Site icon Vistara News

Lok Sabha Election 2024: ಸೋಮಣ್ಣಗೆ ತುಮಕೂರು ಟಿಕೆಟ್‌ ಖಾತ್ರಿ? ಕೊಬ್ಬರಿ ನಾಡಿನ ಬಗ್ಗೆ ತಮಗೇ ಹೆಚ್ಚು ಗೊತ್ತೆಂದ ಮಾಜಿ ಸಚಿವ!

Lok Sabha Election 2024 Somanna assured of Tumkur ticket

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂಬಂಧ ನವದೆಹಲಿಯಲ್ಲಿ ಸೋಮವಾರ ಸಿಇಸಿ ಸಭೆಯನ್ನು ಮುಗಿಸಿದೆ. ಇಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ (Tumkur Lok Sabha constituency) ಈ ಬಾರಿ ಮಾಜಿ ಸಚಿವ ವಿ. ಸೋಮಣ್ಣ (V Somanna) ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ಆದರೆ, ತಮಗೇ ಟಿಕೆಟ್‌ ಸಿಗಲಿದೆ ಎಂಬ ವಿಶ್ವಾಸದಲ್ಲಿ ಸೋಮಣ್ಣ ಇದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸೋಮಣ್ಣ, ತುಮಕೂರಿನ ನಂಟಿನ ಬಗ್ಗೆ ಹೇಳಿದ್ದಾರೆ. ಜಾತಿವಾರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ನೆಟ್ವರ್ಕ್‌ ಬಗ್ಗೆ ಹೇಳಿದ್ದಾರೆ. ಸ್ಥಳೀಯರಿಗಿಂತಲೂ ತುಮಕೂರು ತಮಗೇ ಹೆಚ್ಚು ಗೊತ್ತು ಎಂದೂ ಹೇಳಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ತುಮಕೂರಿನಿಂದ ಟಿಕೆಟ್ ಖಚಿತ ಆಗಿರುವ ವಿಚಾರದ ಬಗ್ಗೆ ನನಗೂ ಮಾಹಿತಿ ಇದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿಗೆ ವಾಪಸ್‌ ಆದ ಮೇಲೆ ಮಾತನಾಡುತ್ತೇನೆ. ಇವತ್ತಿನವರೆಗೂ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಸುಳ್ಳು ಹೇಳಲು ನನಗೆ ಬರುವುದಿಲ್ಲ. ಆಕಾಂಕ್ಷಿ ಆಗಿ ಸುತ್ತಾಡಿದ್ದೇನೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಗೆ ಇನ್ನೂ ಕಾಲಿಟ್ಟಿಲ್ಲ. ತುಮಕೂರಿನಲ್ಲಿ ನನ್ನದೇ ಆದ ನೆಟ್ವರ್ಕ್ ಇದೆ. ನನಗೂ ತುಮಕೂರಿಗೆ ಅವಿನಾಭಾವ ಸಂಬಂಧ ಇದೆ. ಅಲ್ಲಿರುವವರಿಗೂ ನನ್ನಷ್ಟು ಮಾಹಿತಿ ಇಲ್ಲ. ಅಷ್ಟು ಒಳಹೊಕ್ಕು ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ರೋಹಿಣಿ ಸಿಂಧೂರಿ ಅವರು ತುಮಕೂರು ಮೊದಲ ಅಪಾಯಿಟ್ಮೆಂಟ್ ಇಲ್ಲೇ ಆಗಿದೆ. ಅಲ್ಲಿನ ಎಲ್ಲ ಜಾತಿವಾರು ಮಾಹಿತಿ ನನಗಿದೆ. ಆ ಭಾಗದ ಜನರಿಗೆ ನಿರೀಕ್ಷೆ ಇದೆ. ಅವರ ದುಃಖ ದುಮ್ಮಾನಕ್ಕೆ ಭಾಗಿಯಾಗಬೇಕು. ಮೋದಿ ಅವರ ಆಡಳಿತ ನೋಡಿದರೆ ಇನ್ನೂ ನೂರು ವರ್ಷ ಬೆಳೆಯಲಿದೆ. ಭಾರತಕ್ಕೆ ಇನ್ನೂ ಭವಿಷ್ಯ ಇದೆ ಅನ್ನಿಸುತ್ತಿದೆ ಎಂದು ವಿ. ಸೋಮಣ್ಣ ಹೇಳಿದರು.

ಕೋಲಾರದಲ್ಲಿ ನರೇಂದ್ರ ಮೋದಿ ಸಮಾವೇಶ ನಡೆಸುವ ಸುದ್ದಿ ಇರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿ. ಸೋಮಣ್ಣ, ನನಗೆ ಮಾಹಿತಿ ಇಲ್ಲ,‌ ನೋಡೋಣ ಎಂದರು.

