Site icon Vistara News

Lok Sabha Election 2024: ಡಿಕೆಶಿ – ಎಚ್‌ಡಿಕೆ ವೈಯಕ್ತಿಕ ಕಾದಾಟಕ್ಕೆ ಇದೇ ಕಾರಣ! ಏನಿದು ಇನ್‌ಸೈಡ್‌ ಕಹಾನಿ?

Lok Sabha Election 2024 What is the reason for DK Shivakumar and HD Kumaraswamy personal fight

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಾಕ್ಸಮರಗಳು ತಾರಕಕ್ಕೇರಿವೆ. ಪರಸ್ಪರ ಕಿತ್ತಾಟಗಳು ಜೋರಾಗಿಯೇ ನಡೆಯುತ್ತಿವೆ. ಟೀಕೆಗಳು ವೈಯಕ್ತಿಕ ಮಟ್ಟಕ್ಕೆ ಇಳಿಯುತ್ತಿವೆ. ಈಗ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ನಡುವೆ ಭಾರಿ ಫೈಟ್‌ ನಡೆಯುತ್ತಿದೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಕ್ಕಲಿಗ ನಾಯಕತ್ವ ಪಟ್ಟಕ್ಕಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಈ ಅಲ್ಲದೆ, ಸಮುದಾಯದ ಮತಗಳನ್ನು ಹೆಚ್ಚಿಗೆ ಪಡೆಯುವ ಮೂಲಕ ತಮ್ಮ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಪ್ಲ್ಯಾನ್‌ ಉಭಯ ನಾಯಕರದ್ದಾಗಿದೆ.

ಈ ಎರಡು ಕಾರಣಕ್ಕಾಗಿ ಹಾಲಿ ಡಿಸಿಎಂ ಮತ್ತು ಮಾಜಿ ಸಿಎಂ ಮಧ್ಯೆ ಮಾತಿನ ಸಮರ ಏರ್ಪಟ್ಟಿದೆ. ಹೀಗಾಗಿ ಲೋಕಸಭಾ ಅಖಾಡದಲ್ಲಿ ಒಕ್ಕಲಿಗ ಸಮುದಾಯದ ಮತ ಸೆಳೆಯಲು ನೇರಾನೇರ ಕುಸ್ತಿಗೆ ಬಿದ್ದಿದ್ದಾರೆ.

ಒಕ್ಕಲಿಗ ಸಮುದಾಯದ ನಾಯಕತ್ವ ಪಟ್ಟವನ್ನು ಸಂಪೂರ್ಣವಾಗಿ ಪಡೆಯಲು ಇದು ಸರಿಯಾದ ಸಮಯವಾಗಿದೆ ಎಂಬ ಲೆಕ್ಕಾಚಾರವನ್ನು ಡಿಸಿಎಂ ಡಿ.ಕೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಕೈ ಚೆಲ್ಲಿದರೆ ಒಕ್ಕಲಿಗ ಸಮುದಾಯ ನಾಯಕತ್ವ ಪಟ್ಟವು ಸಹ ತಮ್ಮಿಂದ ಕೈ ತಪ್ಪಲಿದೆ ಎಂಬ ಆತಂಕ ಎಚ್.ಡಿ. ಕುಮಾರಸ್ವಾಮಿ ಅವರದ್ದಾಗಿದೆ. ಹೀಗಾಗಿ ಅದನ್ನು ಉಳಿಸಿಕೊಳ್ಳಬೇಕು ಎಂದು ಎಚ್‌ಡಿಕೆ ನೇರವಾಗಿ ಯುದ್ಧಕ್ಕೆ ನಿಂತಿದ್ದಾರೆ.

ಡಿ.ಕೆ. ಶಿವಕುಮಾರ್‌ ವಾದವೇನು?

