Site icon Vistara News

Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ 5 ಸಾವಿರ ರೂ. ಕಾರ್ಡ್‌ ಹಂಚುತ್ತಿರುವ ಡಿಕೆ ಬ್ರದರ್ಸ್‌! ಮುನಿರತ್ನ ಆಕ್ರೋಶ

Lok Sabha Election 2024 Rs 5000 in Bengaluru Rural DK Brothers distributing cards says Munirathna

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಎಲ್ಲಿ ನೋಡಿದರೂ ಪ್ರಚಾರದ ಭರಾಟೆ. ಈ ನಡುವೆ ಗಿಫ್ಟ್‌ ಪಾಲಿಟಿಕ್ಸ್‌ ಶುರುವಾಗಿದೆ. ಮತದಾರರಿಗೆ ಸೀರೆ, ಕುಕ್ಕರ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ಕೊಡುವ ಮೂಲಕ ಆಮಿಷ ವೊಡ್ಡಲಾಗುತ್ತಿದೆ. ಈಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಕಾಂಗ್ರೆಸ್‌ ವಿರುದ್ಧ “ಕಾರ್ಡ್ ಪಾಲಿಟಿಕ್ಸ್”ನ (Card Politics) ಗಂಭೀರ ಆರೋಪವೊಂದು ಕೇಳಿಬಂದಿದೆ. ಪ್ರತಿ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಕಾರ್ಡ್ ಕೊಡಲಾಗುತ್ತಿದೆ ಎಂದು ಶಾಸಕ ಮುನಿರತ್ನ (MLA Muniratna) ಆರೋಪ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ ಅವರು ಡಿಕೆ ಬ್ರದರ್ಸ್‌ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಹಿಂದೆ ಐದು ಸಾವಿರ ರೂಪಾಯಿ ಕಾರ್ಡ್ ಹಂಚಿಕೆ ಮಾಡಿ ಐದು ಕ್ಷೇತ್ರಗಳನ್ನು ಗೆದ್ದಿದ್ದರು. ಈಗ ಮತ್ತೆ ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆ. ಶೆಟ್ಟಿ ಕೊಟ್ಟಿರುವ ಸಾಲ ವಾಪಸ್‌ ಕೊಟ್ಟರೆ, ಹೊಸ ಸಾಲ ಕೊಡ್ತಾನೆ. ಇನ್ನು ಆ ಕಾರ್ಡ್ ಕೊಟ್ಟಿರುವ ಐದು ಸಾವಿರ ರೂಪಾಯಿ ತೀರಿಸಿಲ್ಲ. ಈ ಚುನಾವಣೆಯಲ್ಲಿ ನಮ್ಮ ಮತದಾರ ಪ್ರಭು ತೀರಿಸುತ್ತಾನೆ ಎಂದು ಆರೋಪ ಮಾಡಿದರು.

ಡಿಕೆಶಿ ನೋಟು ಡಾಕ್ಟರ್‌ಗೆ ವೋಟು

ನಮ್ಮ ಕ್ಷೇತ್ರದಲ್ಲಿ ರೌಡಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರೆ ಊರು ಬಿಟ್ಟು ಹೋಗು ಅಂತ ಧಮ್ಕಿ ಹಾಕುತ್ತಿದ್ದಾರೆ. ಕನಕಪುರದಲ್ಲಿ ಹುಟ್ಟಿ ಬೆಳೆದವರು ಈ ರೀತಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ದುಡ್ಡು, ಅಪಾರ್ಟ್ಮೆಂಟ್‌ಗಳ ದುಡ್ಡು ಬರುತ್ತಿದೆ ಅಂತ ಜನ ಹೇಳುತ್ತಿದ್ದಾರೆ. ಎಡಗೈಯಲ್ಲಿ ಅವರಿಂದ ಹಣ ಪಡೆಯಿರಿ, ಬಲಗೈಯಲ್ಲಿ ಮಂಜುನಾಥ್‌ಗೆ ವೋಟ್ ಹಾಕಿ. ಡಿಕೆಶಿ ನೋಟು ಡಾಕ್ಟರ್‌ಗೆ ವೋಟು ಅಂತ ಹೇಳುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಹತ್ತು ವರ್ಷಗಳಿಂದ ಇರುವ ಬೇವು ಹೋಗಿ ಬೆಲ್ಲ ಸಿಗಲಿ ಎಂದು ಮುನಿರತ್ನ ಹೇಳಿದರು.

ಮಂಜುನಾಥ್‌ 38 ವರ್ಷ ಸಂಬಳದಲ್ಲಿ ಬದುಕಿದ್ದಾರೆ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅಳಿಯನಾದರೂ ಒಂದು ದಿನವೂ ರಾಜಕಾರಣಕ್ಕೆ ಬರಲಿಲ್ಲ. ಯಾಕೆಂದರೆ ಮಕ್ಕಳಿಗಿಂತ ಆಳಿಯಂದಿರು ಬುದ್ಧಿವಂತರು ಇರುತ್ತಾರೆ. ಅವರು ಮನಸ್ಸು ಮಾಡಿದರೆ ಯಾವತ್ತೋ ಅಧಿಕಾರ ಹಿಡಿಯಬಹುದಿತ್ತು. 38 ವರ್ಷ ಸಂಬಳದಲ್ಲಿ ಬದುಕಿದ್ದಾರೆ. ಇಂಥವರನ್ನ‌ ಬಿಟ್ಟು ಕೊಡುತ್ತೇವಾ ಎಂದು ಜನರೇ ಹೇಳುತ್ತಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.

ಇದನ್ನೂ ಓದಿ: Namma Metro: ಮತ್ತೆ ಅವಮಾನ ಮಾಡಿದ ನಮ್ಮ ಮೆಟ್ರೋ; ಬಟನ್‌ ಇಲ್ಲದ್ದಕ್ಕೆ ಕಾರ್ಮಿಕನಿಗೆ ಪ್ರವೇಶ ನೀಡದ ಸಿಬ್ಬಂದಿ!

ಕ್ಷೇತ್ರ ಬಿಡಲು ಬೆದರಿಕೆ

ಕ್ಷೇತ್ರದಲ್ಲಿ ಮತದಾರರಿಗೆ ಬೆದರಿಕೆ ಹಾಕಲಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಇರುವವರನ್ನು ಕ್ಷೇತ್ರ ಬಿಡಲು ಸೂಚಿಸುತ್ತಿದ್ದಾರೆ. ಹಣದ ಆಮಿಷ ತೋರಿಸುತ್ತಿದ್ದಾರೆ. ಕಾರ್ಡ್ ಹಂಚಿಕೆ ಮಾಡುತ್ತಿದ್ದಾರೆ. ಒಂದು ಪ್ರಿಂಟ್ ಪೇಪರ್ ಕೊಟ್ಟು ಆಮಿಷ ತೋರಿಸುತ್ತಿದ್ದಾರೆ ಎಂದು ಡಿಕೆಶಿ ಬ್ರದರ್ಸ್ ವಿರುದ್ಧ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

Exit mobile version