ಕೊಪ್ಪಳ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಾಕ್ಸಮರಗಳು ತಾರಕಕ್ಕೇರುತ್ತಿವೆ. ರಾಜಕೀಯ ನಾಯಕರು ತಮ್ಮ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ. ಈಗ ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಸಂಪುಟ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕಾರಟಗಿಯಲ್ಲಿ ಮಾತನಾಡುತ್ತಾ, ಯುವಕರು ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕಾರಟಗಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವರಾಜ್ ತಂಗಡಗಿ, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಹಾಗೆ ನೋಡಿದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ನೀಡಬೇಕಿತ್ತು. ನೀಡಿದ್ದಾರಾ? ಇನ್ನೂ ಯುವಕರು, ವಿದ್ಯಾರ್ಥಿಗಳು ಮೋದಿ ಮೋದಿ ಎನ್ನುತ್ತಾರೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ 5-10 ವರ್ಷ ಸುಳ್ಳು ಹೇಳುತ್ತಾರೆ. ಈ ಸುಳ್ಳು ಕೇಳಿಕೊಂಡು ಹೋಗಬೇಕಾ? ಎಂದು ಪ್ರಶ್ನೆ ಮಾಡಿದರು.
ಸಮುದ್ರದೊಳಗೆ ಪೂಜೆ
ದೇಶದಲ್ಲಿ 100 ಸ್ಮಾರ್ಟ್ ಸಿಟಿ ಮಾಡುತ್ತೇನೆ ಎಂದಿದ್ದರು. ಹಾಗಾದರೆ ಅದನ್ನು ಮಾಡಿದರಾ? ಅವರು ಸ್ಮಾರ್ಟ್ ಆದರು ಅಷ್ಟೆ. ಈಗ ಸಮುದ್ರದೊಳಗೆ ಹೋಗಿ ನವಿಲುಗರಿಯಿಂದ ಪೂಜೆ ಮಾಡಿದ್ದಾರೆ ಎಂದು ಶಿವರಾಜ್ ತಂಗಡಗಿ ಕಿಡಿಕಾರಿದರು.
ಇದನ್ನೂ ಓದಿ: Gali Janardana Reddy : ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಮಡಿಲಿಗೆ, ಕಲ್ಯಾಣದಲ್ಲಿ ಲಾಭ ನಿರೀಕ್ಷೆ
ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಗೆದ್ದಂತೆ
ಕೆಲವು ರಾಜ್ಯದಲ್ಲಿ ಬಿಜೆಪಿಯವರು ಹೋದರೆ ಹೊಡೆಯುತ್ತಾರೆ. ಮಿಜೊರಾಂ ಸೇರಿ ಕೆಲವು ರಾಜ್ಯಗಳಲ್ಲಿ ಅವರಿಗೆ ನೆಲೆ ಇಲ್ಲ. ಈ ಹಿಂದೆ ಕನಕಗಿರಿಯಿಂದ ಪಕ್ಷೇತರರಾದ ನನ್ನನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದರು. ಆದರೆ, ಆಮೇಲೆ ಅನರ್ಹಗೊಳಿಸಿದರು. ಆಗ ನಾನು, ಈಗ ಸಂಗಣ್ಣ ಕರಡಿ. ಸಂಗಣ್ಣ ಮೋದಿ ಮೋದಿ ಎಂದು ಹೊಗಳಿದರು. ಪಾಪ ಒಳ್ಳೆಯ ಮನುಷ್ಯ. ಅವರಿಗೆ ಟಿಕೆಟ್ ನೀಡದೆ ಮನೆಯಲ್ಲಿ ಕೂರಿಸಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್ ಅಭ್ಯರ್ಥಿ ರಾಜಣ್ಣ ಗೆದ್ದಂತೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.