Site icon Vistara News

Lok Sabha Election 2024: ಸಂಸತ್‌ ಸ್ಥಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಗಣ್ಣ ಕರಡಿ ರಾಜೀನಾಮೆ; ನಾಳೆ ಕಾಂಗ್ರೆಸ್‌ ಸೇರ್ಪಡೆ?

Lok Sabha Election 2024 Sanganna Karadi resigns from primary membership of BJP

ಕೊಪ್ಪಳ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಸಂಸದ ಸಂಗಣ್ಣ ಕರಡಿ (Sanganna Karadi) ಅವರು ಲೋಕಸಭಾ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಅವರು ಬುಧವಾರ (ಏಪ್ರಿಲ್‌ 17) ಸಿಎಂ ಸಿದ್ದರಾಮಯ್ಯ (CM Siddaramaiah) ಸಮ್ಮುಖದಲ್ಲಿ ಕಾಂಗ್ರೆಸ್‌ (Congress Karnataka) ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಅವರ ಬದಲಿಗೆ ಡಾ‌. ಬಸವರಾಜ ಕ್ಯಾವಟೋರ್ ಅವರಿಗೆ ಟಿಕೆಟ್‌ ನೀಡಿದ್ದರಿಂದ ಬಂಡಾಯದ ಕಹಳೆ ಊದಿದ್ದರು. ಆದರೆ, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿ ಮಾಡಿದ್ದರು. ಅಲ್ಲದೆ, ಅವರಿಗೆ ರಾಜ್ಯಸಭೆಗೆ ಆಯ್ಕೆ ಮಾಡುವ ಭರವಸೆಯನ್ನೂ ನೀಡಲಾಗಿತ್ತು. ಕೊನೆಗೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಸಂಗಣ್ಣ ಕರಡಿ ಸಹ ಒಪ್ಪಿಕೊಂಡಿದ್ದರು.

ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದು ಅಂದುಕೊಳ್ಳುವಷ್ಟರಲ್ಲಿ ಸಂಗಣ್ಣ ಕರಡಿ ತಮ್ಮ ಮನಸ್ಸನ್ನು ಬದಲಾಯಿಸಿದ್ದರು. ಕೆಲವು ಕಾಂಗ್ರೆಸ್‌ ಮುಖಂಡರು ಅವರನ್ನು ಸಂಪರ್ಕ ಮಾಡಿದ್ದರು. ಈ ವೇಳೆ ಕೆಲವು ಸುತ್ತಿನ ಚರ್ಚೆಗಳು ಸಹ ನಡೆದಿವೆ. ಹೀಗಾಗಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ತಮ್ಮ ಲೋಕಸಭಾ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.

ಲೋಕಸಭಾಧ್ಯಕ್ಷರಿಗೆ ಇ- ಮೇಲ್ ಮೂಲಕ ರಾಜಿನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ಹತ್ತು ವರ್ಷದಿಂದ ಲೋಕಸಭಾ ಸದಸ್ಯರಾಗಿದ್ದ ಸಂಗಣ್ಣ ಕರಡಿ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಆದರೆ, ಬಿಜೆಪಿಯೊಂದಿಗಿನ ತಮ್ಮ ಹಲವು ವರ್ಷಗಳ ಸಂಬಂಧವನ್ನು ಕಡಿದುಕೊಂಡಿದ್ದು, ಈಗ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

ಇದರ ಜತೆಗೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಸಂಗಣ್ಣ ಕರಡಿ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಇ-ಮೇಲ್ ಮೂಲಕ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆ?

ಬುಧವಾರ (ಏಪ್ರಿಲ್‌ 17) ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಸಂಬಂಧ ಕೆಲವು ಸುತ್ತಿನ ಮಾತುಕತೆ ಸಹ ನಡೆದಿವೆ ಎನ್ನಲಾಗಿದೆ. ಅಲ್ಲದೆ, ಬಿಜೆಪಿಯಲ್ಲಿ ಟಿಕೆಟ್‌ ಸಿಗದೇ ಇರುವುದಕ್ಕೆ ಮುನಿಸಿಕೊಂಡಿರುವ ಕರಡಿಯನ್ನು ಪಕ್ಷಕ್ಕೆ ಸೆಳೆದರೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್‌ ಹಾಕಿಕೊಂಡಿತ್ತು. ಹೀಗಾಗಿ ನಿರಂತರವಾಗಿ ಸಂಪರ್ಕ ಸಾಧಿಸಿ ಕರಡಿಯನ್ನು ಕಾಂಗ್ರೆಸ್‌ನತ್ತ ಸೆಳೆಯುವಲ್ಲಿ ಯಶ ಕಾಣಲಾಗಿದೆ ಎಂದೇ ಹೇಳಲಾಗುತ್ತಿದೆ. ಬುಧವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಲಿರುವ ಸಂಗಣ್ಣ ಕರಡಿ, ತಮ್ಮ ಕೆಲವು ಷರತ್ತುಗಳನ್ನು ಇಡಲಿದ್ದಾರೆ. ಇದಕ್ಕೆ ಅವರು ಒಪ್ಪಿದಲ್ಲಿ ಕೂಡಲೇ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ದೇವೇಗೌಡರ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಿರಿಕ್‌; ಚುನಾವಣಾ ಆಯೋಗಕ್ಕೆ ದೂರು

ವಿಧಾನಸಭೆ ಚುನಾವಣೆಯಲ್ಲಿ ಸೊಸೆಗೆ ಟಿಕೆಟ್‌

ಇನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ ಸಂಗಣ್ಣ ಕರಡಿ ಸೊಸೆ ಮಂಜುಳಾ ಅಮರೇಶ್ ಸ್ಪರ್ಧೆ ಮಾಡಿದ್ದರು. ಇವರನ್ನೇ ಕಣಕ್ಕಿಳಸಬೇಕು ಎಂದು ಸಂಗಣ್ಣ ಕರಡಿ ಪಟ್ಟು ಹಿಡಿದಿದ್ದರು. ಕೊನೆಗೆ ಇವರ ಒತ್ತಡಕ್ಕೆ ಬಿಜೆಪಿ ಹೈಕಮಾಂಡ್‌ ಮಣಿದಿತ್ತು. ಆದರೆ, ಚುನಾವಣೆಯಲ್ಲಿ ಮಂಜುಳಾ ಅವರು ಸೋಲು ಕಂಡಿದ್ದರು. ಆದರೆ, ಸಂಗಣ್ಣ ಕರಡಿ ಅವರಿಗೆ ಕೊಪ್ಪಳ ಭಾಗದಲ್ಲಿ ಒಳ್ಳೆಯ ಹಿಡಿತವಿದೆ. ಈ ಹಿನ್ನೆಲೆಯಲ್ಲಿ ಅವರ ಕಾಂಗ್ರೆಸ್‌ ಸೇರ್ಪಡೆ ಹಿಂದೆ ತಂತ್ರಗಾರಿಕೆ ಅಡಗಿದೆ ಎನ್ನಲಾಗಿದೆ.

Exit mobile version