Site icon Vistara News

Lok Sabha Election: 58 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಆರಂಭ; ಜೈಶಂಕರ್‌ ಮತಗಟ್ಟೆ ಗೊಂದಲ, ಮುಫ್ತಿ ಪ್ರತಿಭಟನೆ

lok sabha election 2024 jaishankar mufti

ಬೆಂಗಳೂರು: ರಾಜಧಾನಿ ದಿಲ್ಲಿ (Delhi) ಸೇರಿದಂತೆ ಎಂಟು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ (Lok Sabha Election 2024) 6ನೇ ಹಂತದ ಮತದಾನ (voting) ಇಂದು ಮುಂಜಾನೆ 7 ಗಂಟೆಯಿಂದ ಆರಂಭವಾಗಿದೆ. 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 58 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ಆರಂಭವಾಯಿತು.

ಸಾರ್ವತ್ರಿಕ ಚುನಾವಣೆಯ ಆರನೇ ಹಂತದಲ್ಲಿ ವಿದೇಶಾಂಗ ವ್ಯವಹಾರ ಸಚಿವ ಡಾ. ಎಸ್. ಜೈಶಂಕರ್ (S Jaishankar) ಅವರು ತಮ್ಮ ಮತಗಟ್ಟೆಯಲ್ಲಿ ಮೊದಲಿಗರಾಗಿ ಮತದಾನ ಮಾಡಿದರು. ಇದಕ್ಕೂ ಮುನ್ನ ಅವರ ಮತಗಟ್ಟೆಯ ವಿಚಾರದಲ್ಲಿ ಗೊಂದಲ ಉಂಟಾಯಿತು. ನಂತರ ಸರಿಯಾದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದರು. “ನಾವು ನಮ್ಮ ಮತವನ್ನು ಚಲಾಯಿಸಿದ್ದೇವೆ. ಈ ಮತಗಟ್ಟೆಯಲ್ಲಿ ಮೊದಲ ಪುರುಷ ಮತದಾರ ಎಂಬ ಸವಲತ್ತು ನನಗೆ ಸಿಕ್ಕಿತು. ಪ್ರತಿಯೊಬ್ಬರೂ ತಮ್ಮ ಮತ ಚಲಾಯಿಸುವ ಮೂಲಕ ದೇಶಕ್ಕಾಗಿ ಈ ನಿರ್ಣಾಯಕ ಕ್ಷಣದಲ್ಲಿ ಭಾಗವಹಿಸಬೇಕು” ಎಂದವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ, ಪಿಡಿಪಿ ಮುಖ್ಯಸ್ಥೆ ಮತ್ತು ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೆಹಬೂಬಾ ಮುಫ್ತಿ (Mehabuba Mufti) ಅವರು ಪಕ್ಷದ ಮುಖಂಡರು ಮತ್ತು ಬೆಂಬಲಿಗರೊಂದಿಗೆ ತಮ್ಮ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಚುನಾವಣೆಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದರು. PDP ಪೋಲಿಂಗ್ ಏಜೆಂಟ್‌ಗಳು ಮತ್ತು ಕಾರ್ಯಕರ್ತರನ್ನು ಯಾವುದೇ ಕಾರಣವಿಲ್ಲದೆ ಬಂಧಿಸಲಾಗಿದೆ ಎಂದು ಮುಫ್ತಿ ಹೇಳಿಕೊಂಡಿದ್ದಾರೆ.

ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌, ಮನೋಹರ ಲಾಲ್‌ ಖಟ್ಟರ್‌, ಕನ್ಹಯ್ಯ ಕುಮಾರ್‌ ಸೇರಿ ಹಲವು ಪ್ರಮುಖ ನಾಯಕರ ಭವಿಷ್ಯವು ಶನಿವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ. ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದೆ.

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.

6ನೇ ಹಂತದಲ್ಲಿ ಕಣಕ್ಕಿಳಿದ ಪ್ರಮುಖ ಅಭ್ಯರ್ಥಿಗಳು

ಬಾನ್ಸುರಿ ಸ್ವರಾಜ್: ನವದೆಹಲಿ ಕ್ಷೇತ್ರ
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಅವರು ನವದೆಹಲಿ ಲೋಕಸಭಾ ಅಭ್ಯರ್ಥಿಯಾಗಿದ್ದು, ಎಎಪಿಯ ಸೋಮನಾಥ್ ಭಾರ್ತಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಹಾಲಿ ಸಂಸದೆ ಮೀನಾಕ್ಷಿ ಲೇಖಿ ಬದಲು ಬಾನ್ಸುರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಮನೇಕಾ ಗಾಂಧಿ: ಸುಲ್ತಾನ್‌ಪುರ
ಮನೇಕಾ ಗಾಂಧಿ ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ರಾಮ್ ಭುಲ್ ನಿಶಾದ್ ಮತ್ತು ಬಹುಜನ ಸಮಾಜ ಪಕ್ಷದ ಉದಯ್ ರಾಜ್ ವರ್ಮಾ ವಿರುದ್ಧ ಕಣಕ್ಕಿಳಿದಿದ್ದಾರೆ.

