ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಆರೋಪ – ಪ್ರತ್ಯಾರೋಪಗಳು ಹೆಚ್ಚಾಗಿವೆ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ “ಚೆಂಬು” ಗಲಾಟೆ ಪ್ರಾರಂಭವಾಗಿದೆ. ಜತೆಗೆ ಗ್ಯಾರಂಟಿ ಯೋಜನೆಗಳ (Congress Guarantee Scheme) ಬಗ್ಗೆ ವಾಕ್ಸಮರ ಶುರುವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಂದ ಕನ್ನಡಿಗರು ಬದುಕಿನ ಗ್ಯಾರಂಟಿಯನ್ನೇ ಕಳೆದುಕೊಂಡಿದ್ದಾರೆ. ಅವರ ಪೊಳ್ಳು ಜಾಹೀರಾತಿನ ಬಗ್ಗೆ ಜನ ನಂಬಲ್ಲ. ಕಾಂಗ್ರೆಸ್ ಈ ಬಾರಿ 50 ಸೀಟಿಗಿಂತ ಹೆಚ್ಚಿಗೆ ಬರುವುದಿಲ್ಲ. ರಾಜ್ಯದಲ್ಲಿ ಒಂದು ಕ್ಷೇತ್ರವನ್ನೂ ಗೆಲ್ಲಲಾಗುವುದಿಲ್ಲ. ನಿಮಗೆ ಆತ್ಮವಿಶ್ವಾಸ ಇದ್ದರೆ, ನೀವು ಗೆಲ್ಲುವ 5 ಲೋಕಸಭಾ ಕ್ಷೇತ್ರಗಳ ಹೆಸರನ್ನು ಹೇಳಿ ಎಂದು ಸವಾಲು ಹಾಕಿದರು.
ಭಾನುವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಜಾಹೀರಾತಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನ ಅವರು ಹೋದ ಕಡೆ ಸೇರುತ್ತಿಲ್ಲ. ಅದಕ್ಕೆ ಜಾಹೀರಾತು ನೀಡುತ್ತಿದ್ದಾರೆ. ಪೊಳ್ಳು ಭರವಸೆ ನೀಡುವ ಜಾಹೀರಾತುಗಳನ್ನು ಯಾರೂ ನಂಬಲ್ಲ. ಚುನಾವಣೆ ಬಳಿಕ ನಾವೆಲ್ಲ ಸೇರೋಣ. ಆಗ ವಾತಾವರಣ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಹೇಳಿದರು.
ಜನ ಮೋದಿ ಮೋದಿ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಅವರು ಗೆಲ್ಲುವ ನಾಲ್ಕೈದು ಕ್ಷೇತ್ರ ಯಾವುದು ಅಂತ ತಿಳಿಸಲಿ. ಕಳೆದ ಬಾರಿ ಅವರು 54 ಸೀಟು ಗೆದ್ದಿದ್ದರು. ಈ ಬಾರಿ 50 ಸೀಟುಗಳು ಸಹ ಬರುವುದಿಲ್ಲ. ಇಡೀ ದೇಶದಲ್ಲಿ ಮೋದಿ ವಾತಾವರಣ ಇದೆ. ಇಂದಿನಿಂದ ಪುನಃ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ. ನಮ್ಮ ಪರವಾಗಿ ಜನರು ಬರುತ್ತಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ದೊಂಬರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ
ತೆರಿಗೆ ವಿಚಾರವಾಗಿ ಕಾಂಗ್ರೆಸ್ ಜಾಹೀರಾತು ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್. ಯಡಿಯೂರಪ್ಪ, ಈ ಬಗ್ಗೆ ನಾನಲ್ಲ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಸ್ತಾಪ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಬಂದು ಸೋಮವಾರ ಹೇಳಲಿದ್ದಾರೆ. ನಿರ್ಮಲಾ ಸೀತಾರಾಮನ್ ಕೂಡ ಈಗಾಗಲೇ ಹೇಳಿದ್ದಾರೆ. ಈ ರಾಜಕೀಯ ದೊಂಬರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದರು.