ಜಾತಿ ಒಂದು ನಿಮಿತ್ತ ಮಾತ್ರ

ಲಿಂಗಾಯತ ಮತ್ತೊಂದು ಅನ್ನೋದಕ್ಕಿಂತ ಸಮನ್ವಯತೆ ಅನ್ನೋದು ಬಡತನದಿಂದಲೇ ಬರೋದು. ಬಡತನ ಮೆಟ್ಟು ನಿಲ್ಲಲು ನೂರಾರು ಉದಾಹರಣೆ ಕೊಡಬಲ್ಲೆ. ಜಾತಿ ಒಂದು ನಿಮಿತ್ತ ಮಾತ್ರ, ಹಾಗಂತ ಪ್ರಾಮುಖ್ಯತೆ ಇಲ್ಲ ಅಂತಲ್ಲ. ಲಿಂಗಾಯತ ಅಥವಾ ಜಾತಿ ಅನ್ನೋದು ಕೆಲವರಿಗೆ ಮಾತ್ರ ಸೀಮಿತ ಆಗಬಾರದು. ಎಲ್ಲರಿಗೆ, ಎಲ್ಲವೂ ಸಿಗುವಂತಾಗಬೇಕು. ಆಗ ಮಾತ್ರ ಯಶಸ್ವಿ ನಾಯಕನಾಗಲು ಸಾಧ್ಯ ಎಂದು ವಿ. ಸೋಮಣ್ಣ ಹೇಳಿದರು.

ಮುದ್ದಹನುಮೇಗೌಡರು ಬುದ್ಧಿವಂತರು

ಯಡಿಯೂರಪ್ಪ, ವಿಜಯೇಂದ್ರ ಬರ್ತಾರೆ ಅಂತಿದೆ. ಮಾಹಿತಿ ಪಡೆಯುತ್ತೇನೆ. ಅವರಿಗೆ ಹೆಚ್ಚು ಮಾರ್ಕೆಟ್ ಇದೆ. ತುಮಕೂರು ನನಗೆ ಚಿರಪರಿಚಿತ. ಬೇರೆ ರಾಜಕಾರಣಿಗಳು ಈ ಜಿಲ್ಲೆಯಲ್ಲಿ ಸುತ್ತಲು ಆರು ತಿಂಗಳು ತೆಗೆದುಕೊಳ್ಳುತ್ತಾರೆ. ನಾನು ಒಂದು ತಿಂಗಳಲ್ಲೇ ಸುತ್ತಬಲ್ಲೆ. 24×7 ಕೆಲಸ ಮಾಡುತ್ತೇನೆ. ಮುದ್ದಹನುಮೇಗೌಡರು ಬುದ್ಧಿವಂತರು. ಪಾದರಸದ ರೀತಿಯವರು. ಅದೇ ಜಿಲ್ಲೆಯವರು. ಆದರೆ, ಸೋಮಣ್ಣ ಆ ಜಿಲ್ಲೆಯವನು, ಈ ಜಿಲ್ಲೆಯವನು ಅಂತ ಹೇಳಿದರೆ ಈ ದೇಶಕ್ಕೆ ಭವಿಷ್ಯ ಇಲ್ಲ. ಅವರು ಮೂರು ವರ್ಷದಲ್ಲಿ ಮಾಡೋದನ್ನು ನಾನು ಮೂರು ತಿಂಗಳಲ್ಲಿ ಮಾಡಬಲ್ಲೆ. ನಾನು ಸ್ವಚ್ಛ ನೀರಿನ ರೀತಿಯಲ್ಲಿ ಇದ್ದೇನೆ. ಎಲ್ಲದಕ್ಕೂ ಬಳಕೆ ಮಾಡಬಹುದು. ರಾಜಕೀಯದಲ್ಲಿದ್ದಾಗ ಅನೇಕರಿಗೆ ಸಹಾಯ ಮಾಡಿದ್ದೇನೆ. ರಾಜಕಾರಣ ಕೂಡ ನಿಂತ ನೀರಲ್ಲ, ಹರಿಯೋ ನೀರು. ಈಗ ಸೋತಿದ್ದೇನೆ ನಿಜ. ಜತೆಗೆ ಸೋಮಣ್ಣ ಕೆಲಸಗಾರ ಅನ್ನೋದನ್ನು ತಿಳಿಸೋಣ. ಜನ ಏನು ಮಾಡುತ್ತಾರೆ ನೋಡೋಣ. ಜನ ಸೋಮಣ್ಣನನ್ನು ನೋಡುವ ರೀತಿಯೇ ಬೇರೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಮೋದಿ ಇದ್ದ ಸಭೆಯಲ್ಲಿ ಅನಂತ್‌ ಕುಮಾರ್‌ ಹೆಗಡೆ, ಪ್ರತಾಪ್‌ ಸಿಂಹ ಬಗ್ಗೆ ಚರ್ಚೆ! ಅಶೋಕ್‌ ಹೇಳಿದ್ದೇನು?

ಬೆಂಗಳೂರಲ್ಲಿ ಟ್ಯಾಕ್ಸ್ ಹೆಚ್ಚಳ ಆಗಿರೋದನ್ನು ಪೇಪರ್‌ನಲ್ಲಿ ನೋಡಿದೆ. ಡಿ.ಕೆ. ಶಿವಕುಮಾರ್ ಅವರು ಯಾವುದೇ ಸಲಹೆ ಪಡೆಯದೆ ಮಾಡುತ್ತಿದ್ದಾರೆ. ನಾನು ಈಗ ಶಾಸಕನೂ ಅಲ್ಲ. ನೋಡೋಣ ಮುಂದೆ ಏನಾಗಲಿದೆ? ಬಳಿಕ ಮಾತನಾಡುತ್ತೇನೆ ಎಂದು ವಿ. ಸೋಮಣ್ಣ ಹೇಳಿದರು.

Exit mobile version