| ಚೈತನ್ಯ ಹೆಗಡೆ, ಬೆಂಗಳೂರು
ಜಾತಿ ಐಡೆಂಟಿಟಿ, ಹಿಂದುತ್ವದ ಐಡೆಂಟಿಟಿ, ಮುಸ್ಲಿಂ ಐಡೆಂಟಿಟಿ…
ಭಾರತದಲ್ಲಿ ಯಾವುದೇ ಚುನಾವಣೆಗಳ ಸಂದರ್ಭದಲ್ಲಿ (Lok Sabha Election 2024) ಚಿಂತನಕ್ಕೊಳಪಡುವ, ಚರ್ಚೆಯಾಗುವ ಐಡೆಂಟಿಟಿಗಳ ಪೈಕಿ ಇವು ಇದ್ದದ್ದೇ. ಇದರ ಸುತ್ತಲೇ ಪಕ್ಷಗಳು ಸಹ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಮೆಸೇಜಿಂಗ್‌ವರೆಗೆ ಅನೇಕ ಕಾರ್ಯತಂತ್ರಗಳನ್ನು ಹೆಣೆಯುತ್ತವೆ. ಈಗ ಲೋಕಸಭೆ ಸಂದರ್ಭದಲ್ಲೂ ಇವೆಲ್ಲ ಚರ್ಚೆಯಾಗುವ ಸಂಗತಿಗಳೇ.
ಜಾತಿಯ ಕಾರ್ಡ್ ಇವತ್ತಿಗೂ ಪ್ರಬಲವೇ. ಆದರೆ ಇದು ತುಂಬ ಕಲಸಿಹೋಗಿದೆ. ಕೇಂದ್ರದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುವವರೆಗೂ ಮುಸ್ಲಿಂ ಐಡೆಂಟಿಟಿಯನ್ನು ದೊಡ್ಡಮಟ್ಟದಲ್ಲಿ ಖುಷಿಪಡಿಸಿಕೊಂಡು ಸೆಳೆದುಕೊಳ್ಳುತ್ತ, ಮೇಲ್ವರ್ಗದವರು ನಿಮ್ಮ ಮೇಲೆ ಅಪಚಾರ ಮಾಡಿದ್ದಾರೆಂಬ ಕಥಾನಕದಲ್ಲಿ ಹಿಂದುಗಳಲ್ಲಿನ ದಲಿತ ಮತ್ತು ಒಬಿಸಿ ಜಾತಿಗಳನ್ನು ಜೋಡಿಸಿಕೊಂಡು ಗೆಲ್ಲುವ ಸಮೀಕರಣವೊಂದಿತ್ತು. ಕಾಂಗ್ರೆಸ್ ಹಾಗೂ ಜಾತಿ ಆಧರಿತ, ಕುಟುಂಬಾಧರಿತ ಪಕ್ಷಗಳು ತಮ್ಮ ಸಾಮರ್ಥ್ಯಾನುಸಾರ ಈ ಸಮೀಕರಣದಲ್ಲಿ ಯಶ ಕಂಡು, ನಂತರ ‘ಕೋಮುವಾದಿ’ ಬಿಜೆಪಿಯನ್ನು ದೂರವಿಡಲು ಒಂದುಗೂಡುತ್ತಿದ್ದದ್ದು ಇದರ ಒಟ್ಟಾರೆ ತಿರುಳು.
