ಚಾಮರಾಜನಗರ/ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಾಕ್ಸಮರಗಳು ಹೆಚ್ಚುತ್ತಿವೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಹನೂರಿನ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಒಬ್ಬ ಗೂಂಡಾ, ರೌಡಿ ಎಂದು ಕರೆದಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಯತೀಂದ್ರ ಅವರಿಗೆ ಇನ್ನೂ ಮೆಚ್ಯುರಿಟಿಯೇ ಇಲ್ಲ ಎಂದು ಕಿಡಿಕಾರಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ಗುಂಡಾ, ರೌಡಿಯಾಗಿದ್ದು, ಗುಜರಾತ್‌ನಲ್ಲಿ ನಡೆದಿದ್ದ ನರಮೇಧದ ರೂವಾರಿ ಎಂಬ ಆರೋಪವನ್ನು ಹೊತ್ತಿದ್ದಾರೆ. ಅವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಹನೂರಿನಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಯತೀಂದ್ರ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಈಗ ರಾಜ್ಯ ಬಿಜೆಪಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದೆ.
ಯತೀಂದ್ರ ವಿರುದ್ಧ ದೂರು ಕೊಡುತ್ತೇವೆ: ಅಶೋಕ್
ಯತೀಂದ್ರ ಸಿದ್ದರಾಮಯ್ಯ ಅವರಿಗೆ ಇನ್ನೂ ಮೆಚ್ಯುರಿಟಿ, ಬುದ್ಧಿ ಇಲ್ಲ. ಯಾರ ಬಗ್ಗೆ ಮಾತಾಡಬೇಕು ಎಂಬ ಬಗ್ಗೆ ಗೊತ್ತಿಲ್ಲ, ಸ್ಥಾನಮಾನ ಇಲ್ಲದ ವ್ಯಕ್ತಿ. ಅಮಿತ್ ಶಾ ಈ ದೇಶದ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ಹಿಂದಿನಿಂದಲೂ ಕೊಟ್ಟುಕೊಂಡು ಬರುತ್ತಿದೆ. ಸಿದ್ದರಾಮಯ್ಯ ಅವರ ಮಗ ಎಂಬ ಕಾರಣಕ್ಕೆ ಬಾಲಿಶ ಹೇಳಿಕೆ ನೀಡಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಅವರು ಜೈಲು ಶಿಕ್ಷೆಯನ್ನು ಅನುಭವಿಸುವ ಹಂತಕ್ಕೆ ಬಂದಿದ್ದಾರೆ. ಇವರ ಡಿಎನ್ಎನಲ್ಲೇ ಇಂತಹ ವಿಚಾರಗಳು ಬಂದಿದೆ. ಇವರ ವಿರುದ್ಧ ದೂರು ನೀಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಅಪ್ಪನ ಹೆಸರ ಮೇಲೆ ಅಧಿಕಾರಕ್ಕೆ ಬಂದವರು ಹೀಗೆ: ಸಿಟಿ ರವಿ
ಅಪ್ಪನ ಹೆಸರ ಮೇಲೆ ಅಧಿಕಾರಕ್ಕೆ ಬಂದವರು ಹೀಗೆಯೇ ಮಾತನಾಡುತ್ತಾರೆ. ಎಂದಾದರೂ ಪಕ್ಷದ ಕೆಲಸ ಮಾಡಿದ್ದಾರಾ? 1982ರಲ್ಲಿ ಅಮಿತ್ ಶಾ ಬೂತ್ ಅಧ್ಯಕ್ಷ ಆಗಿದ್ದರು. ಆಗ ಇವರಪ್ಪ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು ಇವರು. ನಾವು ವಿದ್ಯಾರ್ಥಿಗಳಾಗಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ನಮ್ಮ ಮೇಲೂ ಗೂಂಡಾ ಕೇಸ್ ಹಾಕಿದ್ದರು. ಹಾಗಾದರೆ ನಾನು ಗೂಂಡಾನಾ? ಅಪ್ಪನ ಹೆಸರು ಹೇಳಿಕೊಂಡು, ಅಧಿಕಾರ ಚಲಾಯಿಸುವವರಿಗೆ ಬಡವರ ಕಷ್ಟ ಕಾಣಿಸುತ್ತಾ? ಎಂದು ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ
ಕೂಡಲೇ ಯತೀಂದ್ರ ಕ್ಷಮೆ ಯಾಚಿಸಲಿ: ಅಶ್ವಥ್ ನಾರಾಯಣ್
ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಮಾತಿನ ಮೇಲೆ, ನಡವಳಿಕೆ ಮೇಲೆ ನಿಲ್ಲಬೇಕು. ಮಾತಿನಲ್ಲಿ ಲಕ್ಷ್ಮಣ ರೇಖೆ ಇರಬೇಕು. ಎಲ್ಲಿಯೂ ಎಲ್ಲೆ ಮೀರಿದ ಮಾತನಾಡಬಾರದು. ಯತೀಂದ್ರ ಅವರ ಇಂಥ ಕೀಳು ಮಟ್ಟದ ರಾಜಕೀಯ ಹೇಳಿಕೆಯನ್ನು ವಿರೋಧಿಸುತ್ತೇವೆ. ಅಲ್ಲದೆ, ನಮ್ಮ ಗೃಹ ಸಚಿವ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿದ್ದಕ್ಕೆ ಯತೀಂದ್ರ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ: ಡಿವಿಎಸ್
ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, ಬೈಗುಳದಿಂದ ರಾಜಕಾರಣ ಮಾಡುವುದಾದರೆ ಅನೇಕರು ರಾಜಕಾರಣವನ್ನು ಮಾಡಬಹುದಿತ್ತು. ಬೈಗುಳದಿಂದ ರಾಜಕಾರಣ ಮಾಡುವವರ ಸಾಲಿಗೆ ಯತೀಂದ್ರ ಸೇರಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ, ದೊಡ್ಡ ರಾಜಕಾರಣಿ ಆಗುತ್ತೇನೆ ಎಂದು ಭಾವಿಸಿದರೆ ಕೊನೇ ಮೊಳೆ ಆಗಲಿದೆ. ಅವರ ತಂದೆ ಮಂಡಿಸಿದ ಬಜೆಟ್ ಬಗ್ಗೆ ಮಾತಾಡಲಿ. ಅದು ಬಿಟ್ಟು ಬಿಜೆಪಿ, ಬಿಜೆಪಿ ನಾಯಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮಗನಾಗಿ, ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದ್ದಾರೆ.