ಬೆಂಗಳೂರು: ವಿದೇಶದಿಂದ ಮತ ಹಾಕುವುದಕ್ಕಾಗಿಯೇ ಬಂದವರು, ಒಟ್ಟಾಗಿ ಬಂದು ವೋಟ್ ಹಾಕಿ ಸೆಲ್ಫಿ ತೆಗೆದುಕೊಂಡ ಒಂದೇ ಕುಟುಂಬದ 69 ಮಂದಿ, ಮತ ಹಾಕಿದವರಿಗೆ ಫ್ರೀಯಾಗಿ ತಿಂಡಿ ಕಾಫಿ ಒದಗಿಸಿದವರು… ಹೀಗೆ ಲೋಕಸಭೆ ಚುನಾವಣೆ (Lok Sabha Election 2024) ರಾಜ್ಯದ ಎರಡನೇ ಹಂತದ (second phase voting) ಮತದಾನದಲ್ಲಿ ಹಲವು ವೈವಿಧ್ಯಮಯ ಚಿತ್ರಣಗಳು ಕಂಡುಬಂದವು. ಮೊಬೈಲ್ ನಿಷೇಧವಿದ್ದರೂ ಮತ ಹಾಕುವ ಫೋಟೋ ತೆಗೆದು ವೈರಲ್ ಮಾಡಿದವರು, ಮತದಾನಕ್ಕೆ ಬಹಿಷ್ಕಾರ, ಮತಗಟ್ಟೆಯಲ್ಲಿ ಚಕಮಕಿಯಂಥ ಘಟನೆಗಳೂ ನಡೆದವು.
ಒಂದೇ ಕುಟುಂಬದ 69 ಸದಸ್ಯರು ಒಟ್ಟಾಗಿ ವೋಟ್
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56, 57ರಲ್ಲಿ ಒಂದೇ ಕುಟುಂಬದ 69 ಸದಸ್ಯರು ಬಂದು ಮತದಾನ ಮಾಡಿ ಮಾದರಿಯಾದರು. ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯರಿಂದ ಮತದಾನ ನಡೆಯಿತು. ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ತೆಗೆದು ಸಂಭ್ರಮಿಸಿದರು. ಕುಟುಂಬದ ಮೂರು ತಲೆಮಾರಿನ ಸದಸ್ಯರು ಮತದಾನದಲ್ಲಿ ಭಾಗಿಯಾಗಿದ್ದರು. ಪ್ರತಿ ಚುನಾವಣೆಯಲ್ಲೂ ತಂಡವಾಗಿ ಬಂದು ಮತ ಚಲಾಯಿಸುತ್ತಾರೆ.
ಅಪೂರ್ವ ಸಹೋದರಿಯರು
ದಾವಣಗೆರೆ: ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದು ಸಹೋದರಿಯರು ಮತದಾನ ಮಾಡಿದ್ದಾರೆ. ರೀತು ಮತ್ತು ರಕ್ಷಾ ಮತದಾನ ಮಾಡಿದ ಸಹೋದರಿಯರು. ರೀತು ಅಮೇರಿಕಾದ ಇಂಡಿಯಾನಾದಿಂದ ಹಾಗೂ ರಕ್ಷ ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿ ದಾವಣಗೆರೆಯ MCC ಎ ಬ್ಲಾಕ್‌ನ ವಿಶ್ವಭಾರತಿ ಸ್ಕೂಲ್‌ನಲ್ಲಿ ಹಕ್ಕು ಚಲಾಯಿಸಿದರು. ರೀತು ಮತ್ತು ರಕ್ಷಾ ದಾವಣಗೆರೆಯ ವಾಗೇಶ್ ಬಾಬು ಜಿ.ಪಿ ಅವರ ಪುತ್ರಿಯರು.”ಒಳ್ಳೆ ಸರ್ಕಾರ, ನಾಯಕರು, ಆಡಳಿತಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಬೇಕು” ಎಂದು ಮನವಿ ಮಾಡಿದರು.