ಎರಡು ಬಗೆಯಲ್ಲಿ ಇವತ್ತಿನ ಬಿಜೆಪಿ ಆ ಕಥಾನಕವನ್ನು ದಶಕಗಳ ಹಿಂದೆ ಧ್ವಂಸ ಮಾಡಿತು. ಹಿಂದುತ್ವದ ದೊಡ್ಡ ಐಡೆಂಟಿಟಿಯಲ್ಲಿ ಕೆಲವಷ್ಟಾದರೂ ಜಾತಿಯ ಐಡೆಂಟಿಟಿಗಳು ಕೊನೆಪಕ್ಷ ಚುನಾವಣೆ ಅವಧಿಯಲ್ಲಿ ಕರಗಿಹೋಗುವಂತೆ ವ್ಯಾಖ್ಯಾನ ಕಟ್ಟಿದ್ದೊಂದೆಡೆ. ಅಧಿಕಾರಕ್ಕೆ ಬಂದ ನಂತರ ಆವಾಸ್, ಶೌಚಾಲಯ, ಉಜ್ವಲಾ, ಮುದ್ರಾ ಇತ್ಯಾದಿಗಳಲ್ಲಿ ಎಲ್ಲ ಜಾತಿಗಳಲ್ಲಿ ಫಲಾನುಭವಿಗಳ ವರ್ಗವನ್ನು ಸೃಷ್ಟಿಸಿ ಹಾಗೆ ರೂಪುಗೊಂಡ ಫಲಾನುಭವಿಗಳ ಐಡೆಂಟಿಟಿಯಲ್ಲಿ ಜಾತಿಯನ್ನು ತುಸು ಮರೆಯುವಂತೆ ಮಾಡಿ ಆ ಮಾದರಿ ಗಟ್ಟಿಗೊಳಿಸಲಾಯಿತು. ಹಲವು ಒಬಿಸಿ ಮತ್ತು ದಲಿತರನ್ನು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಪ್ರಮುಖ ಸ್ಥಾನಗಳಿಗೆ ನೇಮಿಸುವವರೆಗೆ ಕಾಳಜಿ ವಹಿಸಿದ ಬಿಜೆಪಿಯನ್ನೀಗ ಮೊದಲಿನ ರೀತಿಯಲ್ಲಿ ಬ್ರಾಹ್ಮಣ-ಬನಿಯಾಗಳ ಪಾರ್ಟಿ ಎಂದರೆ ಆ ಟೀಕೆ ಕೇಳುವವರ ಪೈಕಿ ಯಾರ ಎದೆಗೂ ನಾಟುವುದಿಲ್ಲ. ಹಾಗೆಂದೇ, ಈಗೊಂದು ನಾಲ್ಕು ತಿಂಗಳ ಹಿಂದೆ ಈ ಬಾರಿ ಲೋಕಸಭೆ ಚುನಾವಣೆಯನ್ನು ಜಾತಿ ಗಣತಿ ಎಂಬ ಅಸ್ತ್ರದಿಂದಲೇ ಪ್ರಮುಖವಾಗಿ ಎದುರಿಸುವ ರೀತಿಯಲ್ಲಿ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಮಾತಾಡುತ್ತಿದ್ದವು. ಆದರೆ, ಈ ಜಾತಿ ಲೆಕ್ಕಾಚಾರ ಹಾಕುವುದರಲ್ಲಿ ಇವತ್ತಿನ ಬಿಜೆಪಿ ತನ್ನಂತೆಯೇ ಪಳಗಿದೆ ಎಂಬುದು ಅರಿವಿಗೆ ತಂದುಕೊಂಡವರಂತೆ ಆ ಧ್ವನಿಯ ಅಬ್ಬರವನ್ನು ಕಾಂಗ್ರೆಸ್ ತಗ್ಗಿಸಿತು. ಜಾತಿ ಗಣತಿಯ ವರದಿಯೇ ಬಿಜೆಪಿಯನ್ನು ಎದುರಿಸಲಿಕ್ಕಿರುವ ಟ್ರಂಪ್ ಕಾರ್ಡ್ ಎಂಬಂತೆ ಮಾತನಾಡಿದ್ದ ನಿತೀಶ ಕುಮಾರ, ಅದೇನೂ ತಾನಂದುಕೊಂಡ ಪರಿಣಾಮ ಬೀರಿಲ್ಲ ಎಂದುಕೊಂಡೋ ಏನೋ, ಎನ್‌ಡಿಎಗೆ ಬಂದಿದ್ದಾಯ್ತು.
ಜಾತಿ ಕಾರ್ಡ್ ನಡೆಯುವುದಿಲ್ಲವೆ?
2024ರ ಲೋಕಸಭೆ ಚುನಾವಣೆಯಲ್ಲಿ ಜಾತಿ ಕಾರ್ಡ್ ನಡೆಯುವುದಿಲ್ಲ ಎಂದೇನೂ ಅಲ್ಲ. ಆದರೆ ಅದೊಂದೇ ಇಡಿಇಡಿಯಾಗಿ ಯಾರ ಪರವೋ ವಿರುದ್ಧವೋ ಅಲೆ ಸೃಷ್ಟಿಸುವ ಮಟ್ಟದಲ್ಲಿಲ್ಲ. ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಎಲ್ಲ ಜಾತಿಗಳಲ್ಲಿ ಕಾಣಬಹುದಾದ ಫಲಾನುಭವಿಗಳು ಇವೆಲ್ಲದರ ಮೂಲಕ ಬಿಜೆಪಿಯೂ ಜಾತಿ ಐಡೆಂಟಿಟಿ ಪ್ರಜ್ವಲಿಸದಂತೆ ಹಿಂದುತ್ವದ ಧ್ರುವೀಕರಣ ಮಾಡಬಲ್ಲದು. ಇನ್ನು ಕೆಲವು ಸ್ಥಾನಗಳಲ್ಲಿ ಜಾತಿಯೇ ನಿರ್ಣಾಯಕ ಎಂಬಂತಿರುವಲ್ಲಿ ಅದು ಆ ಸ್ಥಳೀಯ ವ್ಯಾಪ್ತಿಗೆ ಸೀಮಿತವಾದ ಜಾತಿ ರಾಜಕಾರಣವನ್ನು ತಾನೂ ಆಡಬಲ್ಲದು. ಏಕೆಂದರೆ ಬಿಜೆಪಿಯ ಕೇಡರಿನಲ್ಲಿ ಈಗ ಎಲ್ಲ ವರ್ಗದವರಿದ್ದಾರೆ.
