ಕೋಲಾರ: ಪ್ರಧಾನಿ ನರೇಂದ್ರ ಮೋದಿ ಅವರೇ ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ, ನೀವು ಜಾತಿ ಜನಗಣತಿ ಪರವಾಗಿ ಇದ್ದೀರಾ ಅಥವಾ ಜನಗಣತಿ ವಿರುದ್ಧವಾಗಿ ಇದ್ದೀರಾ? ನಾನು ಜಾತಿ ಗಣತಿ ಬಗ್ಗೆ ಪ್ರಸ್ತಾಪ ಮಾಡಿದಾಗಲೆಲ್ಲ ನೀವು ಮೌನ ವಹಿಸುತ್ತೀರಿ. ಹೀಗಾಗಿ ನೀವು ಯಾವುದರ ಪರವಾಗಿ ಇದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ಪ್ರಚಾರ ಸಮಾವೇಶದಲ್ಲಿ ಪ್ರಶ್ನೆ ಮಾಡಿದರು.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೊಕ್ಕಂಡಹಳ್ಳಿ ಗೇಟ್ ಬಳಿ ಕಾಂಗ್ರೆಸ್ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಜಾತಿ ಗಣತಿಯನ್ನು ಮಾಡದೆ ನ್ಯಾಯ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಉದ್ಯೋಗ ವ್ಯವಸ್ಥೆಯನ್ನು ಹಾಳು ಮಾಡಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ವ್ಯವಸ್ಥೆಯನ್ನೇ ಹಾಳು ಮಾಡಿಟ್ಟಿದ್ದಾರೆ. ನಾನು ಪ್ರಮುಖ 22 ಉದ್ಯಮಿಗಳ ಬಳಿ ಇರುವ ಉನ್ನತ ಹುದ್ದೆಗಳನ್ನು ಪರಿಶೀಲನೆ ಮಾಡಿದ್ದೇನೆ. ಅಲ್ಲಿ ದಲಿತ, ಹಿಂದುಳಿತ, ಅಲ್ಪಸಂಖ್ಯಾತ, ಬಡವರಿಗೆ ಸ್ಥಾನವೇ ಇಲ್ಲ. ಕಂಪನಿಗಳ ಹಿರಿಯ ಉದ್ಯೋಗಗಳಲ್ಲಿ ಶೇಕಡಾ 90ರಷ್ಟು ಕಡೆಗಳಲ್ಲಿ ಈ ಸಮುದಾಯಗಳ ಪ್ರತಿನಿಧಿಗಳು ಇಲ್ಲ. ಇನ್ನು ದೇಶದ ಸರ್ಕಾರಿ ಹುದ್ದೆಗಳನ್ನು ಗಮನಿಸಿದ್ದೇನೆ. ಹಿಂದುಳಿದ ಶೇಕಡಾ 50ರಷ್ಟು ಮಂದಿಗೆ ಸರ್ಕಾರಿ ಹುದ್ದೆ ಸಿಕ್ಕಿದೆ. ಆದರೆ, ಉನ್ನತ ಹುದ್ದೆಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಅವರಿಗೂ ಕೆಲಸಕ್ಕೆ ಬಾರದ ಸ್ಥಾನಗಳನ್ನು ನೀಡಲಾಗಿದೆ. ಇವೆಲ್ಲಕಿಂತ ಅವಮಾನಕರ ವಿಷಯವೆಂದರೆ ದೇಶದ ಬಜೆಟ್‌ನಲ್ಲಿ ದಲಿತ, ಪರಿಶಿಷ್ಟರು, ಹಿಂದುಳಿದವರ ಪಾಲು ಕೇವಲ 6 ಪರ್ಸೆಂಟ್ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕದ ಸರ್ಕಾರ ಬಗ್ಗೆ ಹೆಮ್ಮೆ ಪಡುತ್ತೇನೆ
