Site icon Vistara News

Lok Sabha Election 2024: ಗೋಬ್ಯಾಕ್ ಶೋಭಾ ಅಭಿಯಾನ; ತೇಜಸ್ವಿ ಸೂರ್ಯ ಸಹೋದರ ಸಂಬಂಧಿ ಬೆಂಬಲ!

Lok Sabha Election 2024 Tejasvi Surya brother in law support GoBack Shobha Campaign

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಎಲ್ಲೆಡೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇನ್ನು ಹಲವು ಪಕ್ಷಗಳಲ್ಲಿ ಹಾಲಿ ಸಂಸದರಿಗೆ ಸ್ವಪಕ್ಷದಿಂದಲೇ ವಿರೋಧಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ (Udupi Chikkamagaluru constituency) ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಗೋಬ್ಯಾಕ್‌ ಅಭಿಯಾನವನ್ನು (GoBack Campaign) ನಡೆಸುತ್ತಿದ್ದಾರೆ. ಇದಕ್ಕೆ ಶೋಭಾ ಸಹ ತಿರುಗೇಟು ನೀಡಿ, ಇದರಿಂದ ತಮಗೆ ಅನುಕೂಲವೇ ಹೆಚ್ಚು ಎಂದು ಹೇಳಿದ್ದರು. ಅಲ್ಲದೆ, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಮಧ್ಯಪ್ರವೇಶ ಮಾಡಿ, “ಕೆಲವರು ಶೋಭಾ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದು, ಅವರಿಗೇ ಈ ಬಾರಿಯ ಟಿಕೆಟ್‌” ಎಂದು ಹೇಳಿದ್ದರು. ಇಷ್ಟೆಲ್ಲ ಬೆಳವಣಿಗೆ ನಡುವೆ ಈಗ ಗೋಬ್ಯಾಕ್ ಶೋಭಾ ಅಭಿಯಾನಕ್ಕೆ ಸಂಸದ ತೇಜಸ್ವಿ ಸೂರ್ಯ (Tejasvi surya) ಸಹೋದರ ಸಂಬಂಧಿ ಕೈಜೋಡಿಸಿದ್ದಾರೆ. ಇದರಿಂದ ತೇಜಸ್ವಿಗೆ ತೀವ್ರ ಮುಜುಗರ ಉಂಟಾಗಿದೆ.

ತೇಜಸ್ವಿ ಸೂರ್ಯ ಸಹೋದರ ಸಂಬಂಧಿ ಸುನಿಲ್ ಲಕ್ಯಾ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್‌ವೊಂದನ್ನು ಮಾಡಿದ್ದು, ಬಿಜೆಪಿಗೆ ಇರಿಸುಮುರಿಸು ಉಂಟು ಮಾಡಿದೆ. ಸುನಿಲ್ ಲಕ್ಯಾ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ನಮ್ಮ ಮತ ಬಿಜೆಪಿಗೆ – ಶೋಭಾ ಕರಂದ್ಲಾಜೆ ಅವರಿಗಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ನಮ್ಮ ಮತ ಸಿ.ಟಿ. ರವಿಗೆ ಎಂದು ಕಮೆಂಟ್ ಸೆಕ್ಷನ್‌ನಲ್ಲಿ ಅವರು ಉತ್ತರ ನೀಡಿದ್ದಾರೆ. ಈ ಮೂಲಕ ಶೋಭಾ ಕರಂದ್ಲಾಜೆ ವಿರುದ್ಧ ಹಾಗೂ ಸಿ.ಟಿ. ರವಿ ಪರವಾಗಿ ನಿಂತಿದ್ದಾರೆ.

Lok Sabha Election 2024 Tejasvi Surya brother in law support GoBack Shobha Campaign

ಸುನಿಲ್‌ ಎಲ್ಲಿಯವರು?

ಸುನಿಲ್‌ ಲಕ್ಯಾ ಅವರು ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಸಂಬಂಧಿಕರಾಗಿದ್ದಾರೆ. ಅವರು ಬಿಜೆಪಿ ಕಾರ್ಯಕರ್ತರಾಗಿದ್ದು, ಉಡುಪಿ ನಿವಾಸಿಯಾಗಿದ್ದಾರೆ. ಹೀಗಾಗಿ ಅವರು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಮತದಾರರಾಗಿರುವುದರಿಂದ ಈ ಪೋಸ್ಟ್‌ ಮಾಡಿದ್ದಾರೆ. ಬಿಜೆಪಿಯಲ್ಲಿ ಈಗ ಟಿಕೆಟ್‌ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಗೋಬ್ಯಾಕ್‌ ಶೋಭಾ ಅಭಿಯಾನವೂ ನಡೆಯುತ್ತಿದೆ. ಇದರಿಂದಾಗಿ ಮತದಾರರಾಗಿ ಅವರು ತಮ್ಮ ಆಯ್ಕೆ ಯಾರು ಎಂಬ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಹೇಳಿಕೊಂಡಿದ್ದಾರೆ. ಆದರೆ, ಇದು ಸಹಜವಾಗಿ ಶಾಸಕ ರವಿಸುಬ್ರಹ್ಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮುಜುಗರವನನ್ನು ತರಲಿದೆ.