ಜನ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ
ಸಿಎಂ ಸಿದ್ದರಾಮಯ್ಯ ಅವರಿಂದ ಕನ್ನಡಿಗರು ಬದುಕಿನ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಹತ್ಯೆಯಾಗಿದೆ. ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ನ್ಯಾಯ ಕೊಡಿಸಿಲ್ಲ. ಭಾರತದ ಭವಿಷ್ಯಕ್ಕೆ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹಾಯಿಸಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಮೇಲೆ ದರೋಡೆ ಮಾಡಿ ಹಲ್ಲೆ ಮಾಡಲಾಗಿದೆ. ಒಂಟಿಮುರಿ ಮಹಿಳೆಯನ್ನು ಬೆತ್ತಲೆ ಮಾಡಿದ್ದ ಪ್ರಕರಣದಲ್ಲಿ ಈವರೆಗೂ ಕ್ರಮ ಆಗಿಲ್ಲ. ಕೋಲಾರ, ಶಿವಮೊಗ್ಗದಲ್ಲಿ ಔರಂಗಾಜೇಬ್ ಕಟೌಟ್ ಹಾಕಲಾಗಿತ್ತು. ಮಂಡ್ಯದಲ್ಲಿ ಪೊಲೀಸ್ ಬಳಸಿ ಹನುಮ ಧ್ವಜ ಇಳಿಸಿದ್ದಾರೆ. ಜನ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಜನರಿಗೆ ನೀರು, ವಿದ್ಯುತ್ ಗ್ಯಾರಂಟಿ ಇಲ್ಲ. ತೆರಿಗೆ ಹೆಚ್ಚಳವಾಗಿದೆ ಎಂದು ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇದೊಂದು ಕಲ್ಲು ಬಂಡೆ ಸರ್ಕಾರ
ಸಿದ್ದರಾಮಯ್ಯ ಸರ್ಕಾರ ಮತಾಂಧ ಶಕ್ತಿಯನ್ನು ತಮ್ಮ ಆಡಳಿತದ ಭಾಗವಾಗಿ ಮಾಡಿಕೊಂಡಿದೆ. ಒಂದೇ ವರ್ಷದಲ್ಲಿ ಮತಾಂಧ ಯುದ್ಧ ಭೂಮಿ ಮಾಡಿಕೊಂಡಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಕಿಸಾನ್ ಸಮ್ಮಾನ್ ಯೋಜನೆಗೆ ನೀಡುತ್ತಿದ್ದ ಹಣವನ್ನು ನಿಲ್ಲಿಸಿದ್ದಾರೆ. ಇದೊಂದು ಕಲ್ಲು ಬಂಡೆ ಸರ್ಕಾರವಾಗಿದೆ. ಸರ್ಕಾರ ದಿವಾಳಿಯಾಗಿದೆ. ಖಜಾನೆಯಲ್ಲಿ ಹಣವೇ ಇಲ್ಲದಂತಾಗಿದೆ. ನೀರಾವರಿ ವ್ಯವಸ್ಥೆ ನೆಲ ಕಚ್ಚಿದೆ. ಒಂದು ಕಿ.ಮೀ. ರಸ್ತೆಯಾಗಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
ಹಿಂದುಗಳೂ ತೃತೀಯ ದರ್ಜೆ ನಾಗರಿಕರಾ? ಡಿ.ವಿ. ಸದಾನಂದಗೌಡ
ಇದೇ ವೇಳೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, ನಾವೀಗ ವಿಶೇಷ ಕಾಲಘಟ್ಟದಲ್ಲಿ ಇದ್ದೇವೆ. ಈ ಚುನಾವಣೆ ಭಯೋತ್ಪಾದಕತೆ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ವಿರುದ್ಧ ನಡೆಯುತ್ತಿದೆ. ಹಿಂದೂಗಳನ್ನು ತೃತೀಯ ದರ್ಜೆ ನಾಗರಿಕರ ರೀತಿಯಲ್ಲಿ ಕಾಣಲಾಗುತ್ತಿದೆ. ಮುಸ್ಲಿಂ ಮತಾಂಧರನ್ನು, ಭಯೋತ್ಪಾದಕರನ್ನು ಬೆಳೆಸಲಾಗುತ್ತಿದೆ. ಕುಕ್ಕರ್ ಬ್ಲಾಸ್ಟ್‌ನಿಂದ ಹಿಡಿದು, ಎಲ್ಲವೂ ಅವರೇ ಇದ್ದಾರೆ. ಅವರ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Gold Rate Today: ವೀಕೆಂಡ್‌ನಲ್ಲಿ ಬೆಲೆ ಏರಿಕೆ ಕಾಣದ ಚಿನ್ನ, ಈಗಲೇ ಖರೀದಿಸಿದರೆ ಚೆನ್ನ
ವಿಶ್ವಮಾನವನ ಸಂದೇಶ ನೀಡಿದ ನಾಡು ಕರ್ನಾಟಕ. ಆದರೆ, ಚುನಾವಣೆ ನಡೆಸುವುದೇ ಗೂಂಡಾ ವರ್ತನೆ ರೀತಿ ಇದೆ. ಕರ್ನಾಟಕದಲ್ಲಿ ಯಾರೂ ಮಹಿಳೆಯರು ವೋಟ್ ಹಾಕಲು ಬಾರದ ರೀತಿ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಗ್ಯಾರಂಟಿ ಯಾವ ಗೂಂಡಾಗಳಿಗೆ? ಹಿಂದೂಗಳ ಮೇಲೆ ಸವಾರಿ ಮಾಡುವವರಿಗೆ ಗ್ಯಾರಂಟಿಯೇ? ಶನಿವಾರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸದ ವೇಳೆ ಒಂದು ಮಾತನ್ನು ಹೇಳಿದ್ದಾರೆ. “ಜೀವನದ ಭರವಸೆ ನೀಡುವುದೇ ನಮ್ಮ ಗುರಿ” ಎಂಬುದಾಗಿ ಹೇಳಿದ್ದರು. ಹೀಗಾಗಿ ಈ ಚುನಾವಣೆ ಮೂಲಕ ನಾಡಿನ ಜನರು ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶವನ್ನು ಕಳುಹಿಸುವಂತಾಗಿರಬೇಕು ಎಂದು ಡಿ.ವಿ. ಸದಾನಂದ ಗೌಡ ಮನವಿ ಮಾಡಿದರು.