ಈ ದೇಶದ ಶೇಕಡಾ 90ರಷ್ಟು ಜನರಿಗೆ ಅವರ ಹಕ್ಕುಗಳ ಬಗ್ಗೆ ಮಾತನಾಡಲೂ ಸಾಧ್ಯವಿಲ್ಲ. ಇದಕ್ಕೆಲ್ಲ ಉತ್ತರ ಸಿಂಪಲ್ ಆಗಿದೆ. ಅವರೆಲ್ಲ ಕಾರ್ಮಿಕ ವರ್ಗದಲ್ಲಿ ದುಡಿಯುತ್ತಾರೆ. ರೈತರಿದ್ದಾರೆ, ಹೊರಗುತ್ತಿಗೆಯಲ್ಲಿ ದುಡಿಯುತ್ತಾರೆ. ಈ ರೀತಿಯ ದೇಶ ನಮಗೆ ನಿಮಗೆ ಬೇಕಿದೆಯಾ? ನಿಮ್ಮ ಧ್ವನಿ ಇಲ್ಲ, ನಿಮಗೆ ಪಾಲಿಲ್ಲ. ರೈತರ ಸಾಲ ಮನ್ನಾ ಮಾಡಿದರೆ ಅವರನ್ನು ಹಾಳು ಮಾಡುತ್ತೀರಾ ಎಂದು ಹೇಳುತ್ತಾರೆ. ಆದರೆ, ಸಾಹುಕಾರರ ಸಾಲಾ ಮನ್ನಾ ಮಾಡಿದ್ದಾರಲ್ಲ? ಉದ್ಯೋಗ ಸೃಷ್ಟಿ ಮಾಡುವವರಿಗೆ ನಮ್ಮ ಬೆಂಬಲ ಖಂಡಿತ ಇದೆ. ಅದಕ್ಕಾಗಿ ನಾನು ಕರ್ನಾಟಕದ ಸರ್ಕಾರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಾಧ್ಯಮಗಳ ವಿರುದ್ಧ ರಾಹುಲ್ ಗಂಭೀರ ಆರೋಪ
ಮಾಧ್ಯಮಗಳು ಕೇಂದ್ರದ ಲೋಪಗಳ ಬಗ್ಗೆ ಹೇಳಲ್ಲ. ನಿರುದ್ಯೋಗ, ಜನರ ಸಮಸ್ಯೆ ಬಗ್ಗೆ ಮಾಧ್ಯಮಗಳು ಮಾತನಾಡಲ್ಲ. ಈ ತರಹದ ಮಾಧ್ಯಮಗಳ ಹಾಗೂ ಸುದ್ದಿ ನಿರೂಪಕರ ಪಟ್ಟಿಯೇ ನನ್ನ ಬಳಿ ಇದೆ. ಈ ಮಾಧ್ಯಮಗಳು, ನಿರೂಪಕರು ಕೇಂದ್ರದ ಪರ ಜನಾಭಿಪ್ರಾಯ ರೂಪಿಸುತ್ತಿದ್ದಾರೆ. ಇವರಲ್ಲಿ ಯಾರೂ ಅಹಿಂದ ವರ್ಗದವರು ಇಲ್ಲ. ಹಾಗಾಗಿ ಈ ಮಾಧ್ಯಮಗಳು ದೇಶದ ನಿಜವಾದ ಸಮಸ್ಯೆ ಬಗ್ಗೆ ಮಾತನಾಡಲ್ಲ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು.
ದೊಡ್ಡ ದೊಡ್ಡ ಉದ್ಯಮಿಗಳ ಕಂಪನಿಗಳ ಉನ್ನತ ಹುದ್ದೆಯಲ್ಲಿ ಯಾರೂ ಹಿಂದುಳಿದ ವರ್ಗದವರು ಇಲ್ಲ. ಶೇಕಡಾ 90ರಷ್ಟು ಜನರು ಈ ಕಂಪನಿಗಳ ಭಾಗವೇ ಆಗಿಲ್ಲ. ಶೇಕಡಾ 50ರಷ್ಟು ಒಬಿಸಿಯವರು ದೇಶದಲ್ಲಿದ್ದಾರೆ. 90 ಅಧಿಕಾರಿಗಳ ಪೈಕಿ ಕೇವಲ 3 ಜನ ಒಬಿಸಿಯವರು ಇದ್ದಾರೆ. ದಲಿತರು, ಆದಿವಾಸಿಗಳಿಗೆ ಅಧಿಕಾರದಲ್ಲಿ ಅವಕಾಶವೇ ಇಲ್ಲದಂತಾಗಿದೆ. ದೇಶವನ್ನು ಕೇವಲ ಒಂದು ವರ್ಗದ ಜನ ಮುನ್ನಡೆಸುತ್ತಿದ್ದಾರೆ. ಶೇ. 95 ರಷ್ಟು ಜನರು ದನಿ ಇಲ್ಲದೆ ಬದುಕುತ್ತಲಿದ್ದಾರೆ. ಇಂಥ ಗಂಭೀರ ವಿಚಾರಗಳನ್ನು ಮಾಧ್ಯಮಗಳು ಎಂದೂ ನಿಮಗೆ ತೋರಿಸಲ್ಲ. ಕೇವಲ ನರೇಂದ್ರ ಮೋದಿ ಮುಖವನ್ನು ಮಾಧ್ಯಮಗಳು ತೋರಿಸುತ್ತವೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಬಡ ಮಹಿಳೆಯರಿಗೆ 1 ಲಕ್ಷ ರೂಪಾಯಿ ಕೊಡುತ್ತೇವೆ
ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿಯನ್ನು ಜಾರಿಗೆ ತಂದಿದೆ. ಸಹೋದರಿಯರಿಗೆ ಸಹಾಯ ಧನ ನೀಡುತ್ತಿದೆ, ಉಚಿತ ವಿದ್ಯುತ್ ನೀಡುತ್ತಿದೆ, ಅಕ್ಕಿ ನೀಡುವ ಕಾರ್ಯಕ್ರಮ ನನಗೆ ಖುಷಿ ಕೊಟ್ಟಿದೆ. ಹಸಿವಿನಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಉಚಿತ ಪ್ರಯಾಣ, ನಿರುದ್ಯೋಗ ಭತ್ಯೆ ನೀರುತ್ತಿರುವುದರಿಂದ ಸಮಾಜಕ್ಕೆ ನ್ಯಾಯ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಈ ಭಾರಿ ನಮ್ಮ ಸರ್ಕಾರ ಬಂದರೆ ಐದು ಗ್ಯಾರಂಟಿಗಳನ್ನು ನೀಡುತ್ತೇವೆ. ಇವತ್ತು ದೇಶದಲ್ಲಿರುವ ತಾರತಮ್ಯವನ್ನು ಬಿಡಬಾರದು. ನಮ್ಮ ತಂದೆ – ತಾಯಿಗಳಿಗೆ ಮೋಸ ಮಾಡುವಂತಾಗಬಾರದು. ಪ್ರತಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆ. ರೈತರ ಸಾಲ ಮನ್ನಾ ಮಾಡುತ್ತೇವೆ. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಯಜಮಾನಿಯರಿಗೆ ವರ್ಷಕ್ಕೆ 24,000 ಕೊಡುತ್ತಿದೆ. ಮೋದಿಯವರೇ ಕೇಳಿಸಿಕೊಳ್ಳಿ, ನೀವು ಅದಾನಿ ಅಂಬಾನಿಗೆ ಕೋಟಿ ಕೋಟಿ ಕೊಡಿ. ನಾವು ಪ್ರತಿ ವರ್ಷ ಈ ದೇಶದ ಬಡ ಮಹಿಳೆಯರಿಗೆ 1 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಇಂದಿರಾ ಗಾಂಧಿ ಹೇಳಿಕೊಟ್ಟ ರಾಜಕೀಯ ಪಾಠ
ಇಲ್ಲಿನ ಜನ ಮೊದಲು ಕೋಲಾರದಲ್ಲಿ ಚಿನ್ನ ತೆಗೆದು ಪರಿಷ್ಕರಣೆ ಮಾಡುತ್ತಿದ್ದರು. ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ಆಡಿದ ಮಾತುಗಳು ಆಗ ಅಷ್ಟಾಗಿ ಅರ್ಥವಾಗಿರಲಿಲ್ಲ. ಆದರೆ, ಅವರು ಅಂದೇ ನನ್ನನ್ನು ರಾಜಕಾರಣಕ್ಕೆ ತಯಾರು ಮಾಡುವ ರೀತಿಯಲ್ಲಿ ಹೇಳುತ್ತಿದ್ದರು ಎಂದು ಈಗ ಅರ್ಥವಾಗಿದೆ. ರಾಜಕೀಯ ಬಹಳ ಕಷ್ಟ ಎಂದು ಹಲವರು ತಿಳಿದುಕೊಂಡಿದ್ದಾರೆ. ಸಾಕಷ್ಟು ಲೆಕ್ಕಾಚಾರಗಳನ್ನು ಹೆಣೆಯಬೇಕು ಎಂದುಕೊಂಡಿದ್ದಾರೆ. ಆದರೆ, ಇಂದಿರಾ ಗಾಂಧಿ ಈ ರೀತಿಯ ರಾಜಕೀಯ ಮಾಡಲಿಲ್ಲ. ಅವರು ಹೇಳಿದ ಒಂದು ಮಾತು ರಾಜಕಾರಣ ಏನೆಂಬುದನ್ನು ಅರ್ಥೈಸುತ್ತದೆ. ಭಯ ಇಲ್ಲದೆ ಸಮಾಜದ ಹುಳುಕು, ತಾರತಮ್ಯ, ಅನ್ಯಾಯಗಳನ್ನು ತಿಳಿಸಬೇಕು. ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆ ದಾಳಿ, ದೌರ್ಜನ್ಯ ಆಗಬಹುದು. ಎಷ್ಟು ಹೀಯಾಳಿಕೆ, ದಾಳಿ, ಹಲ್ಲೆಯಾದರೂ ಹೆಜ್ಜೆ ಹಿಂದಕ್ಕಿಡಬಾರದು ಎಂದು ರಾಹುಲ್ ಗಾಂಧಿ ಹೇಳಿದರು.