ಈ ನಡುವೆ ತಥಾಕಥಿತ ಸೆಕ್ಯುಲರ್ ಪಾಳೆಯದ ರಾಜಕೀಯ ಮಂತ್ರವನ್ನೇ ರಿವರ್ಸ್ ಎಂಜಿನಿಯರಿಂಗ್ ಮಾಡಿದ ಆಟದ ಝಲಕನ್ನೂ ನರೇಂದ್ರ ಮೋದಿ ಒಂದಿಷ್ಟು ದಿನ ತೋರಿದರು. ಹೇಗೆ ಕಾಂಗ್ರೆಸ್-ಎಸ್ಪಿ-ಆರ್‌ಜೆಡಿ ಇತ್ಯಾದಿ ಪಕ್ಷಗಳು ಹಿಂದುಗಳ ಒಂದಿಷ್ಟು ಜಾತಿಗಳನ್ನಷ್ಟೇ ಪ್ರತ್ಯೇಕಿಸಿ ಮುಸ್ಲಿಮರ ಜತೆ ಜೋಡಿಸಿಕೊಂಡು ಚುನಾವಣಾ ರಾಜಕಾರಣದ ಆಟವಾಡಿದವೋ, ಹಾಗೆಯೇ ಒಂದಿಷ್ಟು ದಿನ ನರೇಂದ್ರ ಮೋದಿ ಹೋದಲ್ಲಿ-ಬಂದಲ್ಲಿ ಪಸ್ಮಂದಾ ಮುಸ್ಲಿಂಮರ ಬಗ್ಗೆ ಕಕ್ಕುಲಾತಿಯಿಂದ ಮಾತನಾಡಲು ತೊಡಗಿದ್ದರು. ಮುಸ್ಲಿಮರಲ್ಲಿ ಕೆಳಜಾತಿಗಳಿಂದ ಮತಾಂತರವಾಗಿ ಬಂದವರು ಎಂಬಂತಿರುವ ಈ ಸಮೂಹವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದಿರುವುದನ್ನು ಉಪಯೋಗಿಸಿಕೊಂಡು ಅದನ್ನು ಮುಸ್ಲಿಂ ಮತಬ್ಯಾಂಕಿನಿಂದ ಈಚೆ ಸೆಳೆದು ತರುವ ಯತ್ನದಂತೆ ಇತ್ತದು. ಆದರೆ, ಕಟ್ಟರ್ ಹಿಂದು ಅನುಯಾಯಿಗಳಿಗೆ ಇದು ತುಷ್ಟೀಕರಣದಂತೆ ಕಂಡಿದ್ದರಿಂದಲೋ ಅಥವಾ ಬಿಜೆಪಿಗೆ ಅದರಿಂದ ಮತಗಳೇನೂ ಬರದು ಎಂಬುದು ಪಕ್ಕಾ ಆಗಿದ್ದರಿಂದಲೋ, ಒಟ್ಟಿನಲ್ಲಿ ಪಸ್ಮಂದಾ ಮುಸ್ಲಿಮರ ಉಲ್ಲೇಖದ ತೀವ್ರತೆ ಕಮ್ಮಿ ಆಯಿತು.
ಹೀಗಾಗಿ, ಒಬಿಸಿ- ಎಸ್ಸಿಎಸ್ಟಿ – ಮುಸ್ಲಿಮರು ಈ ಎಲ್ಲ ವಿಭಾಗಗಳಲ್ಲಿ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಪಕ್ಷಗಳ ಆಟ ಮತ್ತು ಸಮೀಕರಣಗಳು ಮುಂದುವರಿದಿವೆಯಾದರೂ ಅಲ್ಲೆಲ್ಲ ತುಂಬ ಪ್ರತಿಫಲ ಸಿಗುವ ನಿರೀಕ್ಷೆ ಏನಿಲ್ಲ.
