Site icon Vistara News

Lok Sabha Election 2024: ಮೊದಲ ಹಂತದ ಮತದಾನ ವೇಳೆ ಗುಂಡಿನ ದಾಳಿ ನಡೆಸಿದ್ದ ಮೂವರ ಬಂಧನ

Lok Sabha Election 2024

Lok Sabha Election 2024

ಇಂಫಾಲ: ಶುಕ್ರವಾರ (ಏಪ್ರಿಲ್‌ 19) ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ಹಂತದ ಮತದಾನ ನಡೆದಿದೆ. ಕೆಲವೆಡೆ ನಡೆದ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ. ಈ ಮಧ್ಯೆ ಮಣಿಪುರದ ಇಂಫಾಲದ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಕಂಪು ಸಜೆಬ್‌ನಲ್ಲಿ ಈ ಘಟನೆ ನಡೆದಿತ್ತು.

ಗುಂಡಿನ ದಾಳಿಯ ನಂತರ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಅವರನ್ನು ಶುಕ್ರವಾರ ಸಂಜೆ ಘಟನಾ ಸ್ಥಳದಿಂದ 5 ಕಿ.ಮೀ. ದೂರದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಒಂದು ಪಿಸ್ತೂಲ್, ಮದ್ದುಗುಂಡು ಮತ್ತು 1.5 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ

ಗುಂಡಿನ ದಾಳಿ ಮತದಾನದ ಹಕ್ಕನ್ನು ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ಮತದಾರರಲ್ಲಿ ಭೀತಿಯನ್ನುಂಟು ಮಾಡಿತ್ತು. ಮತದಾನ ಪ್ರದೇಶದಲ್ಲಿ ಸುಮಾರು 10 ಸೆಕೆಂಡುಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಸಾವು ನೋವು ವರದಿಯಾಗಿಲ್ಲ. ಮಣಿಪುರದಲ್ಲಿ ಶೇ. 68ರಷ್ಟು ಮತದಾನವಾಗಿದೆ.

ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಮತದಾನ ನಡೆದ 102 ಕ್ಷೇತ್ರದ ಕಣದಲ್ಲಿ 1,625 ಅಭ್ಯರ್ಥಿಗಳು, 1,491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಸಲಾಗಿದೆ.

ಮೊದಲ ಹಂತದಲ್ಲಿ ಶೇ. 60.3ರಷ್ಟು ಮತದಾನ

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಸಂಜೆ 5 ಗಂಟೆಯವರೆಗೆ ಸುಮಾರು ಶೇ. 60ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಏಳು ಹಂತಗಳ ಚುನಾವಣೆಯ ಮೊದಲ ಮತ್ತು ಅತಿ ದೊಡ್ಡ ಹಂತದ ಮತದಾನ ಪ್ರಕ್ರಿಯೆ ಎಲ್ಲ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು. ಹೆಚ್ಚಿನ ಸ್ಥಾನಗಳಲ್ಲಿ ಸಂಜೆ 6 ಗಂಟೆಗೆ ಕೊನೆಗೊಂಡಿತು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದೆ.

ಇದನ್ನೂ ಓದಿ: Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1) ಸ್ಥಾನಗಳಿಗೆ ಮತದಾನ ನಡೆದಿದೆ. ರಾಜಸ್ಥಾನದ 12, ಉತ್ತರ ಪ್ರದೇಶದ 8, ಮಧ್ಯಪ್ರದೇಶದ 6, ಅಸ್ಸಾಂ ಮತ್ತು ಮಹಾರಾಷ್ಟ್ರದ ತಲಾ 5, ಬಿಹಾರದ 4, ಪಶ್ಚಿಮ ಬಂಗಾಳದ 3, ಮಣಿಪುರದ 2, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್ ಗಢದ ತಲಾ 1 ಸ್ಥಾನಗಳಿಗೆ ಇಂದು ಮತದಾನ ನಡೆಯಿತು. ಅರುಣಾಚಲ ಪ್ರದೇಶ (60 ಸ್ಥಾನಗಳು) ಮತ್ತು ಸಿಕ್ಕಿಂ (32 ಸ್ಥಾನಗಳು) ವಿಧಾನಸಭಾ ಚುನಾವಣೆಗಳು ಇದೇ ವೇಳೆ ನಡೆದವು.

Exit mobile version