3 ಲಕ್ಷ ರೂ. ವೆಚ್ಚ ಮಾಡಿ ಬಂದ ಅನಿವಾಸಿ ಭಾರತೀಯ!
ರಾಯಚೂರು: ಅನಿವಾಸಿ ಭಾರತೀಯರೊಬ್ಬರು 3 ಲಕ್ಷ ರೂ. ವೆಚ್ಚ ಮಾಡಿ ಮತದಾನ ಮಾಡುವುದಕ್ಕಾಗಿಯೇ ಭಾರತಕ್ಕೆ ಬಂದು ಹಕ್ಕು ಚಲಾಯಿಸಿದರು. ಆ ಮೂಲಕ ಮತದಾನದ ಮಹತ್ವ ಸಾರಿದರು. ಒಮಾನ್ ದೇಶದ ಮಸ್ಕತ್‌ನಲ್ಲಿರುವ ಅನಿವಾಸಿ ಭಾರತೀಯ, ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ನಿವಾಸಿ ಅಮರೇಶ ಈ ವ್ಯಕ್ತಿ. ಕಳೆದ 25 ವರ್ಷಗಳಿಂದ ಮಸ್ಕತ್‌ನಲ್ಲಿ ವಾಸಿಸುತ್ತಿರುವ ಅಮರೇಶ, ವಟಗಲ್ ಗ್ರಾಮದಲ್ಲಿ ಮತದಾನ ಮಾಡಿ, “ಪ್ರತಿಯೊಬ್ಬರೂ ಮತದಾನ ಮಾಡಿ” ಎಂದು ಸಂದೇಶ ನೀಡಿದರು.
ಅಬುಧಾಬಿಯಿಂದ ಬಂದು ಮತ ಹಾಕಿದ
ಚಿಕ್ಕೋಡಿ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಸುರಜ ಉಪಾಶೆ ಎಂಬ ಯುವಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮತ ಹಕ್ಕು ಚಲಾಯಿಸಿದ್ದಾನೆ. ಕಳೆದ 10 ವರ್ಷದಿಂದ ಅಬುಧಾಬಿಯಲ್ಲಿರುವ ಯುವಕ, ಮತದಾನಕ್ಕಾಗಿಯೇ ಆಗಮಿಸಿದ್ದಾನೆ. ಹುಕ್ಕೇರಿ ಪಟ್ಟಣದ ಗಾಂಧಿ ನಗರ ಶಾಲೆಯಲ್ಲಿ ಮತದಾನ ಮಾಡಿದ್ದು, ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾನೆ.
ಉಚಿತ ತಿಂಡಿ, ಕಾಫಿ- ಟೀ
ಶಿವಮೊಗ್ಗ: ಶಿವಮೊಗ್ಗದ ಶುಭಂ ಹೋಟೆಲ್‌ನಲ್ಲಿ, ಮತದಾನದ ಪ್ರಮಾಣ ಹೆಚ್ಚಿಸಿ, ಜಾಗೃತಿ ಮೂಡಿಸಲು ಸ್ಪೆಷಲ್ ಆಫರ್ ನೀಡಲಾಯಿತು. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಫ್ರೀ ಟಿಫನ್ ನೀಡಲಾಯಿತು. ಬೆಳಗ್ಗೆಯಿಂದ 5 ಸಾವಿರಕ್ಕೂ ಹೆಚ್ಚು ಮತದಾರರು ಫ್ರೀ ಟಿಫನ್ ಸವಿದರು. ಪಲಾವ್, ದೋಸೆ, ಬಿಸಿಬೇಳೆಬಾತ್, ಕಾಫಿ ತಿಂಡಿ ಫ್ರೀ ನೀಡಲಾಗಿದೆ. ಸುಮಾರು 10 ಸಾವಿರ ಮಂದಿಗೆ ಆಗುವಷ್ಟು ಹೋಟೆಲ್ ಮಾಲಿಕರು ಉಚಿತ ತಿಂಡಿಯ ವ್ಯವಸ್ಥೆ ಮಾಡಿದ್ದರು.