ಆದರೆ…
ಈ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ತುಂಬ ನಾಜೂಕಿನಿಂದ ಕಟ್ಟಿ ನಿಲ್ಲಿಸಿರುವ ಇನ್ನೊಂದು ‘ಐಡೆಂಟಿಟಿ’ಯ ಕೋಟೆಗೆ ತಾನು ಲಗ್ಗೆ ಹಾಕುವ ನಿಟ್ಟಿನಲ್ಲಿ ಮಾತ್ರ ಕಾಂಗ್ರೆಸ್ ಒಂದಿಷ್ಟು ಪರಿಣಾಮಕಾರಿ ಸಿದ್ಧತೆ ಮಾಡಿದೆ ಎಂದು ಹೇಳಬಹುದು. ಈ ಐಡೆಂಟಿಟಿಯ ಮತಬ್ಯಾಂಕಿನ ಮೇಲೆ ಮೋದಿಯ ಬಿಜೆಪಿಗಿರುವ ಪಾರಮ್ಯವನ್ನು ಮುರಿಯಬೇಕಿರುವುದು ಮುಂದಿನ ದಿನಗಳಲ್ಲಾದರೂ ಕಾಂಗ್ರೆಸ್ಸಿಗೆ ತುಂಬ ಅನಿವಾರ್ಯವೇ ಹೌದು.
ಯಾವುದದು ಮತಬ್ಯಾಂಕಿನ ಸಮೀಕರಣದ ಹೊಸ ಐಡೆಂಟಿಟಿ? ಆ ಐಡೆಂಟಿಟಿ ಎಂದರೆ- ಮಹಿಳೆ!:
ಗಮನಿಸಿ. ನಾವಿಲ್ಲಿ ರಾಜಕಾರಣ ಮತ್ತು ಮತಬ್ಯಾಂಕಿಗೆ ಸಂಬಂಧಿಸಿ ಐಡೆಂಟಿಟಿ ಎಂದು ಮಾತನಾಡುವುದರ ಅರ್ಥ ಏನೆಂದರೆ- ಅದು ಒಂದು ಸಮೂಹವಾಗಿ ಯಾರದ್ದೋ ಒಬ್ಬರ ಬೆನ್ನಿಗೆ ಪ್ರಬಲವಾಗಿ ನಿಲ್ಲುತ್ತದೆ ಎಂಬರ್ಥದಲ್ಲಿ. ಮಹಿಳೆಯ ವಿಚಾರದಲ್ಲಿ ಮತಬ್ಯಾಂಕ್ ಐಡೆಂಟಿಟಿ ಎಂಬ ಪರಿಕಲ್ಪನೆ ಏಕೆಂದರೆ, ಆಕೆ ತನ್ನ ಜಾತಿ, ಪ್ರದೇಶ ಇತ್ಯಾದಿ ಐಡೆಂಟಿಟಿಗಳನ್ನೆಲ್ಲ ಗೌಣವಾಗಿಸಿ ಮತದಾನದ ಸಂದರ್ಭದಲ್ಲಿ ತಾನೊಬ್ಬ ಮಹಿಳೆಯಾಗಿ ಇಂಥವರ ಬೆನ್ನಿಗೆ ನಿಲ್ಲುತ್ತೇನೆ, ಮತ ಚಲಾಯಿಸುತ್ತೇನೆ ಎಂದು ನಿರ್ಧರಿಸಿದಾಗ ಅದೊಂದು ಮತಬ್ಯಾಂಕ್ ಐಡೆಂಟಿಟಿ ಎಂದಾಗುತ್ತದೆ.
2019ರ ಲೋಕಸಭೆ ಫಲಿತಾಂಶವನ್ನು ವಿಶ್ಲೇಷಿಸಿ ಬಂದಿರುವ ಕೆಲವು ಅಧ್ಯಯನ ವರದಿಗಳು ಆ ಚುನಾವಣೆಯಲ್ಲಿ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ್ದರು ಎಂಬುದನ್ನು ಸಾರಿವೆ. ಉತ್ತರ ಪ್ರದೇಶ ಸೇರಿದಂತೆ ಹಿಂದಿ ಭಾಷಿಕ ಹಾಗೂ ಈಶಾನ್ಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಸಹ ಮಹಿಳೆಯರು ಪುರುಷರನ್ನು ಮೀರಿಸುವ ಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಂಡಲ್ಲೆಲ್ಲ ಬಿಜೆಪಿ ಗೆದ್ದಿರುವುದನ್ನು ಎಕ್ಸಿಸ್-ಮೈ ಇಂಡಿಯಾ ಹಾಗೂ ಲೋಕನೀತಿ-ಸಿ ಎಸ್ ಡಿ ಎಸ್ ಇತ್ಯಾದಿ ಸರ್ವೆಗಳು ವಿಶ್ಲೇಷಿಸಿವೆ.
