Site icon Vistara News

Lok Sabha Election 2024: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್‌ ಅಭ್ಯರ್ಥಿ; ವಿಡಿಯೊ ಇಲ್ಲಿದೆ

Lok Sabha Election 2024

Lok Sabha Election 2024

ಹೈದರಾಬಾದ್‌: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಎರಡು ಹಂತದ ಮತದಾನ ಮುಗಿದಿದ್ದು, ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಹೀಗಾಗಿ ರಾಜಕಾರಣಿಗಳು ಬಿರುಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕೆಲವು ನಾಯಕರು ವಿವಾದವನ್ನೂ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ತೆಲಂಗಾಣದ ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಟಿ.ಜೀವನ್‌ ರೆಡ್ಡಿ (T. Jeevan Reddy). ಚುನಾವಣಾ ಪ್ರಚಾರದ ಮೇಲೆ ಮಹಿಳೆಯ ಕೆನ್ನೆಗೆ ಅವರು ಹೊಡೆದಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video). ಜತೆಗೆ ಅವರ ನಡೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ.

ಮಾಜಿ ಸಚಿವರೂ ಆದ ಜೀವನ್‌ ರೆಡ್ಡಿ ಪ್ರಚಾರದ ವೇಳೆ ಸಾರ್ವಜನಿಕವಾಗಿಯೇ ಮಹಿಳೆಯ ಕೆನ್ನೆಗೆ ಬಾರಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ. ಅರ್ಮೂರ್ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೀವನ್‌ ರೆಡ್ಡಿ ಇತರ ಕೆಲವು ನಾಯಕರೊಂದಿಗೆ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ವಿಡಿಯೊದಲ್ಲಿ ಏನಿದೆ?

ಜೀವನ್‌ ರೆಡ್ಡಿ ಮತ್ತು ಕಾಂಗ್ರೆಸ್‌ ನಾಯಕರು ಪ್ರಚಾರ ನಡೆಸುತ್ತ ಅರ್ಮೂರ್‌ನ ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ, ಮೇ 13ರಂದು ನಡೆಯಲಿರುವ ಚುನಾವಣೆಯಲ್ಲಿ ತಮಗೆ ಮತ ಹಾಕಬೇಕೆಂದು ಜೀವನ್‌ ರೆಡ್ಡಿ ಹೇಳಿದ್ದರು. ಆದರೆ ಆ ಮಹಿಳೆ ತಾನು ‘ಹೂವು’ ಚಿಹ್ನೆಗೆ ವೋಟು ಮಾಡುವುದಾಗಿ ತಿಳಿಸಿದ್ದರು. ಇದರಿಂದ ಸಿಟ್ಟಿಗೆದ್ದ ಜೀವನ್‌ ರೆಡ್ಡಿ ಎಲ್ಲರೆದುರೆ ಮಹಿಳೆಗೆ ಕೆನ್ನೆಗೆ ಹೊಡೆದಿದ್ದಾರೆ. ಕಾಂಗ್ರೆಸ್‌ ಮುಖಂಡರು ನೋಡುತ್ತಿರುವಂತೆಯೇ ಈ ಘಟನೆ ನಡೆದಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆ ಹೇಳಿದ್ದೇನು?

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದೆ. ಆದರೆ ಪಿಂಚಣಿ ಸಿಗುತ್ತಿಲ್ಲ ಎಂದು ಮಹಿಳೆ ಕಾರಣ ನೀಡಿ ಈ ಬಾರಿ ಬಿಜೆಪಿಗೆ ವೋಟು ಹಾಕಲಿದ್ದೇನೆ ಎಂದು ಹೇಳಿದ್ದರೆಂದು ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ವಿನಯ್ ಕುಮಾರ್ ರೆಡ್ಡಿ ಅವರು ಅರ್ಮೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಮೂರ್ ಕೂಡ ಒಂದು. ಪ್ರಸ್ತು ಇಲ್ಲಿ ಬಿಜೆಪಿಯ ಡಿ.ಅರವಿಂದ್‌ ಸಂಸದರಾಗಿದ್ದು, ಅವರ ವಿರುದ್ಧ ಜೀವನ್‌ ರೆಡ್ಡಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: Narendra Modi: ಅಮೇಥಿ ಬದಲು ರಾಯ್‌ ಬರೇಲಿಯಿಂದ ರಾಹುಲ್‌ ಗಾಂಧಿ ಸ್ಪರ್ಧೆ; ಓಡಬೇಡಿ ಎಂದು ವ್ಯಂಗ್ಯವಾಡಿದ ಮೋದಿ

ನೆಟ್ಟಿಗರಿಂದ ತರಾಟೆ

ಜೀವನ್‌ ರೆಡ್ಡಿ ಅವರ ನಡೆಗೆ ನೆಟ್ಟಿಗರು ಕೆಂಡ ಕಾರಿದ್ದಾರೆ. ʼʼನಾಚಿಕೆ ಇಲ್ಲದ ವ್ಯಕ್ತಿ. ಈ ಬಾರಿ ಹೀನಾಯವಾಗಿ ಸೋಲುತ್ತಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಏನು ನಡೆಯುತ್ತಿದೆ?ʼʼ ಎಂದು ಇನ್ನೊಬ್ಬರು ಆಘಾತ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೆಲವರು ಜೀವನ್‌ ರೆಡ್ಡಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ತಮಾಷೆಗಾಗಿ ಮಾಡಿದ್ದಾರೆ. ನಿಜವಾಗಿಯೂ ಅವರು ಹೊಡೆದಿಲ್ಲ ಎಂದು ಹೇಳಿದ್ದಾರೆ. ಏನೇ ಇರಲಿ ಸಾರ್ವಜನಿಕವಾಗಿ ಹೀಗೆ ವರ್ತಿಸಿದ್ದು ತಪ್ಪು ಎನ್ನವುದು ಇನ್ನು ಹಲವರ ವಾದ. ಒಟ್ಟಿನಲ್ಲಿ ಈ ಘಟನೆ ಭಾರೀ ಸದ್ದು ಮಾಡುತ್ತಿದೆ.

Exit mobile version