Site icon Vistara News

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

Lok Sabha Election 2024 Sanganna Karadi rebels quell and assure to support koppala BJP Candidate

ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ಬಿರುಸುಗೊಳ್ಳುತ್ತಿದೆ. ಕರ್ನಾಟಕದ ಬಹುತೇಕ ಕ್ಷೇತ್ರಗಳಿಗೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಘೋಷಿಸಿವೆ. ಈ ನಡುವೆ ಕೆಲವು ಕಡೆ ಎರಡೂ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿಗೆ ಕೊಪ್ಪಳ ಲೋಕಸಭಾ ಕ್ಷೇತ್ರವೊಂದು (Koppala Lok Sabha constituency) ತಲೆನೋವಾಗಿ ಪರಿಣಮಿಸಿತ್ತು. ಈ ಕ್ಷೇತ್ರದ ಹಾಲಿ ಸಂಸದ ಸಂಗಣ್ಣ ಕರಡಿ (Sanganna Karadi) ಅವರಿಗೆ ಟಿಕೆಟ್‌ ಮಿಸ್‌ ಆಗಿದ್ದಕ್ಕೆ ಗರಂ ಆಗಿದ್ದರು. ಆದರೆ, ಈಗ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಮಧ್ಯಪ್ರವೇಶದಿಂದ ಎಲ್ಲವೂ ಸುಖಾಂತ್ಯ ಕಂಡಿದೆ. ಪಕ್ಷಕ್ಕಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿಗಾಗಿ (PM Narendra Modi) ಕೆಲಸ ಮಾಡುವುದಾಗಿ ಕರಡಿ ಹೇಳಿದ್ದಾರೆ. ಈ ವೇಳೆ ಅವರಿಗೆ ರಾಜ್ಯಸಭೆ ಇಲ್ಲವೇ ವಿಧಾನ ಪರಿಷತ್‌ ಟಿಕೆಟ್‌ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಕರಡಿ ಸಂಗಣ್ಣ ಮತ್ತವರ ಬೆಂಬಲಿಗರ ಸಭೆಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಜತೆಗಿದ್ದರು. ಸಭೆಯಲ್ಲಿ ಸಂಗಣ್ಣ ಕರಡಿ ಮತ್ತು ಬೆಂಬಲಿಗರ ಭಾವನೆಗಳನ್ನು ಕೇಳಿ, ಅಭಿಪ್ರಾಯವನ್ನು ಪಡೆಯಲಾಗಿದೆ. ಅಲ್ಲದೆ, ಈ ತೀರ್ಮಾನವನ್ನು ಹೈಕಮಾಂಡ್‌ (BJP High Command) ಏಕೆ ಪಡೆದುಕೊಂಡಿದೆ ಎಂಬ ಬಗ್ಗೆ ಕಾರಣವನ್ನು ಹೇಳಿ ಸಮಾಧಾನ ಪಡಿಸಲಾಗಿದೆ. ಜತೆಗೆ ಕೂಡಲೇ ಚುನಾವಣಾ ಕೆಲಸವನ್ನು ಪ್ರಾರಂಭ ಮಾಡುವಂತೆ ಸೂಚಿಸಲಾಗಿದೆ. ಇದೆಲ್ಲರ ಮಧ್ಯೆ ಕರಡಿ ಸಂಗಣ್ಣ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಗೌರವ ನೀಡುವ ವಿಚಾರವೂ ಚರ್ಚೆಯಾಗಿದ್ದು, ಈ ಬಗ್ಗೆ ಭರವಸೆ ಸಿಕ್ಕಿದೆ ಎನ್ನಲಾಗಿದೆ.

