Site icon Vistara News

Lok Sabha Election 2024: ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ; ಇವರ ಆಸ್ತಿ ಎಷ್ಟು ಕೋಟಿ?

Lok Sabha Election 2024 Shobha Karandlaje files nomination How much is their assets

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ಅವರು ಬುಧವಾರ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ. ಶೋಭಾ ತಮ್ಮ ಬಳಿ 16 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಘೋಷಿಸಿಕೊಂಡಿರುವ ಆಸ್ತಿಯಲ್ಲಿ ಚರಾಸ್ತಿ – 9,23,66,909 ರೂಪಾಯಿ ಮೌಲ್ಯ ಹಾಗೂ ಸ್ಥಿರಾಸ್ತಿ – 6,78,97,000 ರೂಪಾಯಿ ಮೌಲ್ಯ ಆಗಿದೆ ಎಂದು ಶೋಭಾ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟು 16.02 ಕೋಟಿ ಆಸ್ತಿಯು ಅವರ ಬಳಿ ಇದೆ.

4 ಕೋಟಿ ರೂಪಾಯಿ ಸಾಲವೂ ಇದೆ!

ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಮಾಡಿದ ಸಾಲ ಮಾಡಿರುವ ಶೋಭಾ ಕರಂದ್ಲಾಜೆ ಅವರು ಒಟ್ಟು 4.06 ಕೋಟಿ ರೂಪಾಯಿ ಲೋನ್‌ ಮಾಡಿಕೊಂಡಿದ್ದಾರೆ. ಇವರ ಬಳಿ 1,71,000 ರೂಪಾಯಿ ನಗದು ಹಣವಿದೆ. ಇವರ ವಾರ್ಷಿಕ ಆದಾಯವು 2022-23ರ ಸಾಲಿನಲ್ಲಿ 24.90 ಲಕ್ಷ ರೂಪಾಯಿ ಇದೆ.

1 ಕೆಜಿ ಚಿನ್ನದ ಬಿಸ್ಕೆಟ್‌ ಇದೆ!

ಶೋಭಾ ಕರಂದ್ಲಾಜೆ ಅವರ ಬಳಿ 1 ಕೆಜಿ ಚಿನ್ನದ ಬಿಸ್ಕಟ್ ಇದ್ದು, ಇದು ಸರಿಸುಮಾರು 68.40 ಲಕ್ಷ ರೂಪಾಯಿ ಮೌಲ್ಯವುಳ್ಳದ್ದಾಗಾಗಿದೆ. 650‌ ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳು ಇವೆ.

ಶೋಭಾ ಮೇಲಿದೆ 4 ಕೇಸ್‌

ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇದುವರೆಗೆ ದಾಖಲಾಗಿವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್‌ ಆಗಿದ್ದರೆ, 1 ಮಾನನಷ್ಟ ಮೊಕದ್ದಮೆಯಾಗಿದೆ.

ನಾಮಪತ್ರ ಸಲ್ಲಿಕೆ ಸಂಬಂಧ ಬಿಜೆಪಿ ಮಾಡಿರುವ ಪ್ಲ್ಯಾನ್‌ ಪ್ರಕಾರವೇ ಶೋಭಾ ಕರಂದ್ಲಾಜೆ ಅವರು ಮೊದಲಿಗೆ ಮೆರವಣಿಗೆ ಮೂಲಕ ಸಾಗಿ ಬಂದರು. ಮೈಸೂರು ಬ್ಯಾಂಕ್ ವೃತ್ತರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ರೋಡ್ ಶೋಗೆ ಚಾಲನೆ ನೀಡಿದರು. ಈ ವೇಳೆ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ , ದಾಸರಹಳ್ಳಿ ಶಾಸಕ ಎಸ್. ಮುನಿರಾಜು , ಕೆ.ಆರ್.ಪುರಂ ಶಾಸಕರಾದ ಭೈರತಿ ಬಸವರಾಜು, ವಿಧಾನ ಪರಿಷತ್‌ ಸದಸ್ಯರಾದ ಗೋಪಿನಾಥ್ ರೆಡ್ಡಿ, ಭಾರತಿ ಶೆಟ್ಟಿ, ಚಲವಾದಿ ನಾರಾಯಣ ಸ್ವಾಮಿ ಹಾಗೂ ಕಟ್ಟಾ ಜಗದೀಶ್ ಸಾಥ್‌ ನೀಡಿದರು.

ಇದನ್ನೂ ಓದಿ: Lok Sabha Election 2024: ಎಚ್‌.ಡಿ. ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ತಾರಾ ದರ್ಶನ್?‌ ಏನಂದ್ರು ಸುಮಲತಾ?

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧಳಿದ್ದೇನೆ. ಸದಾ ಜನಪರ ಕೆಲಸ ಮಾಡುವುದು ನನ್ನ ಗುರಿ. ನಿಮ್ಮ ಜತೆ ನಾನು ಸದಾ ಇರುತ್ತೇನೆ. ಬರುವ ಐದು ವರ್ಷಗಳಲ್ಲಿ ಬೆಂಗಳೂರು ಉತ್ತರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಮೊದಲ ಬಾರಿ ನರೇಂದ್ರ ಮೋದಿ ನೇತೃತ್ವವನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಒಪ್ಪಿದ್ದಾರೆ. ಅವರು ಈಗ ನಮ್ಮ ಜತೆಗೆ ಸೇರಿದ್ದಾರೆ. ಹೀಗಾಗಿ ನಾವು ಜತೆಯಾಗಿ ಕಾಂಗ್ರೆಸ್‌ಗೆ ಪಾಠವನ್ನು ಕಲಿಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಯುದ್ಧವನ್ನು ನಾವು ಗೆಲ್ಲುತ್ತೇವೆ

ಬಿಜೆಪಿಯಲ್ಲಿ ಯಾವುದೇ ಅಸಮಾಧಾನ, ಬೇಸರವಿಲ್ಲ. ಎಲ್ಲ ಶಾಸಕರು ನನ್ನ ಜತೆಗೆ ಪ್ರವಾಸ ಮಾಡುತ್ತಿದ್ದಾರೆ. ಅವರೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಅವರೇ ಖರ್ಚು ಮಾಡುತ್ತಿದ್ದಾರೆ, ಸನ್ಮಾನ ಮಾಡುತ್ತಿದ್ದಾರೆ, ತಿಂಡಿ ಕೊಡುತ್ತಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡೋದು ಬಿಜೆಪಿಯ ವಿಶೇಷತೆ. ಈ ಯುದ್ಧವನ್ನು ನಾವು ಗೆಲ್ಲುತ್ತೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಸದಾನಂದ ಗೌಡ ಗೈರು

ಶೋಭಾ ಕರಂದ್ಲಾಜೆ ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರು ಗೈರಾಗಿದ್ದರು. ಈ ಬಾರಿ ಕ್ಷೇತ್ರದ ಟಿಕೆಟ್‌ ಮಿಸ್‌ ಆಗಿದ್ದರಿಂದ ಅವರು ಮುನಿಸಿಕೊಂಡಿದ್ದರು. ಆದರೆ, ಶೋಭಾ ಕರಂದ್ಲಾಜೆ ಅವರು ತಮಗೆ ಟಿಕೆಟ್‌ ಸಿಕ್ಕ ಕೂಡಲೇ ಡಿವಿಎಸ್‌ ಅವರನ್ನು ಭೇಟಿ ಮಾಡಿ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡಿದ್ದರು.

Exit mobile version