ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಂತ್ರಗಾರಿಕೆಯಲ್ಲಿ ನಿರತವಾಗಿವೆ. ಇನ್ನು ಬಿಜೆಪಿ ಹೈಕಮಾಂಡ್ (BJP high command) ತನ್ನ ಮೊದಲ ಪಟ್ಟಿಯನ್ನು ಶನಿವಾರ (ಮಾ. 2) ಬಿಡುಗಡೆ ಮಾಡಿದೆ. ಆದರೆ, ಇದರಲ್ಲಿ ಕರ್ನಾಟಕದ ಯಾವೊಬ್ಬರ ಹೆಸರನ್ನೂ ಪ್ರಕಟ ಮಾಡಿಲ್ಲ. ಇದಕ್ಕೆ ಕಾರಣ, ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು (BJP JDS Alliance), ಇನ್ನೂ ಸೀಟು ಹಂಚಿಕೆಯಾಗಿಲ್ಲ. ಈ ನಡುವೆ ಬಿಜೆಪಿಯ ಕೆಲವು ಹಾಲಿ ಸಚಿವರು ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಈ ಸ್ಥಾನಕ್ಕೆ ಪೈಪೋಟಿಗಳು ಶುರುವಾಗಿವೆ. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ. ಸೋಮಣ್ಣ (V Somanna) ಮುನಿಸು ಮರೆತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಪುತ್ರ ಅರುಣ್ ಜತೆ ಆಗಮಿಸಿದ ಮಾಜಿ ಸಚಿವ ವಿ. ಸೋಮಣ್ಣ, ತುಮಕೂರು ಲೋಕಸಭಾ ಚುನಾವಣೆ ಟಿಕೆಟ್ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರ ಮನವೊಲಿಸಲು ಮುಂದಾಗಿದ್ದಾರೆ. ಸೋಮಣ್ಣ ಆಗಮನಕ್ಕೆ ಮೊದಲೇ ಹಾಲಿ ಸಂಸದ ಬಸವರಾಜ್, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗಮಿಸಿದ್ದರು. ಮತ್ತೊಂದು ಕಡೆ ಮಾಜಿ ಸಚಿವ ಮಾಧುಸ್ವಾಮಿ ಪುತ್ರ ಸುದೀಪ್ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಹೀಗಾಗಿ ಬಿಎಸ್‌ವೈ ಮನೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿತ್ತು.
ತುಮಕೂರು ಟಿಕೆಟ್ ಅಂತಿಮ?
ಸಂಸದ ಬಸವರಾಜ್ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಈಗ ಅಲ್ಲಿ ಲೋಕಸಭಾ ಕ್ಷೇತ್ರಕ್ಕೆ ನೂತನ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕಿದೆ. ಇದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ವಿ. ಸೋಮಣ್ಣ ಸೇರಿದಂತೆ ಹಲವರು ರೇಸ್‌ನಲ್ಲಿದ್ದಾರೆ. ಅಲ್ಲದೆ, ಶತಾಯಗತಾಯ ತಾವು ಲೋಕಸಭೆಗೆ ಸ್ಪರ್ಧೆ ಮಾಡಲೇಬೇಕೆಂಬ ನಿಟ್ಟಿನಲ್ಲಿ ವಿ. ಸೋಮಣ್ಣ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಹೈಕಮಾಂಡ್ ಬಳಿಯೂ ಚರ್ಚೆ ಮಾಡಿದ್ದಾರೆ. ಟಿಕೆಟ್ ಫೈನಲ್ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗ ಬಿಎಸ್. ಯಡಿಯೂರಪ್ಪ ಸಹಕಾರ ಕೋರಲು ಬಂದಿದ್ದಾರೆ ಎನ್ನಲಾಗಿದೆ. ಹಳೆಯದನ್ನೆಲ್ಲ ಮರೆತು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.
ಶೆಟ್ಟರ್‌ರಿಂದ ಸಂದಾನ
ಈಗಾಗಲೇ ಸೋಮಣ್ಣ ಅವರು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧವಾಗಿ ಹಲವು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಬೇಸರಗೊಂಡಿದ್ದರು. ಈಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಂದ ಬಿಎಸ್‌ವೈ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ: ಸೋಮಣ್ಣ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, ನಾವು ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ. ನೋವುಗಳ ಬಗ್ಗೆ ಚರ್ಚೆಯಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ ಜತೆ ಚರ್ಚೆಯಾಗಿದೆ. ಯಾವುದೇ ಗೊಂದಲ ಬೇಡ ಅಂತ ಹೇಳಿದ್ದಾರೆ ಎಂದು ಹೇಳಿದರು.
ಮುಂದಿನ ಮೇ ವರೆಗೂ ಚುನಾವಣೆ ಕಾವು ಇರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಬಯಕೆ, ಅದಕ್ಕೆ ಪಣ ತೊಟ್ಟಿದ್ದೇವೆ. ನನ್ನ ಅಸಮಾಧಾನವನ್ನು ಈಗಾಗಲೇ ಹೊರ ಹಾಕಿದ್ದೇನೆ. ನಿಮಗೂ ಗೊತ್ತಿದೆ. ಎಲ್ಲದಕ್ಕಿಂತ ದೇಶ ದೊಡ್ಡದು. ಮೋದಿಗೆ ಜತೆಯಾಗೋಣ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ನಾನೂ ಆಕಾಂಕ್ಷಿ ಅಂತ ಹೇಳಿದ್ದೇನೆ. ನಾನು ಯಾವುದಾದರೂ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಿದ್ದೆನಾ? ನೀವು ಕುಸ್ತಿ ಆಡಲ್ವಾ? ಮ್ಯಾನೇಜ್ಮೆಂಟ್ ಜತೆ ಕುಸ್ತಿ ಮಾಡಲ್ವಾ? ಕಾಂಗ್ರೆಸ್‌ಗೆ ಉತ್ತರ ಕೊಡಬೇಕಿದೆ. ಅದಕ್ಕೆ ನಿರ್ಧಾರ ಮಾಡುತ್ತಿದ್ದೇವೆ ಎಂದು ವಿ. ಸೋಮಣ್ಣ ಹೇಳಿದರು.
ತುಮಕೂರಲ್ಲಿ ಗೆಲ್ಲೋದು ಮುಖ್ಯ
ರಾಜಕಾರಣದಲ್ಲಿ ನಾನು 45 ವರ್ಷ ಮಣ್ಣು ಹೊತ್ತಿದ್ದೇನೆ. ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ನೋಡುತ್ತಿದ್ದಾರೆ. ತುಮಕೂರಿನಲ್ಲಿ ಹಾಲಿ ಸಂಸದರು ವಯಸ್ಸಿನ ಕಾರಣ ಸ್ಪರ್ಧೆ ಮಾಡಲ್ಲ ಎಂದು ಹೇಳಿದರು. ಅದಕ್ಕೆ ಅದು ಬಿಜೆಪಿ ಸೀಟು ಆಗಿದೆ. ಜೆಡಿಎಸ್ ಸೀಟು ಅಂತ ನಿರ್ಧಾರ ಆಗಿಲ್ಲ. ಒಟ್ಟಿನಲ್ಲಿ ಅಲ್ಲಿ ಗೆಲ್ಲೋದು ಮುಖ್ಯ ಎಂದು ವಿ. ಸೋಮಣ್ಣ ಹೇಳಿದರು.