Site icon Vistara News

Lok Sabha Election 2024: ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ; ರೆಬೆಲ್‌ ಆಗ್ತಾರಾ ಡಿ.ವಿ. ಸದಾನಂದಗೌಡ?

DV Sadananda Gowda

ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ಹಲವು ರೀತಿಯಲ್ಲಿ ರಂಗೇರಿದೆ. ಇನ್ನೂ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಈ ಸಮಯದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಲಿದೆ. ರಾಜಕೀಯ ಪಕ್ಷಗಳಿಗೆ ಆಯ್ಕೆ ಪ್ರಕ್ರಿಯೆ ದೊಡ್ಡ ಸವಾಲಾಗಿವೆ. ಗೆಲ್ಲುವ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು, ಜಾತಿ ಬಲ, ಆರ್ಥಿಕ ಸಮೀಕರಣ ಸೇರಿದಂತೆ ಇನ್ನಿತರ ರಾಜಕೀಯ ಲೆಕ್ಕಾಚಾರಗಳ ನಡುವೆ ಕ್ಯಾಂಡಿಡೇಟ್‌ ಇವರಾದರೆ ಸೂಕ್ತ ಎಂಬ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಇನ್ನು ಆಡಳಿತಾರೂಢ ಬಿಜೆಪಿಯು ಕೆಲವು ಹಾಲಿ ಸಂಸದರನ್ನು ಬದಲಾವಣೆ ಮಾಡಲು ಮುಂದಾಗಿದೆ. ಇದರ ಅನುಸಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ (Bangalore North Lok Sabha constituency) ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಕಣಕ್ಕಿಳಿಸಲಾಗುತ್ತದೆಯೇ? ಎಂಬ ಪ್ರಶ್ನೆ ಮೂಡಿದೆ. ಇದೇ ವೇಳೆ ಈ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಡಿ.ವಿ. ಸದಾನಂದಗೌಡ (DV Sadananda Gowda) ರೆಬೆಲ್‌ ಆಗುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಟಿಕೆಟ್‌ ಸಿಗದಿದ್ದರೆ ಮುಂದೇನು ಎಂದು ಕೇಳಿದ್ದಕ್ಕೆ, “ಮುಂದಿನ ಬೆಳವಣಿಗೆಗೆ ಈಗ ಉತ್ತರ ಕೊಡಲ್ಲ” ಎಂದು ತಣ್ಣನೆಯ ಸ್ವರದಲ್ಲಿ ಹೇಳಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಪ್ಲ್ಯಾನ್‌ ಮಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಉಡುಪಿ-ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ. ಇದರ ಹಿಂದೆ ಕೆಲವು ನಾಯಕರ ಕುಮ್ಮಕ್ಕು ಇದೆ ಎಂಬ ಆರೋಪಗಳು ಕೇಳಿಬಂದಿವೆಯಾದರೂ ಅಲ್ಲಿಯೇ ಶೋಭಾರನ್ನು ಕಣಕ್ಕೆ ಇಳಿಸಿ ರಿಸ್ಕ್‌ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್‌ ಸಿದ್ಧವಿಲ್ಲ ಎನ್ನಲಾಗಿದೆ. ಹೀಗಾಗಿ ಅವರ ಕ್ಷೇತ್ರ ಬದಲಾವಣೆಗೆ ಮುಂದಾಗಲಾಗಿದೆ ಎಂದೇ ಹೇಳಲಾಗುತ್ತಿದೆ.

ಬೆಂಗಳೂರು ಉತ್ತರ ಏಕೆ?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಈ ಮುಂಚೆಯೇ ಬಿಜೆಪಿ ಹೈಕಮಾಂಡ್‌ ಮುಂದಾಗಿತ್ತು. ಇದರ ಭಾಗವಾಗಿ ಹಾಲಿ ಸಂಸದ ಡಿ.ವಿ. ಸದಾನಂದಗೌಡ ತಾವು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಚುನಾವಣಾ ನಿವೃತ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಹೀಗಾಗಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಹೈಕಮಾಂಡ್‌ ಇತ್ತು. ಅಲ್ಲದೆ, ಶೋಭಾ ಕರಂದ್ಲಾಜೆ ಅವರು ಬೆಂಗಳೂರಿಗೆ ಹೇಗೂ ಚಿರಪರಿಚಿತರೇ ಆಗಿದ್ದಾರೆ. ಹೀಗಾಗಿ ಬೆಂಗಳೂರು ಉತ್ತರ ಲೋಕಸಭಾ ಸೀಟನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡುವ ಸಾಧ್ಯತೆ ಇದೆ. ಆದರೆ, ಈಗ ಕೊನೇ ಕ್ಷಣದಲ್ಲಿ ಡಿವಿಎಸ್‌ ಉಲ್ಟಾ ಹೊಡೆದಿದ್ದಾರೆ. ತಾವೂ ಸಹ ಆಕಾಂಕ್ಷಿಯಾಗಿದ್ದು, ತಮಗೆ ಟಿಕೆಟ್‌ ಕೊಟ್ಟರೆ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಡಿ.ವಿ. ಸದಾನಂದಗೌಡ ಹೇಳಿದ್ದೇನು?