ಯಾರು ಯಾವ ಪಕ್ಷಕ್ಕೆ ಮತ ಹಾಕಿದರು ಎಂಬ ಅಂಕಿಸಂಖ್ಯೆಗಳೇನೂ ಯಾರಿಗೂ ಸಿಕ್ಕುವುದಿಲ್ಲವಾದರೂ ಈ ಮೇಲೆ ಉದಾಹರಿಸಿದ ಸರ್ವೆಗಳು ಕೆಲವು ತರ್ಕಗಳನ್ನಿಟ್ಟುಕೊಂಡು ಚುನಾವಣೋತ್ತರವಾಗಿ ಈ ಲೆಕ್ಕಾಚಾರ ಮಾಡಿರುತ್ತವೆ. 1962ರಿಂದ ಚುನಾವಣಾ ಆಯೋಗವು ಒಂದು ಪ್ರದೇಶದಲ್ಲಾದ ಮತದಾನದಲ್ಲಿ ಮಹಿಳೆಯರ ಪಾಲೆಷ್ಟು, ಪುರುಷರ ಪಾಲೆಷ್ಟು ಎಂಬ ಸಂಖ್ಯೆಯನ್ನಂತೂ ಕೊಡುತ್ತದೆ. ಇದನ್ನಿಟ್ಟುಕೊಂಡು, ಒಂದು ನಿರ್ದಿಷ್ಟ ಮತಕ್ಷೇತ್ರದಲ್ಲಿ ಬಿಜೆಪಿ ಇಂತಿಷ್ಟು ಮತದಿಂದ ಗೆದ್ದಿರಬೇಕಾದರೆ ಅದರಲ್ಲಿ ಮಹಿಳೆಯರ ಮತಗಳೆಷ್ಟಿರುತ್ತವೆ ಎಂದು ಲೆಕ್ಕ ಹಾಕಬಹುದು. ಹೀಗಾಗಿ, ಮೋದಿ ಪ್ರಣೀತ ಬಿಜೆಪಿಗೆ ಮತ ಹಾಕುವಾಗ ಮಹಿಳೆಯರ ದೊಡ್ಡವರ್ಗವೊಂದು ತಾನ್ಯಾವ ಜಾತಿ-ಅಭ್ಯರ್ಥಿಯದ್ಯಾವ ಜಾತಿ ಎಂಬುದನ್ನು ಮೀರಿ ಮಹಿಳೆಯಾಗಿ ಯೋಚಿಸುತ್ತಿದೆ ಎಂದಾಯಿತು.
ಇದೇಕೆ ಹೀಗೆ ಎಂಬುದಕ್ಕೆ ನಮಗೆ ತರ್ಕಗಳೂ ಸಿಗುತ್ತ ಹೋಗುತ್ತವೆ. ಪ್ರಧಾನಿ ಮೋದಿಯವರ ಬಾಯಿಂದ ಬರುವ ಕೆಲವು ಪದಪುಂಜಗಳನ್ನು ಕೇಳಿದರೆ ಹೊಳಹು ಸಿಗುತ್ತದೆ. ಇಜ್ಜತ್ ಘರ್ ಎಂಬ ಪದವನ್ನು ಶೌಚಾಲಯಗಳಿಗೆ ಟಂಕಿಸಿದರು ಮೋದಿ. ಅಂದರೆ, ಗ್ರಾಮೀಣ ಭಾಗದ 10 ಕೋಟಿ ಮನೆಗಳಿಗೆ ಕೇವಲ ಶೌಚಾಲಯ ಕಟ್ಟಿಸಿಕೊಟ್ಟಿಲ್ಲ, ಬದಲಿಗೆ ಆ ಮೂಲಕವಾಗಿ ಬೆಳಕು ಹರಿಯುವ ಮೊದಲೇ ಬಯಲಲ್ಲಿ ಶೌಚಕ್ಕೆ ಕೂರಬೇಕಿದ್ದ ಮಹಿಳೆಯ ಸಮ್ಮಾನ ರಕ್ಷಿಸುವ ಇಟ್ಟಿಗೆಯ ಗೂಡದು ಎಂಬ ಭಾವಸಂದೇಶ ಅಲ್ಲಿದೆ. ಅದು ಮನೆ ಕೊಡುವ ಆವಾಸ್ ಯೋಜನೆ ಇದ್ದಿರಬಹುದು, ಗ್ಯಾಸ್-ಜನಧನ ಖಾತೆಗಳಿದ್ದಿರಬಹುದು ಅಲ್ಲೆಲ್ಲ ಬಿಪಿಎಲ್ ಮಹಿಳೆಯನ್ನೇ ಮುಖ್ಯಸ್ಥೆಯನ್ನಾಗಿಸಲಾಗುತ್ತಿದೆ.
ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!
ಲಖ್ ಪತಿ ದೀದಿ…ಮೋದಿಯವರ ಬಾಯಿಂದ ಆಗೀಗ ಕೇಳುವ ಮತ್ತೊಂದು ಪದಪುಂಜ. ಕೇಂದ್ರ ಸರ್ಕಾರದ ಪ್ರೋತ್ಸಾಹವನ್ನು ಹೊಂದಿರುವ ಮಹಿಳಾ ಸ್ವಸಹಾಯ ಸಂಘಗಳಿಂದ ಯಾರೆಲ್ಲ ಮಹಿಳೆಯರು ವಾರ್ಷಿಕವಾಗಿ 1 ಲಕ್ಷ ರುಪಾಯಿಗಳಿಗಿಂತ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೋ ಅವರೆಲ್ಲ ಲಖ್ ಪತಿ ದೀದಿಯರು. ಇವರ ಮಾಸಿಕ ಆದಾಯ 10,000 ರುಪಾಯಿಗಳ ಸರಾಸರಿಯನ್ನು ಕನಿಷ್ಠ ನಾಲ್ಕು ಕೃಷಿ ಋತುವಿನವರೆಗೆ ಅಥವಾ 4 ವ್ಯವಹಾರದ ಸೀಸನ್‌ವರೆಗೆ ಕಾಪಾಡಿಕೊಂಡಿರಬೇಕು. ಅದಾಗಲೇ ಅಂಥ 1 ಕೋಟಿ ಲಖ್ ಪತಿ ದೀದಿಯರು ದೇಶದಲ್ಲಿ ಸೃಷ್ಟಿಯಾಗಿದ್ದಾರೆ. ಸ್ವಯಂ ಉದ್ಯೋಗ ಹಾಗೂ ವಹಿವಾಟು ನಿರ್ವಹಣೆಗಳಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯನ್ನು ಗಟ್ಟಿಗೊಳಿಸಿ 3 ಕೋಟಿ ಲಖ್ ಪತಿ ದೀದಿಯರನ್ನು ಸೃಷ್ಟಿಯಾಗಿಸಬೇಕೆಂಬುದು ಈ ಯೋಜನೆಯ ಗುರಿ. ಎಸ್ ಬಿ ಐ ವರದಿಯೊಂದರ ಪ್ರಕಾರ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರ ಆದಾಯವು 2019 ಮತ್ತು 2024ರ ನಡುವೆ ಶೇಕಡ 207ರ ಏರಿಕೆ ಕಂಡಿದೆ.
ಮೋದಿ ಮುಖ ನೋಡಿ ಮತ ಹಾಕುವ ಸಂದರ್ಭ ಬಂದಾಗ ತಾನು ಜಾಟಳೋ, ಕುಮ್ರಿಯೊ, ಒಕ್ಕಲಿಗಳೋ, ದಲಿತೆಯೋ ಎಂದು ತಲೆಕೆಡಿಸಿಕೊಳ್ಳದೇ ತನ್ನನ್ನು ಕೇವಲ ಫಲಾನುಭವಿಯಾಗಿ ನೋಡಿಕೊಳ್ಳುವಂತೆ ಮೇಲೆ ವಿವರಿಸಿದ ಹೆಜ್ಜೆಗಳು ನೋಡಿಕೊಳ್ಳುತ್ತವೆ.
