Site icon Vistara News

Lok Sabha Election 2024: ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಾರಾ ರಾಬರ್ಟ್ ವಾದ್ರಾ? ಪ್ರಿಯಾಂಕಾ ಪತಿ ಹೇಳಿದ್ದೇನು?

Lok Sabha Election 2024

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಕಣ ರಂಗೇರಿದೆ. ರಾಜಕೀಯ ಪಕ್ಷಗಳು ಅಳೆದೂ ತೂಗಿ ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿವೆ. ಈ ಮಧ್ಯೆ ಗುರುವಾರ (ಏಪ್ರಿಲ್‌ 4) ಉದ್ಯಮಿ ಮತ್ತು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪತಿ ರಾಬರ್ಟ್ ವಾದ್ರಾ (Robert Vadra) ಹೇಳಿಕೆಯೊಂದನ್ನು ನೀಡಿ ಮುಂದೊಂದು ದಿನ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಅಮೇಥಿ ಕ್ಷೇತ್ರದಿಂದ ಹಾಲಿ ಸಂಸದೆ ಸ್ಮೃತಿ ಇರಾನಿ (Smriti Irani) ವಿರುದ್ಧ ನಾನು ಸ್ಪರ್ಧಿಸಬೇಕೆಂದು ಜನರು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

“ಅಮೇಥಿಯ ಜನರು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡಿದ್ದಾರೆ. ಈಗ ಅವರು ಗಾಂಧಿ ಕುಟುಂಬದ ಸದಸ್ಯರು ಕ್ಷೇತ್ರವನ್ನು ಪ್ರತಿನಿಧಿಸಬೇಕೆಂದು ಬಯಸುತ್ತಿದ್ದಾರೆ. ಒಂದು ವೇಳೆ ನಾನು ರಾಜಕೀಯಕ್ಕೆ ಬಂದರೆ ಅಮೇಥಿಯನ್ನು ಆಯ್ಕೆ ಮಾಡಬೇಕು ಎಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ. ಪ್ರಿಯಾಂಕಾ ಅವರೊಂದಿಗೆ ನನ್ನ ಮೊದಲ ರಾಜಕೀಯ ಪ್ರಚಾರ 1999ರಲ್ಲಿ ಅಮೇಥಿಯಲ್ಲಿಯೇ ನಡೆಯಿತು” ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಸೋಲಿಸಿದ ನಂತರ ಅಮೇಥಿ ದೇಶದ ಗಮನ ಸೆಳೆದಿತ್ತು. ಈ ಬಾರಿಯೂ ಸ್ಮೃತಿ ಇರಾನಿ ಇಲ್ಲಿಂದಲೇ ಕಣಕ್ಕಿಳಿಯುತ್ತಿದ್ದಾರೆ. ರಾಹುಲ್ ಗಾಂಧಿ ಅವರು 2004, 2009 ಮತ್ತು 2014ರಲ್ಲಿ ಅಮೇಥಿಯಲ್ಲಿ ಗೆದ್ದಿದ್ದರು. 2019ರಲ್ಲಿ ರಾಹುಲ್‌ ಗಾಂಧಿ ಅಮೇಥಿ ಜತೆಗೆ ವಯನಾಡಿನಿಂದಲೂ ಸ್ಪರ್ಧಿಸಿದ್ದರು. ಈ ಬಾರಿ ರಾಹುಲ್‌ ಗಾಂಧಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ್ದರೆ, ಅಮೇಥಿ ಮತ್ತು ರಾಯ್‌ಬರೇಲಿಗೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಅಮೇಥಿಯ ಹೊರತಾಗಿ, ಹಾಲಿ ಸಂಸದೆ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ತೆರಳಿದ್ದರಿಂದ ಅವರು ಪ್ರತಿನಿಧಿಸುತ್ತಿರುವ ರಾಯ್‌ಬರೇಲಿ ಕೂಡ ಈ ಬಾರಿ ಗಮನ ಸೆಳೆದಿದೆ.

ಈ ಬಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಯ್‌ಬರೇಲಿಯಿಂದ ಚುನಾವಣಾ ಕಣಕ್ಕೆ ಇಳಿಯಬಹುದು ಎಂಬ ಊಹಾಪೋಹಗಳು ಹಬ್ಬಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈಗ ರಾಬರ್ಟ್ ವಾದ್ರಾ ಅವರ ಹೇಳಿಕೆಯು ಅವರು ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಬಹುದು ಎನ್ನುವ ಗಾಳಿಸುದ್ದಿ ಹಬ್ಬಲು ಕಾರಣವಾಗಿದೆ.

ರಾಬರ್ಟ್ ವಾದ್ರಾ ಹೇಳಿದ್ದೇನು?

“ಅಮೇಥಿಯು ಹಾಲಿ ಸಂಸದರ (ಸ್ಮೃತಿ ಇರಾನಿ) ಬಗ್ಗೆ ಅಸಮಾಧಾನಗೊಂಡಿದೆ. ಹಾಲಿ ಸಂಸದರು ಸಾಕಷ್ಟು ಗದ್ದಲ ಮಾಡಲು, ಗಾಂಧಿ ಕುಟುಂಬವನ್ನು ದೂಷಿಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ರಾಯ್‌ಬರೇಲಿ, ಅಮೇಥಿ ಮತ್ತು ಸುಲ್ತಾನ್‌ಪುರದಲ್ಲಿ ಗಾಂಧಿ ಕುಟುಂಬವು ಹಲವು ವರ್ಷಗಳಿಂದ ಕಷ್ಟಪಟ್ಟು ಕೆಲಸ ಮಾಡಿದೆ. ಅಮೇಥಿಯ ಜನರು ಈಗಲೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ನನ್ನ ಜನ್ಮದಿನದಂದು ಶುಭ ಹಾರೈಸುತ್ತಾರೆ” ಎಂದು ವಾದ್ರಾ ಹೇಳಿದ್ದಾರೆ. ಸದ್ಯ ಅವರ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Smriti Irani: ಸಂಬಳ ಬಾಕಿ ಇಟ್ಟು ಸತಾಯಿಸಿದ ಅಧಿಕಾರಿ, ಶಿಕ್ಷಕಿಗೆ ಸ್ಮೃತಿ ಇರಾನಿ ನೆರವು

ಸ್ಮೃತಿ ಇರಾನಿ ಅವರು ಅಮೇಥಿ ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುವ ಗೌರಿಗಂಜ್ ವಿಧಾನಸಭಾ ಕ್ಷೇತ್ರದ ಮೇದನ್ ಮಾವಾಯಿ ಗ್ರಾಮದ ಬೂತ್ ಸಂಖ್ಯೆ 347ರ ಮತದಾರರಾಗಿದ್ದು, ಅವರ ಹೊಸ ಮನೆ ಅದೇ ಗ್ರಾಮದಲ್ಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version