ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಮಾಜಿ ಐಎಎಸ್ ಅಧಿಕಾರಿ, ದಿವಂಗತ ಕೆ. ಶಿವರಾಮ್ ಪತ್ನಿ ವಾಣಿ (Vani Shivaram) ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ರೂಪ ಲಿಂಗೇಶ್, ಆನೇಕಲ್ ಹಾಗೂ ಕೋಲಾರ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಇದೇ ವೇಳೆ ಈಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ತೇಜಸ್ವಿನಿ ಗೌಡ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರನ್ನಾಗಿ ನೇಮಿಸಿರುವುದಾಗಿ ಡಿಕೆಶಿ ಘೋಷಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕೆ. ಶಿವರಾಮ್ ಒಬ್ಬ ಉತ್ತಮ ಐಎಎಸ್ ಅಧಿಕಾರಿಯಾಗಿದ್ದರು. ಬಿಜೆಪಿಯಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದರು. ಚಾಮರಾಜನಗರದಿಂದ ಒಮ್ಮೆ ನನಗೆ ಕರೆ ಮಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಮ್ಮೆ ಭೇಟಿ ಮಾಡಿದ್ದರು. ಆಗ ಆರೋಗ್ಯ ಚೆನ್ನಾಗಿತ್ತು. ದೇವರ ಲೀಲೆಯನ್ನು ನಾವು ಪ್ರಶ್ನೆ ಮಾಡುವಂತಿಲ್ಲ. ಈಗ ಅವರ ಪತ್ನಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಹಾರೈಸಿದರು.
ಶಿವರಾಮ್ ಗುರಿಯನ್ನು ನಾನು ಸಾಧಿಸುವೆ
ಕೆ. ಶಿವರಾಮ್ ಪತ್ನಿ ವಾಣಿ ಮಾತನಾಡಿ, ಕೆ. ಶಿವರಾಮ್ ಅವರು ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪಾಸ್ ಮಾಡಿದ್ದರು. ಅಧಿಕಾರಿಯಾಗಿ ಜನಪರ ಕೆಲಸ ಮಾಡಿದ್ದರು. ಬಡತನ, ಶೋಷಣೆಯನ್ನು ಹೋಗಲಾಡಿಸಬೇಕು ಎಂಬ ನಿಟ್ಟಿನಲ್ಲಿ ಅವರು ಐಎಎಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ, ಇನ್ನೂ ದೊಡ್ದ ಹಂತಕ್ಕೆ ಹೋಗಬೇಕು. ಜನಸೇವೆಯನ್ನು ಮಾಡಬೇಕು ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರು. ಅವರ ಕನಸು, ಗುರಿ ಹಾಗೆಯೇ ಉಳಿದು ಹೋಗಿದೆ. ಅದನ್ನು ಈಡೇರಿಸುವ ಹಂತದಲ್ಲಿದ್ದಾಗಲೇ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿ ಅವರ ಗುರಿ ಹಾಗೂ ಧ್ಯೇಯವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಬಿಜೆಪಿ ಮಾಡಿದ ಅನ್ಯಾಯಕ್ಕೆ ನ್ಯಾಯ ಜನ ಕೊಡಬೇಕು
ಕೆ. ಶಿವರಾಮ್ ಅರನ್ನು ಬಿಜೆಪಿಯವರು ದುಡಿಸಿಕೊಂಡರು, ಬಳಸಿಕೊಂಡರು. ದಲಿತ ಎಂದು ಯಾವ ಸ್ಥಾನಮಾನವನ್ನು ಕೊಡಲಿಲ್ಲ. ಅವರಿಗೆ ಸೂಕ್ತ ಗೌರವ ಕೊಡದೆ ಅವಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೆ ಅನ್ಯಾಯ ಆಗಬಾರದು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮನೆಗೆ ಕರೆಸಿ ಅವರ ಧರ್ಮ ಪತ್ನಿ ಮೂಲಕ ಧೈರ್ಯ ತುಂಬಿದರು. ಬಿಜೆಪಿ ಮಾಡಿದ ಅನ್ಯಾಯಕ್ಕೆ ನ್ಯಾಯ ಜನ ಕೊಡಬೇಕು. ನಾನು ಮುಂದೆ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ನೀವು ಶಿವರಾಮ್ ಸಾವಿಗೆ ನ್ಯಾಯ ಕೊಡಬೇಕು ಎಂದು ವಾಣಿ ಶಿವರಾಮ್ ಮನವಿ ಮಾಡಿದರು.