ಸಿ.ಟಿ. ರವಿ ಪ್ರತಿಕ್ರಿಯೆ ಏನಿತ್ತು?

ಈ ಬಗ್ಗೆ ಭಾನುವಾರ ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಾಜಿ ಸಚಿವ ಸಿ.ಟಿ. ರವಿ, “ನನ್ನ ಗ್ರಹಚಾರ ಸರಿ ಇರಲಿಲ್ಲ. ನನ್ನ ಸೋಲಿನಲ್ಲಿ ನನ್ನದೇ ತಪ್ಪು ಇರಬಹುದು ಎಂದು ಹೇಳಿದ್ದೇನೆ. ನನ್ನ ಅತಿಯಾದ ವಿಶ್ವಾಸದಿಂದ ಸೋತಿದ್ದೇನೆ ಎಂದು ಈಗಾಗಲೇ ಹೇಳಿದ್ದೇನೆ. ಅತಿ ವಿಶ್ವಾಸವೂ ಕೆಲವೊಮ್ಮೆ ಸೋಲಿಗೆ ಕಾರಣವಾಗುತ್ತದೆ. ನಾನು ಮತ್ತೊಬ್ಬರ ಕಡೆ ಬೊಟ್ಟು ಮಾಡಲ್ಲ, ಅವರವರ ಕರ್ಮವನ್ನು ಅವರವರು ಅನುಭವಿಸಬೇಕು. ನನ್ನ ತಪ್ಪಿಂದಲೇ ಸೋತಿದ್ದೇನೆ ಎಂದು ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷ ದ್ರೋಹ ಮಾಡಿದರೆ, ಕರ್ಮ ಅವರನ್ನು ಬೆಂಬಿಡದೆ ಕಾಡುತ್ತದೆ ಎಂದು ಹೇಳಿದ್ದರು.

ರದ್ದಾಯಿತು ಸಿಇಸಿ ಸಭೆ

ಭಾನುವಾರ ಚಿಕ್ಕಮಗಳೂರಿನ ಪಾಂಚಜನ್ಯದಲ್ಲಿ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ (ಸಿಇಸಿ) ಸಭೆಯನ್ನು ನಡೆಸಲಾಗಿತ್ತು. ಆದರೆ, ಬಿಜೆಪಿ ಕಾರ್ಯಕರ್ತರ “ಶೋಭಾ ಗೋಬ್ಯಾಕ್” ಆಕ್ರೋಶ ಭುಗಿಲೆದ್ದಿತ್ತು. ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದರಿಂದ ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ರದ್ದು ಮಾಡಲಾಗಿತ್ತು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ನ 21 ಅಭ್ಯರ್ಥಿಗಳ ಪಟ್ಟಿ ಇಂದೇ ಫೈನಲ್;‌ 8 ಸಚಿವರು ಕಣಕ್ಕೆ?

ಶೋಭಾ ವಿರುದ್ಧದ ಆಕ್ರೋಶವೇಕೆ?

ಬಿಜೆಪಿ ಕಚೇರಿಯ ಬಾಗಿಲಿನ ಮುಂದೆ ಭಾನುವಾರ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. “ಪ್ರಧಾನಿ ನರೇಂದ್ರ ಮೋದಿ ಬೇಕು, ಶೋಭಾ ಕರಂದ್ಲಾಜೆ ಬೇಡ” ಎಂದು ಘೋಷಣೆ ಕೂಗಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಎಂ.ಎಲ್.ಎ. ಸ್ಥಾನವನ್ನು ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡೆವು. ಉಡುಪಿ ಮೂಲದವರೇ ಸಂಸದರಾಗಿದ್ದಾರೆ. ಆದರೂ ಯಾಕೆ ಹೀಗಾಯಿತು? ಉಡುಪಿಯಲ್ಲಿ ಐವರು ಶಾಸಕರಿದ್ದಾರೆ. ಚಿಕ್ಕಮಗಳೂರಲ್ಲಿ ಯಾರೂ ಇಲ್ಲ. ಈ ಬಾರಿ ಚಿಕ್ಕಮಗಳೂರಿನವರಿಗೆ ಟಿಕೆಟ್ ಕೊಡಬೇಕು. ಯಾರಿಗಾದರೂ ಕೊಡಿ, ಚಿಕ್ಕಮಗಳೂರು ಜಿಲ್ಲೆಯವರಿಗೆ ಕೊಡಿ ಎಂದು ಆಕ್ರೋಶವನ್ನು ಹೊರಹಾಕಿದ್ದರು.

Exit mobile version