Site icon Vistara News

Lok Sabha Election 2024: ಪ್ರಲ್ಹಾದ್‌ ಜೋಶಿಗೆ ವಾಲ್ಮೀಕಿ ಸಮಾಜದ ಬೆಂಬಲ: ಪ್ರಸನ್ನಾನಂದಪುರಿ ಸ್ವಾಮೀಜಿ

Lok Sabha Election 2024 Valmiki Samaj to support Pralhad Joshi says Prasannanandapuri Swamiji

ಹುಬ್ಬಳ್ಳಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ವಾಲ್ಮೀಕಿ ಸಮಾಜದವರು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರ ಬೆನ್ನಿಗೆ ನಿಲ್ಲಬೇಕು. ಅವರಿಗೆ ಶಕ್ತಿಯಾಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ (Prasannanandapuri Swamiji) ಸಮಾಜದ ಬಾಂಧವರಿಗೆ ಕರೆ ನೀಡಿದ್ದಾರೆ.

ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿದ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಆಶೀರ್ವದಿಸಿ ಮಾತನಾಡಿದ ಪ್ರಸನ್ನಾನಂದಪುರಿ ಸ್ವಾಮೀಜಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜದವರು ಒಗ್ಗಟ್ಟಾಗಿ ಪ್ರಲ್ಹಾದ್‌ ಜೋಶಿಯವರನ್ನು ಬೆಂಬಲಿಸುವ ಮೂಲಕ ಶಕ್ತಿ ತುಂಬಬೇಕು. ರಾಜ್ಯದಲ್ಲೇ ಅತಿ ಹೆಚ್ಚು ಅಂತರದ ಗೆಲುವು ಜೋಶಿಯವರದ್ದಾಗಬೇಕು ಎಂದು ಆಶಿಸಿದರು.

ಪ್ರಲ್ಹಾದ್‌ ಜೋಶಿಯವರು ಮತ್ತೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗಿ ನಮ್ಮೆಲ್ಲರ ಬೇಡಿಕೆಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಎಲ್ಲ ಸಮಾಜದ ಜನರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯ ಐತಿಹಾಸಿಕ ಗೆಲುವಿಗೆ ಕಾರಣವಾಗಬೇಕು ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ವಾಲ್ಮೀಕಿ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿದ್ದಾರೆ

ನಮ್ಮ ಸಮಾಜದ ಕಾರ್ಯಕರ್ತರನ್ನು ನಾಯಕರನ್ನಾಗಿಸಿದ್ದೇ ಪ್ರಲ್ಹಾದ್‌ ಜೋಶಿಯವರು. ಬಂಗಾರು ಹನುಮಂತು ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ಆಗಲು ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿ ಸಹಕರಿಸಿದವರು ಪ್ರಲ್ಹಾದ್‌ ಜೋಶಿ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಸ್ಮರಿಸಿದರು.

ಧರಣಿಗೆ ನ್ಯಾಯ ನೀಡಿದರು

ಬೆಂಗಳೂರಿನಲ್ಲಿ ತಾವು ಉಪವಾಸ ಧರಣಿ ಕುಳಿತ ವೇಳೆ ತನ್ನೆಲ್ಲ ಪ್ರೋಟೋಕಾಲ್ ಮರೆತು ನನ್ನನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ್ದಲ್ಲದೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ನಮ್ಮ ಬೇಡಿಕೆಗೆ ನ್ಯಾಯ ಒದಗಿಸಿದವರು ಪ್ರಲ್ಹಾದ್‌ ಜೋಶಿ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಮಾನ ವ್ಯಕ್ತಪಡಿಸಿದರು.

ಜಾತಿ ಭೇದ ತೋರದ ನಾಯಕ

ಸಚಿವ ಪ್ರಲ್ಹಾದ್‌ ಜೋಶಿಯವರು ಯಾವತ್ತೂ ಜಾತಿ ಭೇದ ತೋರಿದವರಲ್ಲ. ಎಲ್ಲ ಸಮಾಜ, ವರ್ಗದವರನ್ನು ಸಮಾನವಾಗಿ ಕಂಡು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಿ ಮನ ಗೆದ್ದಿದ್ದಾರೆ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

ಗುರು-ಹಿರಿಯರ ಆಶೀರ್ವಾದವೇ ಶ್ರೀರಕ್ಷೆ

ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು.

ವಾಲ್ಮೀಕಿ ಸಮುದಾಯದ ಪ್ರಗತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ, ಶ್ರಮಿಸಿದೆ. ಮುಂದೆಯೂ ಸಮಾಜದ ಪರ ಇರಲಿದೆ ಎಂದು ಪ್ರಲ್ಹಾದ್‌ ಜೋಶಿ‌ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾದ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಣಿಕಂಠ ಶಾಗೋಟಿ, ಪುಂಡಲಿಕ ತಳವಾರ, ಮೋಹನ್ ಗುಡಿಸಲ್ಮನಿ, ಮಾರುತಿ ಚಾಕಲಬ್ಬಿ, ಲಕ್ಷ್ಮಣ್ ಮ್ಯಾಗಿನ್ಮನಿ, ಅಶೋಕ ಸೋಲಾರ್ಕೊಪ್ಪ, ಸಂತೋಷ ಟಿ, ದೇವೇಂದ್ರ, ಮಂಜು ಹುಡ್ಡೇದ ಹಾಗೂ ಬಿಜೆಪಿ ಪ್ರಮುಖರು ಮತ್ತು ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು

Exit mobile version