾವು ನಮ್ಮಲ್ಲಿರುವ ವ್ಯವಸ್ಥೆಗಳ ಬಗ್ಗೆ ವಿಚಾರ ಮಾಡಬೇಕು. ಅದೆಲ್ಲವನ್ನು ಬಿಟ್ಟು ಬಿಜೆಪಿಯವರು ಬಂದ ತಕ್ಷಣ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಕೂಗುವುದಲ್ಲ ಎಂದು ಕಿಡಿಕಾರಿದ್ದಾರೆ.
ಜೈ ಶ್ರೀರಾಮ್ ಘೋಷಣೆ ಕೂಗುವವರಿಗೆ ನಾನು ಉತ್ತರ ಕೊಡಬಹುದು. ಆದರೆ, ಅಂಥ ಲೆವೆಲ್‌ಗೆ ಇಳಿಯಲು ನನ್ನಿಂದ ಆಗುವುದಿಲ್ಲ. ಇದಕ್ಕೆಲ್ಲ ಈಗ ಮತದಾರರೇ ತಕ್ಕ ಉತ್ತರ ನೀಡಬೇಕು ಎಂದು ರಾಜು ಕಾಗೆ ಹೇಳಿದ್ದಾರೆ.
ಕರೆಂಟ್ ಕಟ್ ಹೇಳಿಕೆಗೆ ಚುನಾವಣಾ ಆಯೋಗ ನೋಟಿಸ್
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಪರ ಗುರುವಾರ ಮತಯಾಚನೆ ಮಾಡಿದ್ದ ರಾಜು ಕಾಗೆ, “ಜುಗುಳ ಮತ್ತು ಮಂಗಾವತಿ ಗ್ರಾಮಗಳಲ್ಲಿ ಕಡಿಮೆ ಲೀಡ್ ಕೊಟ್ಟಲ್ಲಿ ಕರೆಂಟ್ ಕಟ್” ಮಾಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ನೋಟಿಸ್ ನೀಡಿದ್ದು, 24 ಗಂಟೆಯೊಳಗಾಗಿ ವಿವರಣೆ ನೀಡುವಂತೆ ಸೂಚನೆ ನೀಡಿದ್ದಾರೆ.