ಪಕ್ಷ ಸಂಘಟನೆ ಮಾಡಲು ಕರೆ
ಕಾಂಗ್ರೆಸ್ ಪಕ್ಷ ಈ ಸಮಾಜದವರನ್ನು ಗುರುತಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಒಪ್ಪದೆ ಇಂದು ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಹಳಬರು, ಹೊಸಬರು ಎಂಬ ತಾರತಮ್ಯ ಇಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನೀವೆಲ್ಲರೂ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರು. ನೀವುಗಳು ನಿಮ್ಮ ಬ್ಲಾಕ್ ಮಟ್ಟದಲ್ಲಿ ಹೆಚ್ಚಿನ ಜನರನ್ನು ಆನ್ ಲೈನ್ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ತಳಮಟ್ಟದಲ್ಲಿ ಸಂಘಟನೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬಬೇಕು. ಪಕ್ಷಕ್ಕೆ ಸೇರುವುದಷ್ಟೇ ಮುಖ್ಯವಲ್ಲ. ಪ್ರತಿ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಪಕ್ಷಕ್ಕೆ ಆಸ್ತಿಯಾಗಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾನು ಎರಡು ದಿನ ಕೇರಳ ಪ್ರವಾಸ ಮಾಡಿ ಬಂದಿದ್ದು, ಇದೇ ಏ.16 ರಂದು ಮತ್ತೆ ಕೇರಳ ಪ್ರವಾಸ ಮಾಡಲಿದ್ದೇನೆ. ನಂತರ ನಮ್ಮ ರಾಜ್ಯದ ಚುನಾವಣೆ ಮುಗಿದ ನಂತರ ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದೇನೆ. ಮುಖ್ಯಮಂತ್ರಿಗಳ ಜತೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಬೇಕು ಎಂದು ಪಕ್ಷ ತೀರ್ಮಾನಿಸಿದೆ ಎಂದು ಹೇಳಿದರು.
ಇಂದು ಬೆಳಗ್ಗೆ ಕೇರಳದಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ಕಳೆದ ಬಾರಿ ಯುಡಿಎಫ್ ಕೇರಳದಲ್ಲಿ 19 ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಮುಖ್ಯಮಂತ್ರಿಗಳು ಕೂಡ ಬಿಜೆಪಿಗೆ ಕೇರಳದಲ್ಲಿ ಒಂದು ಸ್ಥಾನ ಗೆಲ್ಲಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿಯವರು ಮರೆತಿದ್ದಾರೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಯಾವುದೇ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಬರ ಪರಿಹಾರ ವಿಳಂಬವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ನಾಲ್ಕೈದು ತಿಂಗಳ ಹಿಂದೆಯೇ ಬರ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಪ್ರಧಾನಮಂತ್ರಿ, ಗೃಹ ಸಚಿವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಮನವಿ ಮಾಡಿದ್ದರು. ಕೇಂದ್ರದಿಂದ ಬರ ಅಧ್ಯಯನ ತಂಡ ಕೂಡ ಬಂದಿತ್ತು, ಅದನ್ನು ಅವರು ಮರೆತಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ಇನ್ನು ಬರ ಪರಿಹಾರ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಬರ ಪರಿಹಾರ ವಿತರಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನಮ್ಮ ಪಕ್ಷದ ವತಿಯಿಂದ ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ನಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನ, ಪರಿಹಾರ ಬಾಕಿಯಿದೆ ಎಂದು ತಿಳಿಸಿದ್ದೇವೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ನೀರಿನ ಸಮಸ್ಯೆ ನಿಭಾಯಿಸಲಾಗುತ್ತಿದೆ.
ಕಾಂಗ್ರೆಸ್ ವಕ್ತಾರರಾಗಿ ತೇಜಸ್ವಿನಿ ಗೌಡ
ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರು ಕಾಂಗ್ರೆಸ್ ಮೂಲದವರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶಕ್ಕೆ ಒಳ್ಳೆಯದಾಗಲಿದೆ ಎಂದು ಪಕ್ಷಕ್ಕೆ ಬಂದಿದ್ದಾರೆ. ತೇಜಸ್ವಿನಿ ಗೌಡ ಅವರು ನಮ್ಮ ಸಂಸದರಾಗಿದ್ದರು. ಪಕ್ಷದ ಅಧ್ಯಕ್ಷನಾಗಿ ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಇಂದಿನಿಂದ ತೇಜಸ್ವಿನಿ ಗೌಡ ಅವರನ್ನು ಪಕ್ಷದ ಅಧಿಕೃತ ವಕ್ತಾರರಾಗಿದ್ದಾರೆ.