ಹೀಗೆಲ್ಲ ಮೋದಿ ಕಟ್ಟಿಕೊಂಡಿರುವ ಕೋಟೆಯನ್ನು ಗುರುತಿಸಿ ಅದಕ್ಕೆ ಲಗ್ಗೆ ಹಾಕುವ ಯತ್ನವನ್ನು ಕಾಂಗ್ರೆಸ್ ವಿಧಾನಸಭೆ ಚುನಾವಣೆ ಹಂತದಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿ ಮಾಡಿದೆ. ಇಲ್ಲೆಲ್ಲ ಅದು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಹಲವು ಭಾಗ್ಯಗಳನ್ನು ಪ್ರಕಟಿಸಿತು. ಕರ್ನಾಟಕದಲ್ಲಿ ಬಿಜೆಪಿ ವೈಫಲ್ಯದ ವಿರುದ್ಧ ಜನ ಮತ ಕೊಟ್ಟರು ಹೊರತು ಗ್ಯಾರಂಟಿಗಲ್ಲ ಎಂದೆಲ್ಲ ವಾದಿಸುವ ಅವಕಾಶಗಳಿದೆಯಾದರೂ, ಗೃಹಲಕ್ಷ್ಮೀ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಗಳನ್ನು ಬಹುತೇಕರು ಖುಷಿಯಿಂದಲೇ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಯಾರಿಗೂ ತೋರುವ ಸತ್ಯ. ಅಲ್ಲದೇ, ಮಹಿಳೆಯರ ಕೈಗೆ ಹಣ ಇಡುವ ಯಾವುದೇ ಯೋಜನೆ ದುಂದು ಅಥವಾ ಪುಕ್ಕಟೆ ಅಲ್ಲ, ಅದನ್ನಾಕೆ ಕುಟುಂಬದ ಆರ್ಥಿಕ ಉನ್ನತಿಗೆ ಸೂಕ್ತವಾಗಿಯೇ ಬಳಸಿಕೊಳ್ಳುತ್ತಾಳೆ ಎಂಬ ವಾದವೀಗ ಗಟ್ಟಿಯಾಗಿದೆ.
ಇದರ ಮುಂದುವರಿದ ಭಾಗ ಎಂಬಂತೆ, ಕಾಂಗ್ರೆಸ್ ತನ್ನ ಲೋಕಸಭೆ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ನೀಡಿರುವ ಭರವಸೆಗಳನ್ನು ಗಮನಿಸಬೇಕು.
ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!
ಯಾವುದೇ ಷರತ್ತಿಲ್ಲದೇ ಬಡ ಕುಟುಂಬದ ಪ್ರತಿ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರುಪಾಯಿಗಳನ್ನು ನೇರ ವರ್ಗಾವಣೆ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ. ಬಡವರೆಂದರೆ ಯಾರೆಲ್ಲ? ದುಡಿಯುವುದೇ ಬೇಡವೇ? ಇದಕ್ಕೆ ಹಣವನ್ನು ಯಾರಿಗೆ ತೆರಿಗೆ ಹಾಕಿ ಹೊಂದಿಸುತ್ತಾರೆ ಎಂದೆಲ್ಲ ಚರ್ಚಿಸಬಹುದು. ಆದರೆ ಕೊನೆಗೂ ಮುಖ್ಯವಾಗುವುದು ಈ ಪ್ರಲೋಭನೆಯನ್ನು ಕಾಂಗ್ರೆಸ್ ಆರ್ಥಿಕವಾಗಿ ಬಡವಾಗಿರುವ ಮಹಿಳೆಗೆ ಪರಿಣಾಮಕಾರಿಯಾಗಿ ನಾಟಿಸಿ ಮತ ಸೆಳೆಯುತ್ತದಾ ಇಲ್ಲವಾ ಎಂಬುದರಲ್ಲಷ್ಟೆ. 2025ರ ನಂತರ ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಮಹಿಳೆಗೆ ಶೇ. 50ರ ಮೀಸಲು ಎಂಬ ಇನ್ನೊಂದು ಭರವಸೆಯ ಅಸ್ತ್ರವನ್ನೂ ಕಾಂಗ್ರೆಸ್ ಪ್ರಯೋಗಿಸಿದೆ.
