ನವದೆಹಲಿ: ಕರ್ನಾಟಕ ಸೇರಿ ದೇಶದ ವಿವಿಧ ಕಡೆ ಲೋಕಸಭಾ ಚುನಾವಣೆ (Lok Sabha Election 2024)ಯ ಮೂರನೇ ಹಂತದ ಮತದಾನ ಆರಂಭವಾಗಿದೆ. ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿನ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ವಿಶೇಷ ಎಂದರೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಲಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಬಿಜೆಪಿಗೆ ಈ ಹಂತ ಪ್ರಮುಖ ಎನಿಸಿಕೊಂಡಿದೆ. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮನ್ಸುಖ್ ಮಾಂಡವಿಯಾ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ (ವಿದಿಶಾ) ಮತ್ತು ದಿಗ್ವಿಜಯ್ ಸಿಂಗ್ (ರಾಜ್‌ಗಢ) ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಜತೆಗೆ ಪ್ರಮುಖ ಬಿಜೆಪಿ ನಾಯಕರಾದ ಪುರುಷೋತ್ತಮ್ ರೂಪಾಲಾ (ರಾಜ್‌ಕೋಟ್), ಪ್ರಹ್ಲಾದ್ ಜೋಶಿ (ಧಾರವಾಡ) ಮತ್ತು ಎಸ್.ಪಿ. ಸಿಂಗ್ ಬಘೇಲ್ (ಆಗ್ರಾ) ಅವರಿಗೂ ಈ ಹಂತ ನಿರ್ಣಾಯಕವಾಗಲಿದೆ.
#WATCH | Union Home Minister Amit Shah arrives at Nishan Higher Secondary School in Ahmedabad, Gujarat
— ANI (@ANI) May 7, 2024
Prime Minister Narendra Modi will also arrive here to cast his vote for #LokSabhaElections2024 pic.twitter.com/spoLB86e3c
ಗುಜರಾತ್‌ನಲ್ಲಿ ಒಟ್ಟು 26 ಕ್ಷೇತ್ರಗಳಲ್ಲಿ ಈ ಪೈಕಿ ಒಂದು ಕಡೆ ಈಗಾಗಲೇ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನು ಉಳಿದ 25, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಕರ್ನಾಟಕದ 28 ಸ್ಥಾನಗಳ ಪೈಕಿ 14, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ತಲಾ 4 ಮತ್ತು ಗೋವಾದ ಎಲ್ಲ 2, ಮಧ್ಯಪ್ರದೇಶದ 9 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಜತೆಗೆ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು (2 ಸ್ಥಾನಗಳು)ಗಳಲ್ಲಿಯೂ ಇಂದು ವೋಟಿಂಗ್ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ನಾಲ್ಕು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, ಎಡ ಪಕ್ಷ-ಕಾಂಗ್ರೆಸ್ ಒಕ್ಕೂಟ ಮತ್ತು ಟಿಎಂಸಿ ನಡುವೆ ಅಲ್ಪಸಂಖ್ಯಾತ ಮತಗಳ ವಿಭಜನೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಚಾರ ಫಲಿತಾಂಶವನ್ನು ನಿರ್ಣಯಿಸುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕುಟುಂಬ ಎಲ್ಲರ ಗಮನ ಸೆಳೆದಿದೆ. ಡಿಂಪಲ್ ಯಾದವ್ ಅವರು ತಮ್ಮ ಮಾವ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದ ಮೈನ್ಪುರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ ಯಾದವ್ ಅವರು ಗೆದ್ದಿದ್ದ ಫಿರೋಜಾಬಾದ್ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸಲಿದ್ದಾರೆ.
ಇದನ್ನೂ ಓದಿ: ತಮ್ಮ ಬಗ್ಗೆ ಟ್ರೋಲ್ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?
ಈ ಹಂತದಲ್ಲಿ 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೊದಲ ಎರಡು ಹಂತಗಳಲ್ಲಿ 189 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿತ್ತು. ಮುಂದಿನ ನಾಲ್ಕು ಹಂತಗಳು ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ನಡೆಯಲಿವೆ. ಜೂನ್ 4ರಂದು ಫಲಿತಾಂಶ ಘೋಷಣೆಯಾಗಲಿದೆ.