ಜೆಡಿಎಸ್‌ಗೆ ಅಸ್ತಿತ್ವವಿಲ್ಲ. ಅಲ್ಲಿದ್ದು ಏನು ಮಾಡುತ್ತೀರಾ? ದೇವೇಗೌಡರ ಕುಟುಂಬದವರು ಮಾತ್ರ ಬೆಳೆದರು. ಒಳಿದ ಒಕ್ಕಲಿಗರನ್ನು ಬೆಳೆಯಲು ಬಿಟ್ಟಿಲ್ಲ. ಜೆಡಿಎಸ್‌ ಈಗ ಬಿಜೆಪಿ ಜತೆ ಹೋಗಿದೆ. ಹೀಗಾಗಿ ಒಕ್ಕಲಿಗರಿಗಾಗಿ ನಾನು ಇದ್ದೇನೆ, ಬನ್ನಿ ಎಂಬ ಸಂದೇಶವನ್ನು ಡಿ.ಕೆ. ಶಿವಕುಮಾರ್‌ ಅವರು ಒಳಗೊಳಗೇ ರವಾನೆ ಮಾಡುತ್ತಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ವಾದವೇನು?

ಡಿ.ಕೆ. ಶಿವಕುಮಾರ್‌ ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಕೆಂಡವಾಗಿರುವ ಎಚ್.ಡಿ. ಕುಮಾರಸ್ವಾಮಿ, ಒಕ್ಕಲಿಗರಿಗೆ ಸಿಎಂ ಆಗುವ ಅವಕಾಶವಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿಕೊಂಡರು. ಆದರೆ, ಸಮುದಾಯದವರು ಪೆನ್ನು, ಪೇಪರ್ ಕೊಟ್ಟಿದ್ದರೂ ಯಾವುದೇ ಲಾಭವಿಲ್ಲ ಎಂದು ಸಂದೇಶ ರವಾನೆ ‌ಮಾಡುತ್ತಿದ್ದಾರೆ.

ಇದನ್ನೂ ಓದಿ: Lok Sabha Election 2024: ಏಪ್ರಿಲ್‌ 26ರಂದು ಬೆಂಗಳೂರಲ್ಲಿ ಐಟಿ ಕಂಪನಿಗಳಿಗೆ ಕಡ್ಡಾಯ ರಜೆ; ತುಷಾರ್ ಗಿರಿನಾಥ್ ಆದೇಶ

ವಿಧಾನಸಭೆಯಲ್ಲಿ ಸಕ್ಸಸ್‌ ಆಗಿದ್ದ ಡಿಕೆಶಿ

ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತ ಸೆಳೆಯಲು ಡಿ.ಕೆ. ಶಿವಕುಮಾರ್‌ ಸಕ್ಸಸ್ ಆಗಿದ್ದರು. ನಾನು ಸಿಎಂ ಆಗಲು ಅವಕಾಶವಿದೆ ಎಂದು ಒಕ್ಕಲಿಗರ ಮತ ಬೇಟೆ ಮಾಡಿದ್ದರು. ಇದೀಗ ಲೋಕಸಭೆ ಚುನಾವಣೆಯಲ್ಲೂ ಅದೇ ಅಸ್ತ್ರ ಪ್ರಯೋಗ ಮಾಡಿದ್ದಾರೆ. ದೆಹಲಿಯಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗಿದೆ. ಒಕ್ಕಲಿಗರು ಬಲ ತುಂಬಿದರೆ ಲೋಕಸಭೆ ಬಳಿಕ ಸಿಎಂ ಆಗುವ ಅವಕಾಶವಿದೆ ಎಂಬ ಸಂದೇಶವನ್ನು ಡಿ.ಕೆ. ಶಿವಕುಮಾರ್‌ ನೀಡುತ್ತಿದ್ದಾರೆ.

ಮತ್ತೊಂದೆಡೆ ಒಕ್ಕಲಿಗರ ಮತ ಸೆಳೆಯಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಯತ್ನ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಕೈ ಕೊಟ್ಟಿದ್ದ ಸಮುದಾಯದ‌ ಮತಗಳು ಲೋಕಸಭೆಯಲ್ಲಿ ಪಡೆಯಲೇಬೇಕು ಎಂದು ಹಠ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

Exit mobile version