ಅಂತೂ ಮಹಿಳಾ ಮತದಾರರ ವರ್ಗ ಎಂಬುದೀಗ ಎಲ್ಲ ಪಕ್ಷಗಳಿಗೆ ರಣಕಣ. ಹೀಗೆಲ್ಲ ಮಹಿಳೆಯರನ್ನು ಖುಷಿಗೊಳಿಸುತ್ತಿರುವ ಮಾದರಿಗಳ ಪೈಕಿ ಮೋದಿಯದ್ದು ಸರಿಯಾ ಅಥವಾ ಕಾಂಗ್ರೆಸ್ಸಿನದ್ದಾ, ಯಾವುದು ಬಿಟ್ಟಿ, ಇನ್ಯಾವುದು ಬಲವರ್ಧನೆ ಎಂಬುದನ್ನೆಲ್ಲ ಆಸಕ್ತರು ಅವರವರ ಭಾವಕ್ಕೆ ತಕ್ಕಂತೆ ಚರ್ಚಿಸಬಹುದು. ಆದರೆ ಭಾರತೀಯ ರಾಜಕಾರಣದಲ್ಲಿ ಮಹಿಳಾ ಮತಬ್ಯಾಂಕ್ ಅನ್ನು ಕ್ರೋಢಿಕರಿಸಿ ತಮ್ಮತ್ತ ಸೆಳೆದುಕೊಳ್ಳುವ ಟ್ರೆಂಡ್ ಮತ್ತು ಈ ಕುರಿತಾದ ಹಣಾಹಣಿ ಇನ್ನೂ ಹಲವು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಎಂಬುದನ್ನಂತೂ ಅರ್ಥಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಹ ಗಂಡ ಸೂಚಿಸಿದ ಅಭ್ಯರ್ಥಿಗೆ ಹೆಂಡತಿಯ ಮತ ಎಂಬಂತಹ ಸನ್ನಿವೇಶ ಹೆಚ್ಚೂಕಡಿಮೆ ಇಲ್ಲವಾಗಿದೆ. ಹಲವು ಬಗೆಯ ಇಷ್ಟಾನಿಷ್ಟ, ಆ ಹೊತ್ತಿನ ಪ್ರಲೋಭನೆ, ಜಾತಿ ಸೇರಿದಂತೆ ಹಲವು ಐಡೆಂಟಿಟಿಗಳಲ್ಲಿ ಅಗಾಧವಾಗಿ ವಿಭಜಿತವಾಗಿರುವ ಪುರುಷ, ಕೇವಲ ಪುರುಷ ಎಂಬ ಐಡೆಂಟಿಟಿಯಲ್ಲಿ ಮತಬ್ಯಾಂಕ್ ಆಗಲಾರ. ಇವರಿಗೆ ಹೋಲಿಸಿದರೆ ಫಲಾನುಭವಿ ಮಹಿಳೆ ಒಂದು ಕ್ರೋಢೀಕೃತ ಮತಬ್ಯಾಂಕ್ ಆಗುವ ಅವಕಾಶ ಹೆಚ್ಚು. ಅದಲ್ಲದೇ, ಮೋದಿ ಸರ್ಕಾರವೇ ಸಂಸತ್ತಿನಲ್ಲಿ ಪಾಸು ಮಾಡಿರುವ ಮಹಿಳಾ ಮೀಸಲು ವಿಧೇಯಕವು, ಜನಗಣತಿ ಮುಗಿಯುತ್ತಲೇ ಜಾರಿಗೆ ಬರುವ ಹಂತದಲ್ಲಿದೆ. ಆಗ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಕಡ್ಡಾಯ 33 ಶೇಕಡ ಸ್ಥಾನಗಳು ಇರಬೇಕಾಗುತ್ತವೆ. ಹಾಗೆಂದೇ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿರುವ ಚುನಾವಣಾ ರಾಜಕಾರಣದ ಧ್ರುವೀಕರಣದ ಆಟಗಳು ಈಗಷ್ಟೇ ಪ್ರಾರಂಭವಾಗಿವೆ. ಈ ವಿಚಾರದಲ್ಲಿ ಮೋದಿಯ ಮುನ್ನಡೆಗೆ ಪ್ರತಿಪಕ್ಷ ಮೈತ್ರಿಗಳು 2024ರ ಲೋಕಸಭೆ ಚುನಾವಣೆಯಲ್ಲಿ ಗಂಭೀರ ಸವಾಲೊಡ್ಡಿಯಾವಾ ಎಂಬುದು ಈಗಿರುವ ಕುತೂಹಲ.
ಅಂದಹಾಗೆ, ರಾಜಕಾರಣದ ಚರ್ಚೆ ಅಂದರೆ ಅದು ತಮಗೆ ಮಾತ್ರ ಸಂಬಂಧಿಸಿದ್ದು, ಮಹಿಳೆಯರಿಗೆ ನೋಡುವುದಕ್ಕೆ-ಚರ್ಚಿಸುವುದಕ್ಕೆ ಟಿವಿ ಧಾರಾವಾಹಿಗಳಿವೆ ಅಂತ ಅಂದುಕೊಂಡಿರುವ ಗಂಡಸಿರಿಗೆಲ್ಲ ಗೊತ್ತಿರಬೇಕು…ಮತಬ್ಯಾಂಕ್ ರಾಜಕಾರಣದ ಸ್ಕ್ರಿಪ್ಟ್ ಅದಾಗಲೇ ಬದಲಾಗಿಬಿಟ್ಟಿದೆ!
ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!