ಉಡುಪಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್ 26) ಮೊದಲ ಹಂತದ ಮತದಾನ (First phase of polling) ನಡೆಯುತ್ತಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ (Udupi Chikkamagaluru Lok Sabha constituency) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಉಡುಪಿಯಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು (Adamaru Mutt Sri Vishwapriya Theertha Swamiji) ಎರಡೆರಡು ಬಾರಿ ಮತ ಚಲಾವಣೆ ಮಾಡಿದ ಪ್ರಸಂಗ ನಡೆದಿದೆ.
ಅದಮಾರು ಶ್ರೀಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ಬಾರಿ ಮತದಾನ ಮಾಡುವಂತಾಗಿದೆ. ಶುಕ್ರವಾರ ಬೆಳಗ್ಗೆಯೇ ಮತಗಟ್ಟೆ ಮುಂದೆ ಇದ್ದ ಅದಮಾರು ಶ್ರೀಗಳು ಮೊದಲಿಗರಾಗಿ ಮತದಾನ ಮಾಡಿದರು. ನೋಂದಣಿ ಮಾಡಿ, ಕೈಗೆ ಇಂಕ್ ಹಾಕಿಸಿಕೊಂಡು, ಬಟನ್ ಪ್ರೆಸ್ ಮಾಡಿದ್ದರು. ಆದರೆ, ಬೀಪ್ ಸೌಂಡ್ ಕೇಳಲೇ ಇಲ್ಲ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಅಧಿಕಾರಿಗಳು ಮತದಾನವಾಗಿದೆ ಎಂದು ಉತ್ತರ ಹೇಳಿದ್ದಾರೆ. ಹೀಗಾಗಿ ಅದಮಾರು ಶ್ರೀ ಮತಗಟ್ಟೆಯಿಂದ ವಾಪಾಸ್ ಆಗಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ಶ್ರೀಗಳ ಶಿಷ್ಯರ ಬೇಸರ
ಬಳಿಕ ಮಾಧ್ಯಮಗಳ ಬಳಿ ಈ ಬಗ್ಗೆ ಅದಮಾರು ಶ್ರೀಗಳು ಮಾಹಿತಿ ನೀಡುತ್ತಿದ್ದಾಗ ಮತಗಟ್ಟೆ ಅಧಿಕಾರಿಗಳು ಸ್ಥಳಕ್ಕೆ ಬಂದು ಶ್ರೀಗಳನ್ನು ಮತ್ತೆ ಒಳಗೆ ಕರೆದು ಮತದಾನ ಮಾಡುವಂತೆ ಹೇಳಿದರು. ಹೀಗಾಗಿ ಅಧಿಕಾರಿಗಳ ಸೂಚನೆ ಬಳಿಕ ಎರಡನೇ ಬಾರಿ ಬಂದು ಶ್ರೀಗಳು ಮತದಾನ ಮಾಡಿದ್ದಾರೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಶ್ರೀಗಳ ಶಿಷ್ಯರು ಬೇಸರ ಹೊರಹಾಕಿದ್ದಾರೆ.