ವೋಟ್ ಮಾಡಿದರೆ ಉಚಿತ ಐಸ್‌ಕ್ರೀಂ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಡೈರೀಸ್ ಐಸ್‌ಕ್ರೀಮ್ ಮಾಲಿಕರು ವೋಟ್ ಮಾಡಿದವರಿಗೆ ಉಚಿತವಾಗಿ ಎಲೆಕ್ಷನ್ ಸ್ಪೆಷಲ್ ಐಸ್‌ಕ್ರೀಮ್ ವಿತರಿಸಿದರು. ಉಜ್ವಲ ಭಾರತದ ಭವಿಷ್ಯಕ್ಕಾಗಿ ಮತದಾನ ಪ್ರೋತ್ಸಾಹಿಸಲು ಡೈರಿಸ್ ಐಸ್ಕ್ರೀಮ್ ವಿತರಣೆ ನಡೆಯಿತು.
ಮತದಾನ ಬಹಿಷ್ಕಾರ
ವಿಜಯನಗರ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಚಿಲಕನಹಟ್ಟಿ ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ವಿಂಗಡಣೆ ಮಾಡಿದ್ದಕ್ಕೆ ಮತದಾನ ಬಹಿಷ್ಕಾರ ಹಾಕಲಾಯಿತು. ಹಾರುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 78ರಲ್ಲಿ, ಚಿಲಕನಹಟ್ಟಿಯ ಮಾರುತಿ ನಗರದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಮಾಡುವಂತೆ ಮತದಾರರು ಪಟ್ಟು ಹಿಡಿದರು. ಕಳೆದ ಹಲವು ವರ್ಷದಿಂದ ಪ್ರತ್ಯೇಕ ಮತಗಟ್ಟೆಗೆ ಒತ್ತಾಯವಿತ್ತು. ಚಿಲಕನಹಟ್ಟಿಯಿಂದ ಹಾರುವನಹಳ್ಳಿ ಗ್ರಾಮಕ್ಕೆ 3 ಕಿ.ಮೀ ಅಂತರವಿದೆ. ಅದಕ್ಕೆ ರಾಷ್ಟ್ರೀಯ ಹೆದ್ದಾರಿ 50 ದಾಟಬೇಕಿದ್ದು, ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಗ್ರಾಮಸ್ಥರದ್ದು.
ಗೌಪ್ಯ ಮತದಾನ ವೈರಲ್
ದಾವಣಗೆರೆ: ಎಷ್ಟೇ ಕಟ್ಟುನಿಟ್ಟಾಗಿ ಗೌಪ್ಯ ಮತದಾನ ಮಾಡಿದರೂ ಫೋಟೋ ತೆಗೆದುಕೊಂಡು ಪಬ್ಲಿಕ್ ಮಾಡುತ್ತಿರುವವರು ಕಂಡುಬಂದಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮತ ಹಾಕಿದ್ದನ್ನು ಬಿಜೆಪಿ ಕಾರ್ಯಕರ್ತನೊಬ್ಬ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಮತಗಟ್ಟೆಗೆ ಮೊಬೈಲ್ ನಿಷೇಧ ಮಾಡಿದರೂ ಮೊಬೈಲ್ ತೆಗೆದುಕೊಂಡು ಹೋಗಲಾಗಿದೆ.
ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತ ವಾಗ್ವಾದ
ಬೆಳಗಾವಿ: ಕೆಲವೆಡೆ ಬಿಜಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬೆಳಗಾವಿಯ ಹನುಮಾನ್ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತಗಟ್ಟೆಯಲ್ಲೇ ನಿಂತು ಮತದಾರರು ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಇದನ್ನೂ ಓದಿ: Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