ನವೀನ್ ಜಿಂದಾಲ್: ಕುರುಕ್ಷೇತ್ರ
6ನೇ ಹಂತದ ಚುನಾವಣೆಯಲ್ಲಿ ಹರಿಯಾಣದ ಕುರುಕ್ಷೇತ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಬಿಜೆಪಿ ಅಭ್ಯರ್ಥಿ ನವೀನ್ ಜಿಂದಾಲ್, ಎಎಪಿಯ ಸುಶೀಲ್ ಗುಪ್ತಾ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳದ (ಐಎನ್‌ಎಲ್‌ಡಿ) ಅಭಯ್ ಸಿಂಗ್ ಚೌಟಾಲಾ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಂದಾಲ್ ಬಂದಿದ್ದಾರೆ

ಅಭಿಜಿತ್ ಗಂಗೋಪಾಧ್ಯಾಯ: ತಮ್ಲುಕ್ ಕ್ಷೇತ್ರ
ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ. ಟಿಎಂಸಿಯ ದೇಬಂಗ್ಶು ಭಟ್ಟಾಚಾರ್ಯ ಮತ್ತು ಸಿಪಿಐ(ಎಂ) ನಿಂದ ಸಯಾನ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದಾರೆ. ಗಂಗೋಪಾಧ್ಯಾಯ ಅವರು ಕೋಲ್ಕೊತಾ ಹೈಕೋರ್ಟ್‌ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿ ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು.

ಪ್ರವೀಣ್ ನಿಶಾದ್: ಸಂತ ಕಬೀರ ನಗರ
ಸಂತ ಕಬೀರ್ ನಗರದಲ್ಲಿ ಬಿಜೆಪಿ ಉಸ್ತುವಾರಿ ಪ್ರವೀಣ್ ನಿಶಾದ್, ಸಮಾಜವಾದಿ ಪಕ್ಷದ ಲಕ್ಷ್ಮೀಕಾಂತ್ ಅಲಿಯಾಸ್ ಪಪ್ಪು ನಿಶಾದ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಮನೋಜ್ ತಿವಾರಿ VS ಮತ್ತು ಕನ್ಹಯ್ಯ ಕುಮಾರ್
ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಇಬ್ಬರು ಪ್ರಮುಖ ಅಭ್ಯರ್ಥಿಗಳ ವಿರುದ್ಧ ಕದನ ನಡೆಯಲಿದೆ. ಹಾಲಿ ಸಂಸದ ಮನೋಜ್ ತಿವಾರಿ ಮತ್ತು ಕಾಂಗ್ರೆಸ್‌ನ ಕನ್ಹಯ್ಯ ಕುಮಾರ್ ಕಣದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ ಏಳು ಸಂಸದರ ಪೈಕಿ ಎಲ್ಲ ಆರು ಸಂಸದರನ್ನು ಕೈಬಿಟ್ಟರೆ, ತಿವಾರಿ ಮಾತ್ರ ಕಣದಲ್ಲಿದ್ದಾರೆ.

ಸಂಬಿತ್ ಪಾತ್ರಾ: ಪುರಿ ಕ್ಷೇತ್ರ
ಒಡಿಶಾದ ಪುರಿ ಕ್ಷೇತ್ರದಿಂದ ಸಂಬಿತ್ ಪಾತ್ರ ಸ್ಪರ್ಧಿಸುತ್ತಿದ್ದಾರೆ. ಬಿಜೆಡಿಯ ಅರೂಪ್ ಪಟ್ನಾಯಕ್ ಮತ್ತು ಕಾಂಗ್ರೆಸ್‌ನ ಜಯನಾರಾಯಣ ಪಟ್ನಾಯಕ್ ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ.

ದಿನೇಶ್ ಲಾಲ್ ಯಾದವ್ VS ಧರ್ಮೇಂದ್ರ ಯಾದವ್
ಅಜಂಗಢ ಕ್ಷೇತ್ರದಲ್ಲಿ ಸಂಸದ ದಿನೇಶ್ ಲಾಲ್ ಯಾದವ್ ನಿರಾಹುವಾ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ ಅಜಂಗಢ ಕ್ಷೇತ್ರವನ್ನು ಅಖಿಲೇಶ್ ಯಾದವ್ ಗೆದ್ದಿದ್ದರು.

ಮನೋಹರ್ ಲಾಲ್ ಖಟ್ಟರ್: ಕರ್ನಾಲ್
ಬಿಜೆಪಿ ಅಭ್ಯರ್ಥಿ ಮತ್ತು ಹರಿಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್, ಕರ್ನಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ದಿವ್ಯಾoಶು ಬುಧಿರಾಜ ವಿರುದ್ಧ ಸ್ಪರ್ಧಿಸಿದ್ದಾರೆ.

ಅನಂತ್ ನಾಗ್ -ರಾಜೌರಿ ಕ್ಷೇತ್ರ
ಜಮ್ಮು – ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಇಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿಯು ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಇದನ್ನೂ ಓದಿ: Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Exit mobile version