ದಾವಣಗೆರೆ: ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ನಾಯಕರ ಮಾತುಗಳು ಎಲ್ಲೆ ಮೀರುತ್ತಿವೆ. ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದಾರೆ. ಈಗ ಈ ಸಾಲಿಗೆ ಮಾಜಿ ಸಚಿವ, ಹಿರಿಯ ರಾಜಕಾರಣಿ, ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರೂ ಸೇರಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ (Davangere Lok Sabha constituency) ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ (Gayatri Siddeshwar) ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂಬಂತೆ ಹೇಳಿದ್ದಾರೆ. ಇದೀಗ ವ್ಯಾಪಕ ಆಕ್ರೋಶ ಹಾಗೂ ಟೀಕೆಗೆ ಗುರಿಯಾಗಿದೆ. ಇದಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ (Malavika Avinash) ಸಹ ಕಿಡಿಕಾರಿದ್ದು, ನಿಮ್ಮ ಮನೆಯ ಸೊಸೆಯನ್ನೂ ಕಣಕ್ಕಿಳಿಸಿದ್ದನ್ನು ಮರೆತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಸ್ವತಃ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಮಹಿಳೆಯರಿಗೆ ಅಡುಗೆ ಮಾಡೋಕೂ ಗೊತ್ತು, ಆಕಾಶದಲ್ಲಿ ಹಾರಾಡೋಕೂ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.
ದಾವಣಗೆರೆ ಬಂಟರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಗಾಯತ್ರಿ ಸಿದ್ದೇಶ್ವರ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾತನಾಡಲು ಬಾರದ ಗಾಯತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡುವುದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ಸಿಗರ ‘ಕೈ’ ಮೇಲಿದೆ ಎಂಬುದನ್ನು ನಾವು ತೋರಿಸಬೇಕು ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್. ಅಶೋಕ್ ಕೆಂಡ
ಈ ಹಿಂದೆ ಗೆದ್ದಾಗ ಮೋದಿಗೆ ಹೂ ಕೊಟ್ಟಿದ್ರಾ?
ಗಾಯತ್ರಿ ಸಿದ್ದೇಶ್ವರ್ ಅವರು ತಾವು ದಾವಣಗೆರೆಯಿಂದ ಗೆದ್ದು ನರೇಂದ್ರ ಮೋದಿ ಅವರಿಗೆ ಕಮಲದ ಹೂವನ್ನು ಅರ್ಪಿಸುತ್ತೇನೆ ಎಂದು ಹೇಳುತ್ತಾರೆ. ಹಾಗಾದರೆ, ಈ ಹಿಂದೆ ಗೆದ್ದಿದ್ದು ನೀವೇ (ಬಿಜೆಪಿಯವರೇ) ಅಲ್ಲವೇ? ಆಗ ಏನು ನೀವು ಕಮಲದ ಹೂವನು ಕೊಟ್ಟಿದ್ದಿರಾ? ಎಂದು ಶಾಮನೂರು ಶಿವಶಂಕರಪ್ಪ ಪ್ರಶ್ನೆ ಮಾಡಿದ್ದಾರೆ.
ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನು ಕೊಡುಗೆಯನ್ನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಬರಬೇಕಾದ ಹಣವನ್ನು ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.
ಗಾಯತ್ರಿ ಸಿದ್ದೇಶ್ವರ್ ಕೆಂಡಾಮಂಡಲ
ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿದ್ದಾರೆ. ಆಗಸದಲ್ಲಿ ಹಾರುವ ಹಂತವನ್ನು ತಲುಪಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ. ಈ ವಿಚಾರ ಅಜ್ಜನಿಗೆ ಗೊತ್ತಿಲ್ಲವೆಂದು ಅನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ತಾಯಿಯಾದವಳು ಅಡುಗೆ ಮಾಡಿ, ಕೈ ತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಹಾಗಾದರೆ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತವೇ? ಮಹಿಳೆ ಅಡುಗೆಯನ್ನೂ ಮಾಡುತ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ. ಇಂಥ ಹೇಳಿಕೆ ನೀಡುವ ಮೂಲಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಗಾಯತ್ರಿ ಸಿದ್ದೇಶ್ವರ್ ಆಕ್ರೋಶವನ್ನು ಹೊರಹಾಕಿದರು.
ನಿಮ್ಮ ಸೊಸೆಯನ್ನೂ ಕಣಕ್ಕಿಳಿಸಿಲ್ಲವೇ? ಶಾಮನೂರುಗೆ ಮಾಳವಿಕಾ ಪ್ರಶ್ನೆ
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇದೊಂದು ಕೆಟ್ಟ ಹೇಳಿಕೆ ಎಂದಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಬುದ್ಧಿ ಹೇಳುವ ವಯಸ್ಸು ನನ್ನದಲ್ಲ. ಆದರೆ, ಅವರ ಮಾತಿಗೆ ವಿರೋಧ ವ್ಯಕ್ತಪಡಿಸುತ್ತೇನೆ. ನಮ್ಮ ಪಕ್ಷದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಬಗ್ಗೆ ಕೆಟ್ಟ ಹೇಳಿಕೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಿದ್ದಾರೆ. ಅಂಥದರಲ್ಲಿ ಈ ರೀತಿ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Lok Sabha Election 2024: ಅಮಿತ್ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ನಮ್ಮ ದೇಶದಲ್ಲಿ ಎಲ್ಲ ಕೆಲಸ ಮಾಡುವ ಮಹಿಳೆಯರಿದ್ದಾರೆ. ಅವರು ಮನೆಯಲ್ಲಿರಲು ಲಾಯಕ್ಕು ಅಂತ ಹೇಳಿರುವುದು ಸರಿಯಲ್ಲ. ಅವರ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಿದ್ದರು. ಅವರ ಪಕ್ಷದಿಂದ ಮಹಿಳೆಯೊಬ್ಬರು ಪ್ರಧಾನಿ ಕೂಡ ಆಗಿದ್ದರು. ಅಂಥದ್ದರಲ್ಲಿ ಈ ರೀತಿ ಹೇಳಿಕೆ ಸರಿಯಲ್ಲ. ಗಾಯತ್ರಿ ಸಿದ್ದೇಶ್ವರ್ ಅವರು ಹೇಳಿದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಇಲ್ಲಿಯವರೆಗೂ ಮನೆ ಜವಾಬ್ದಾರಿ ನೋಡಿಕೊಳ್ಳುತ್ತಿದೆ. ಇನ್ನು ಮುಂದೆ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾಋೆ. ಕ್ಷೇತ್ರದ ಜನತೆ ಅವರನ್ನು ಗೆಲ್ಲಿಸಿ ಕಳಿಸುವ ನಿರ್ಧಾರ ಮಾಡಿದ್ದಾರೆ ಎಂದು ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಪರ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಯೋಜನೆಗಳನ್ನು ತಂದಿದ್ದಾರೆ. ಮಹಿಳೆಯರಿಗಾಗಿ ನಾರಿ ಶಕ್ತಿ ವಂದನ್ ಕಾರ್ಯಕ್ರಮವನ್ನು ಯೋಜಿಸಿದ್ದಾರೆ. ರಾಜಕೀಯ ಮೀಸಲಾತಿಯನ್ನು ಕೂಡ ತಂದಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡುವ ಕೆಟ್ಟ ಚಾಳಿ ಕಾಂಗ್ರೆಸ್‌ಗಿದೆ. ಸೋಲುವ ಹತಾಶೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಕೂಡಲೇ ಶಾಮನೂರು ಶಿವಶಂಕರಪ್ಪ ಅವರು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.