ಲೋಕಸಭೆಯಲ್ಲಿ (Lok Sabha Election 2024) ಪಕ್ಷದ ಪರ ಕರಡಿ ಕೆಲಸ

ಸಭೆ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ‌ ಮಾತನಾಡಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಎಲ್ಲ ವಿವರಗಳನ್ನು ಕೇಳಲಾಗಿದೆ. ಸಂಗಣ್ಣ ಅವರಿಗೆ ಪಕ್ಷದ ವತಿಯಿಂದ ಕೆಲಸ ಮಾಡಿಕೊಡುವ ನಿರ್ಧಾರ ಮಾಡಲಾಗಿದೆ. ಪಕ್ಷದ ನಿರ್ಣಯವನ್ನು ಅವರು ಒಪ್ಪಿದ್ದಾರೆ. ಸಂಗಣ್ಣ ಅವರಿಗೆ ಟಿಕೆಟ್ ಸಿಗದಿದ್ದರೂ ಶಾಂತಿಯುತವಾಗಿ ಬಂದು ಚರ್ಚೆ ಮಾಡಿದ್ದಾರೆ. ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಚುನಾವಣೆಯಲ್ಲಿ (Lok Sabha Election 2024) ಅಭ್ಯರ್ಥಿ ಪರ ಪ್ರಚಾರ

ಬಳಿಕ ಸಂಸದ ಕರಡಿ ಸಂಗಣ್ಣ ಪ್ರತಿಕ್ರಿಯೆ ನೀಡಿ, ನನಗೆ ಲೋಕಸಭಾ ಚುನಾವಣೆ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಹಿರಿಯರು, ಕಾರ್ಯಕರ್ತರು ಮುಖಂಡರಿಗೆ ಪ್ರಶ್ನೆ ಮಾಡಿದರು. ನಮ್ಮ ಸುಪ್ರೀಂ ನಾಯಕರಾದ ಬಿ.ಎಸ್.‌ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರಲ್ಹಾದ್ ಜೋಶಿ ಎಲ್ಲರೂ ಸಮಸ್ಯೆಯನ್ನು ಆಲಿಸಿದ್ದಾರೆ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ನಮ್ಮ ಗುರಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು. ಏನೇ ಇದ್ದರೂ ಸರಿದೂಗಿಸಿಕೊಂಡು ಹೋಗುತ್ತೇನೆ. ಬಸವರಾಜ್ ಕ್ಯಾವಟೂರ್ ಇದರ ಒಂದು ಭಾಗ. ಅದರ ಬಗ್ಗೆ ನಾನು ಮಾತನಾಡಲ್ಲ. ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಹಾಗೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಮೋದಿ ಗೆಲುವಿಗಾಗಿ ಈ 4 ವರ್ಗಗಳನ್ನು ಟಾರ್ಗೆಟ್‌ ಮಾಡಿದ ಬಿಜೆಪಿ

ರಾಜ್ಯಸಭೆ ಟಿಕೆಟ್‌ ಕೊಡುವ ಭರವಸೆ

ಟಿಕೆಟ್‌ ಮಿಸ್‌ ಆಗಿದ್ದರ ಬಗ್ಗೆ ಇರುವ ಬೇಸರವನ್ನು ಸಭೆಯಲ್ಲಿ ಹೇಳುವ ಕೆಲಸ ಆಗಿದೆ. ಬಸವರಾಜ್ ಕ್ಯಾವಟ್ಟೂರು ಪರ ಪ್ರಚಾರ ಮಾಡುತ್ತೇನೆ. ಪಕ್ಷದ ಕೆಲಸ ಮಾಡುತ್ತೇನೆ. ಮುಂದೆ ರಾಜ್ಯಸಭಾ ಅಥವಾ ವಿಧಾನ ಪರಿಷತ್ ಸ್ಥಾನವನ್ನು ಕೊಡುವ ಬಗ್ಗೆ ಚರ್ಚೆಯಾಗಿದೆ. ಮುಂದೆ ಏನಾಗಲಿದೆ ಎಂಬುದನ್ನು ನೋಡೋಣ ಎಂದು ಕರಡಿ ಸಂಗಣ್ಣ ಹೇಳಿದರು.

Exit mobile version