LIVE : ಬೃಹತ್ ಸಾರ್ವಜನಿಕ ಸಭೆ, ಚೊಕ್ಕಂಡಹಳ್ಳಿ ಗೇಟ್, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ https://t.co/Z2YwYMZAMF
— Karnataka Congress (@INCKarnataka) April 17, 2024
ಅದಾನಿ ಕೇಳಿದ ಯಾವುದೇ ಜಾಗವು ತಕ್ಷಣ ಸಿಕ್ಕಿಬಿಡುತ್ತದೆ
ಇದು ರಾಜಕೀಯ ಹಾಗೂ ನಮ್ಮ ಬದುಕಿಗೂ ಅನ್ವಯ. ಇವತ್ತು ಭಾರತದಲ್ಲಿ ಏನಾಗುತ್ತಿದೆ? ಕೇಂದ್ರ ಸರ್ಕಾರದಿಂದ ಅನ್ಯಾಯ, ತಾರತಮ್ಯ ಹೆಚ್ಚಾಗಿದೆ. ದೇಶದ 25 ಬಂಡವಾಳಶಾಹಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ. ಇದು ಪ್ರಜೆಗಳಿಗೆ ಅನುಮಾನ ಮೂಡಿಸುವ ವಿಚಾರವಾಗಿದೆ. ಈ ಹಣದಿಂದ ನರೇಗಾ ಯೋಜನೆಯಡಿ 25 ವರ್ಷ ಶ್ರಮಿಕರಿಗೆ ಕೂಲಿ ಕೊಡಬಹುದಾಗಿತ್ತು. ರೈತರ ಸಾಲಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವಾಗಿದೆ. ಉದ್ಯಮಿಗಳ ಸಾಲಮನ್ನಾ ಮೂಲಕ ದೇಶದ ರೈತರಿಗೆ ಅಪಮಾನ ಮಾಡಲಾಗಿದೆ. ರೈತರು ಸಾಲಮನ್ನಾ ಕೇಳಿದಾಗ ಕೇಂದ್ರ ಸಾಲ ಮನ್ನಾ ಮಾಡಲಿಲ್ಲ. ಆ 25 ಉದ್ಯಮಿಗಳ ಒಟ್ಟು ಆಸ್ತಿ ದೇಶದ 72 ಕೋಟಿಗಳ ಜನರ ಆಸ್ತಿಗೆ ಸಮವಾಗಿದೆ. ಆ ಉದ್ಯಮಿಗಳ ಬಳಿ ಅಸಂಖ್ಯ ಹಣ ಇದೆ. ಅಪಾರ ಸೌಕರ್ಯ, ಸಂಪನ್ಮೂಲ ಇದೆ. ಅಂಥವರ ಸಾಲಮನ್ನಾ ಮಾಡುವ ಅಗತ್ಯ ಇತ್ತಾ? ಗೌತಮ್ ಅದಾನಿ ಕೇಳಿದ ಯಾವುದೇ ಜಾಗವು ಅವರಿಗೆ ತಕ್ಷಣ ಸಿಕ್ಕಿಬಿಡುತ್ತದೆ. ಕೇಂದ್ರ ಸರ್ಕಾರವು ರೈತರಿಂದ ಕಿತ್ತು ಕೊಡುತ್ತದೆ. ಮುಂಬೈ ಏರ್‌ಪೋರ್ಟ್ ಕೇಳಿದರೂ ಪ್ರಧಾನಿ ನರೇಂದ್ರ ಮೋದಿ ಕೊಡಬಲ್ಲರು. ಐಟಿ, ಇಡಿ ಮೂಲಕ ಬೆದರಿಸಿ ಆ ಏರ್‌ಪೋರ್ಟ್ ಕೊಡಿಸುತ್ತಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದರು.