ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಾವು ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಕೊನೆಗೊಂಡಿದೆ. ಇದೇ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Bangalore South Lok Sabha constituency) ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ನಾಮಪತ್ರ ಸಲ್ಲಿಕೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಉಮೇದುವಾರಿಕೆ ಸಲ್ಲಿಕೆ ವೇಳೆ ರ‍್ಯಾಲಿಯಲ್ಲಿ ಭಾಗಿಯಾಗಲು ಜೈನ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಒತ್ತಡ ಹಾಕಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಜಯನಗರ 4ನೇ ಬ್ಲಾಕ್‌ನ ಮಯ್ಯಾಸ್ ಹೋಟೆಲ್‍ನಿಂದ ರೋಡ್ ಶೋ ಮೂಲಕ ಹೊರಟು ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಆದರೆ, ಈ ರೋಡ್ ಶೋಗೆ ವಿದ್ಯಾರ್ಥಿಗಳನ್ನು ಬಲವಂತವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ತೇಜಸ್ವಿ ಸೂರ್ಯ ಅವರ ಮೇಲೆ ಕೇಳಿಬಂದಿದೆ. ಜೈನ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ವಾಟ್ಸಾಪ್ ಮೂಲಕ ಮಾಡಲಾಗಿದೆ ಎನ್ನಲಾದ ಮೆಸೇಜ್‌ಗಳ ಸಹಿತ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ಅವರ ನಾಮಪತ್ರವನ್ನು ರದ್ದು ಮಾಡುವಂತೆ ಒತ್ತಾಯಿಸಲಾಗಿದೆ.
ವಾಟ್ಸಾಪ್ ಮೆಸೇಜ್‌ನಲ್ಲೇನಿದೆ?
ಇಂದು ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮೆರವಣಿಗೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿ ಪರಿಷತ್ತಿನ ಎಲ್ಲ ಸದಸ್ಯರು ಸೇರಿ ಎಲ್ಲ ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಜಯನಗರದ ಮೈಯ್ಯಾಸ್ ಹೋಟೆಲ್ ಬಳಿ ಸೇರಬೇಕು. ಅಲ್ಲಿ ನಿಮಗೆ ಟಿ-ಶರ್ಟ್ ನೀಡಲಾಗುವುದು. ಆದ್ದರಿಂದ ತಡ ಮಾಡಬಾರದು. ಕಡ್ಡಾಯವಾಗಿ ಇದರಲ್ಲಿ ಭಾಗವಹಿಸಬೇಕು. ಇದರಿಂದ ಯಾವುದೇ ವಿನಾಯಿತಿಯನ್ನು ನೀಡಲಾಗುವುದಿಲ್ಲ. ಇದಕ್ಕಾಗಿ ನೀವು ಹಾಜರಾತಿ ಪಡೆಯುತ್ತೀರಿ ಎಂದು ಕಾಲೇಜಿನ ಗ್ರೂಪ್‌ವೊಂದರಲ್ಲಿ ಸೂಚನೆ ನೀಡಲಾಗಿದೆ. ಇದನ್ನು ಕಾಲೇಜಿನ ಪ್ರತಿಯೊಂದು ತರಗತಿಯ ವಾಟ್ಸಾಪ್ ಗ್ರೂಪ್‌ನಲ್ಲೂ ಶೇರ್ ಮಾಡಲಾಗಿದೆ. ಕಾಲೇಜಿನ ಆಡಳಿತ ಮಂಡಳಿಯ ಸೂಚನೆಯ ಹಿನ್ನೆಲೆಯಲ್ಲಿ ಈ ಮೆಸೇಜ್ ಮಾಡಲಾಗಿದೆ ಎನ್ನಲಾಗಿದೆ. ಈಗ ಇದರ ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಜೈನ್ ಯೂನಿವರ್ಸಿಟಿ ವಾಟ್ಸಪ್ ಗ್ರೂಪ್‌ನಲ್ಲಿ ಚಾಟ್ ಪ್ರತಿಯೊಂದಿಗೆ ಟ್ವೀಟ್ ಮಾಡಿದ ಕಾಂಗ್ರೆಸ್
ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ತನ್ನ ಪಟಾಲಂ ಮೂಲಕ ಸೂಚನೆ ನೀಡಿರುವ @Tejasvi_Surya ವಿರುದ್ಧ @ceo_karnataka ಅವರು ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು.
— Karnataka Congress (@INCKarnataka) April 4, 2024
ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಭಾಗವಹಿಸುವಂತೆ ಬೆದರಿಕೆ ಹಾಕುತ್ತಿರುವುದು ಚುನಾವಣಾ… pic.twitter.com/ritU2gV7V4
ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ತೀವ್ರ ಆಕ್ರೋಶವನ್ನು ಹೊರಹಾಕಿದೆ. ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಭಾಗವಹಿಸುವಂತೆ ಬೆದರಿಕೆ ಹಾಕುತ್ತಿರುವುದು ಚುನಾವಣಾ ನಿಯಮಗಳಿಗೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ವಿರದ್ಧ ಪಕ್ಷಪಾತವಿಲ್ಲದೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
ಕಾಂಗ್ರೆಸ್ ಪೋಸ್ಟ್‌ನಲ್ಲೇನಿದೆ?
“ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಜೈನ್ ಕಾಲೇಜಿನ ವಿದ್ಯಾರ್ಥಿಗಳಿಗೆ ತನ್ನ ಪಟಾಲಂ ಮೂಲಕ ಸೂಚನೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗವು ಕೂಡಲೇ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಿಗೆ ಭಾಗವಹಿಸುವಂತೆ ಬೆದರಿಕೆ ಹಾಕುತ್ತಿರುವುದು ಚುನಾವಣಾ ನಿಯಮಗಳಿಗೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಮಣಿಸಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್; ಟಾರ್ಗೆಟ್ ಡಿಕೆಶಿ!
ಟಿ ಶರ್ಟ್ ಹಂಚಿಕೆಯ ವಿರುದ್ಧವೂ ಕ್ರಮ ಜರುಗಿಸಿ ಪಾರದರ್ಶಕ ಚುನಾವಣೆಗೆ ಪಕ್ಷಪಾತವಿಲ್ಲದ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ನೀತಿ ಸಂಹಿತೆಗೆ ವಿರುದ್ಧವಾಗಿ ನಗರತ್ ಪೇಟೆಯಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗ ಯಾವುದೇ ಕಠಿಣ ಕ್ರಮ ಜರುಗಿಸದಿರುವುದು ಜನರಲ್ಲಿ ಆಯೋಗದ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಮೂಡಲು ಕಾರಣವಾಗಿದೆ” ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಅಸಮಾಧಾನವನ್ನು ಹೊರಹಾಕಿದೆ.