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯಿಂದ ಮತದಾನ
ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಶುಕ್ರವಾರ ಬೆಳಗ್ಗೆ ಮತಗಟ್ಟೆ ಸಂಖ್ಯೆ 185ರಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ತಮಗೆ ಬೇಕಾಗಿರುವ ಸರ್ಕಾರ ರೂಪಿಸುವ ದೊಡ್ಡ ಬದ್ಧತೆ ಪ್ರಜೆಗಳ ಮೇಲೆ ಇದೆ. ಎಲ್ಲ ಪ್ರಜೆಗಳು ಅವಶ್ಯವಾಗಿ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ದೂರ ಉಳಿಯಬಾರದು. ಮತದಾನ ಮಾಡಲು ತುಂಬಾ ಹೆಮ್ಮೆ ಅನಿಸುತ್ತಿದೆ. ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಾಗ ಅನುಭವಿಸಿದ ಧನ್ಯತಾಭಾವವನ್ನು ಈಗಲೂ ಅನುಭವಿಸಿದ್ದೇವೆ. ದೇಶದಲ್ಲಿ ಎಲ್ಲ ಬಗೆಯ ಜನ ಎಲ್ಲ ಕಾಲಕ್ಕೂ ಇರುತ್ತಾರೆ. ನೆಲದ ಸಂಸ್ಕೃತಿಯನ್ನು ಗೌರವಿಸುವ ಸರ್ಕಾರವನ್ನು ರೂಪಿಸುವ ಅವಕಾಶ ನಮಗೆ ಇದೆ. ಸಮಾಜದ ಪ್ರಸಕ್ತ ವಾತಾವರಣವನ್ನು ಅರ್ಥ ಮಾಡಿಕೊಂಡು ಮತದಾನ ಮಾಡಬೇಕು. ನಮಗೆ ಬೇಕಾಗಿರುವ ಸರ್ಕಾರವನ್ನು ರೂಪಿಸಬೇಕು. ರಾಜನಾದವ ಸರಿಯಾಗಿದ್ದರೆ ಕಾಲ ಯಾವತ್ತೂ ಹಾಳಾಗುವುದಿಲ್ಲ. ಈಗ ಪ್ರಜೆಗಳೇ ರಾಜರು ಎಂದು ಹೇಳಿದರು.
ಇದನ್ನೂ ಓದಿ: Lok Sabha Election 2024: ಚಾಮರಾಜನಗರದಲ್ಲಿ ಮತ ಯಂತ್ರ ಪೀಸ್ ಪೀಸ್; ಮತಗಟ್ಟೆ ಧ್ವಂಸ, ಲಾಠಿ ಚಾರ್ಜ್!
ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಬಗ್ಗೆ ಪ್ರತಿಪಕ್ಷಗಳ ಆರೋಪದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಧಾನಿ ಇದ್ದಾರೆ ಎಂದಾದರೆ ಅವರು ಸರ್ವಾಧಿಕಾರಿ ಆಗುವುದು ಹೇಗೆ? ಪ್ರಜೆಗಳು ತಮಗೆ ಬೇಕಾದ ಸರ್ಕಾರವನ್ನು ರೂಪಿಸುತ್ತಿದ್ದಾರೆ. ಅದನ್ನು ಆಕ್ಷೇಪಿಸಿದರೆ ಸಾರ್ವಕಾಲಿಕ ಆಕ್ಷೇಪವಾಗುತ್ತದೆ. ಮತದಾನ ಪ್ರಮಾಣ ಕಡಿಮೆ ಆಗಬಾರದು. ವ್ಯವಸ್ಥೆ ನಮಗೆ ಅನುಕೂಲವಾಗಿಲ್ಲ ಅಂತ ದೂರುತ್ತೇವೆ. ಹಾಗಾದರೆ ವ್ಯವಸ್ಥೆಯನ್ನು ಸರಿ ಮಾಡುವುದು ಯಾರು? ಮತದಾನದಿಂದ ದೂರ ಉಳಿದವರು ಈ ದೇಶದ ನಾಗರಿಕರೇ ಅಲ್ಲ. ಅವರಿಗೆ ಸಿಟಿಜನ್‌ಶಿಪ್ ಕೊಡಬಾರದು. ಅದು ಕಠೋರ ನಿಲುವು ಆಗುತ್ತದೆ. ಆದರೆ, ಅವಶ್ಯವಾಗಿ ಬೇಕು. ಸರ್ಕಾರ ನೀಡುವ ಸವಲತ್ತುಗಳನ್ನು ಬಂದ್ ಮಾಡಬೇಕು. ಅವರನ್ನು ದ್ವಿತೀಯ, ತೃತೀಯ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸಬೇಕು. ಆಗ ಪರಿಸ್ಥಿತಿ ಸುಧಾರಿಸಬಹುದು ಎಂದು ಹೇಳಿದರು.