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಸ್ತಾರ ನ್ಯೂಸ್ ಜತೆ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಚುನಾವಣೆಗೆ ಸಂಬಂಧಿಸಿದಂತೆ ನಡೆಯುವ ಸಭೆಗಳು ತುಂಬಾ ಗೌಪ್ಯವಾಗಿರುತ್ತವೆ. ರಾಷ್ಟ್ರೀಯ ಅಧ್ಯಕ್ಷರು ಪಟ್ಟಿಗೆ ಸಹಿ ಮಾಡಿ ಲಿಸ್ಟ್ ಅನೌನ್ಸ್ ಮಾಡುವ ತನಕ ಯಾರಿಗೂ ಟಿಕೆಟ್ ಫೈನಲ್ ಆಗಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರು ನೀವು ಚುನಾವಣೆಗೆ ಸ್ಪರ್ಧಿಸಬೇಕು ಅಂತ ಒತ್ತಾಯ ಮಾಡಿದರು. ನಂತರ ನಾನು ಓಕೆ ಅಂತ ಹೇಳಿದೆ. ಆದರೆ ಯಾವ ರೀತಿ ಪ್ರಯೋಗ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಕಳೆದ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಯೋಗದಲ್ಲಿ ಏನು ಆಗಿದೆ ಎಂಬುದು ಗೊತ್ತಿದೆ. ಈ ಬಾರಿ ಪ್ರಯೋಗ ಮಾಡುವುದರಿಂದ ಏನೂ ಉಪಯೋಗ ಆಗಲ್ಲ ಅಂತ ಕೇಂದ್ರದ ನಾಯಕರು ತಿಳಿದುಕೊಂಡಿದ್ದಾರೆ ಅಂತ ನಾನು ಭಾವಿಸುತ್ತೇನೆ. ಮುಂದೆ ಏನು ಆಗುತ್ತದೆ ಅಂತ ನನಗೆ ಗೊತ್ತಿಲ್ಲ. ಆದರೆ, ಬೆಂಗಳೂರು ಉತ್ತರಕ್ಕೆ ನನ್ನ ಒಬ್ಬನ ಹೆಸರು ಮಾತ್ರ ಶಿಫಾರಸು ಮಾಡಲಾಗಿದೆ. ನಾನು ಟಿಕೆಟ್ ಕೊಡಿಸಿ ಅಂತ ಯಾವ ಕೇಂದ್ರದ ನಾಯಕರ ಬಳಿಯೂ ಚರ್ಚೆ ಮಾಡಿಲ್ಲ. ನನಗೆ ಟಿಕೆಟ್ ತಪ್ಪಿಸಬೇಕು ಎಂಬ ಶತ್ರುಗಳು ಸಹ ಯಾರೂ ಇಲ್ಲ ಎಂದು ಹೇಳಿದ ಡಿ.ವಿ. ಸದಾನಂದಗೌಡ, “ಟಿಕೆಟ್ ಸಿಗದೇ ಹೋದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಇದೆಲ್ಲ ಮುಂದಿನ ಬೆಳವಣಿಗೆಯಾಗಿದೆ. ಅದಕ್ಕೆ ಈಗ ಉತ್ತರ ಕೊಡಲ್ಲ ಎಂದು ಹೇಳಿದರು.

ಈಶ್ವರಪ್ಪ, ಪ್ರತಾಪ ಸಿಂಹ ರೆಬಲ್ ಆಗ್ತಾರಾ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರಿಷ್ಠರು ಸೂಚನೆ ನೀಡಿದರು ಎಂಬ ಕಾರಣಕ್ಕೆ ಹೇಳಿದ ಕೂಡಲೇ ತಮ್ಮ ಕ್ಷೇತ್ರವನ್ನು ಮತ್ತೊಬ್ಬರಿಗೆ ಬಿಟ್ಟುಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟಿದ್ದ ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೇಳಿದ್ದರು. ಕೊನೆಯ ಕ್ಷಣದವರೆಗೂ ಟಿಕೆಟ್‌ಗಾಗಿ ಹೋರಾಟ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಫೈನಲ್‌; ದೆಹಲಿ ಮೀಟಿಂಗ್‌ ಬಳಿಕ ಪ್ರಕಟ ಎಂದ ಡಿಕೆಶಿ

ಇತ್ತ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಅವರಿಂದಲೂ ಟಿಕೆಟ್‌ಗಾಗಿ ಲಾಬಿ ಜೋರಾಗಿದೆ. ಕೊನೆಯ ಕ್ಷಣದವರೆಗೂ ಕಾದು ನೋಡುತ್ತೇನೆ ಎಂದೇ ಪ್ರತಾಪ್‌ ಹೇಳುತ್ತಾ ಬಂದಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಅವರು ರೆಬಲ್ ಆಗ್ತಾರಾ? ಪಕ್ಷ ನಿಷ್ಠಾವಂತರಿಗೆ ಮಣೆ ಹಾಕಲಿಲ್ಲ ಎಂದು ಬಂಡಾಯ ಏಳುತ್ತಾರಾ? ಹಾಗಾಗಿ ಕರ್ನಾಟಕ “ರೆಬಲ್ ಪಾಲಿಟಿಕ್ಸ್”ಗೆ ಮತ್ತೆ ಸಾಕ್ಷಿಯಾಗಲಿದೆಯಾ? ಎಂಬ ಕುತೂಹಲ ಮೂಡಿದೆ.

Exit mobile version