Site icon Vistara News

Lok Sabha Election: ಸೀಟು ಹಂಚಿಕೆ ಕಸರತ್ತು; ಮಹಾರಾಷ್ಟ್ರದಲ್ಲಿ ಸಭೆ ನಡೆಸಿದ ಅಮಿತ್‌ ಶಾ

amith shah

ಮುಂಬೈ: ಲೋಕಸಭೆ ಚುನಾವಣೆ (Lok Sabha Election)ಗೆ ದಿನಗಣನೆ ಆರಂಭವಾಗಿದೆ. ಈಗಾಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ರಣಾಂಗಣಕ್ಕೆ ಧುಮಿಕಿದೆ. ಇದರ ಜತೆಗೆ ಮೈತ್ರಿ ಪಕ್ಷಗಳ ಜತೆಗೆ ಸೀಟು ಹಂಚಿಕೆಯ ಕಸರತ್ತು ನಡೆಸಿದೆ. ಇದರ ಭಾಗವಾಗಿ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್‌ ಶಾ (Amit Shah) ಮಂಗಳವಾರ ರಾತ್ರಿ ಎರಡನೇ ಅತಿ ಹೆಚ್ಚು ಸಂಸದರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿನ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಸಭೆ ನಡೆಸಿದ್ದಾರೆ. ಎನ್‌ಡಿಎ (National Democratic Alliance)ಯ ಪ್ರಮುಖ ಪಾಲುದಾರರಾದ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎನ್ನುವ ಬಗ್ಗೆ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ಮಂಗಳವಾರ ರಾತ್ರಿ 10.15ರ ಸುಮಾರಿಗೆ ಸಭೆ ಆರಂಭವಾಯಿತು. ಆರಂಭದಲ್ಲಿ ಅಮಿತ್‌ ಶಾ ಅವರು ಸುಮಾರು 30 ನಿಮಿಷಗಳ ಕಾಲ ಅಜಿತ್‌ ಪವಾರ್‌ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್‌ ಜತೆ ಸಮಾಲೋಚನೆ ನಡೆಸಿದರು. ಈ ಇಬ್ಬರು ನಾಯಕರು ತೆರಳಿದ ಬಳಿಕ ಸುಮಾರು 50 ನಿಮಿಷಗಳ ಕಾಲ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಏಕನಾಥ್ ಶಿಂಧೆ ಜತೆ ಅಮಿತ್‌ ಶಾ ಮಾತುಕತೆ ನಡೆಸಿದರು ಎನ್ನಲಾಗಿದೆ.

ಯಾರಿಗೆ ಎಷ್ಟು ಸೀಟು?

ಸದ್ಯ ಯಾರಿಗೆ ಎಷ್ಟು ಸೀಟು ಎನ್ನುವ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಮಹಾರಾಷ್ಟ್ರದಲ್ಲಿರುವ 48 ಕ್ಷೇತ್ರಗಳ ಪೈಕಿ ಬಿಜೆಪಿ 30 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಈ ಮೂಲಕ ಪಕ್ಷದ 370 ಮತ್ತು ಎನ್‌ಡಿಎಯ 400 ಸೀಟುಗಳ ಅವಳಿ ಗುರಿ ತಲುಪಲು ಯೋಜನೆ ರೂಪಿಸಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ 12 ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಗೆ 6 ಸೀಟುಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ನಾಯಕರು ಈ ಬಗ್ಗೆ ತೃಪ್ತಿ ಹೊಂದಿಲ್ಲ ಎನ್ನಲಾಗಿದೆ.

ಮಿತ್ರ ಪಕ್ಷಗಳ ಬೇಡಿಕೆ ಏನು?

ಮುಖ್ಯಮಂತ್ರಿ ಏಕನಾಥ್‌ ಶಿಂದೆ ಆರಂಭದಲ್ಲಿ ತಮಗೆ 23 ಸೀಟು ನೀಡಬೇಕೆಂಬ ಬೇಡಿಕೆ ಸಲ್ಲಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಅವಿಭಜಿತ ಶಿವಸೇನೆ 23 ಸೀಟುಗಳಲ್ಲಿ ಸ್ಪರ್ಧಿಸಿತ್ತು. ಅದಾಗದಿದ್ದರೆ ಕನಿಷ್ಠ 18 ಕ್ಷೇತ್ರಗಳನ್ನಾದರೂ ಬಿಟ್ಟುಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಕಳೆದ ವರ್ಷ ಮೈತ್ರಿಗೆ ಸೇರಿಕೊಂಡಿರುವ ಅಜಿತ್‌ ಪವಾರ್‌ ಅವರ ಎನ್‌ಸಿಪಿಯು 10 ಲೋಕಸಭಾ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.

ಸಂಕೀರ್ಣವಾಗುತ್ತಿದೆ 10 ಸೀಟುಗಳು

ಇತರ ಹೆಚ್ಚಿನ ಸ್ಥಾನಗಳ ಬಗ್ಗೆ ಒಮ್ಮತ ಮೂಡುತ್ತಿದ್ದರೆ 10 ಸ್ಥಾನಗಳ ಹಂಚಿಕೆ ಸವಾಲಾಗಿ ಪರಿಣಮಿಸಿದೆ. ಕಲ್ಯಾಣ್, ದಕ್ಷಿಣ ಮುಂಬೈ, ರತ್ನಗಿರಿ-ಸಿಂಧುದುರ್ಗ್, ಶಿರೂರ್, ಅಮರಾವತಿ, ಸಂಭಾಜಿನಗರ ನಗರ, ಹಿಂಗೋಲಿ, ನಾಸಿಕ್, ರಾಮ್ಟೆಕ್ ಮತ್ತು ಮಾವಲ್‌ಗಳಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವ ವಿಚಾರವೇ ಹೆಚ್ಚು ಜಟಿಲವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಸವಾಲುಗಳ ಬಗ್ಗೆ ಅಮಿತ್‌ ಶಾ ವಿಸ್ತ್ರತವಾಗಿ ಚರ್ಚಿಸಿದ್ದು, ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?

ಎರಡು ದಿನಗಳ ಮಹಾರಾಷ್ಟ್ರ ಪ್ರವಾಸದಲ್ಲಿದ್ದ ಅಮಿತ್ ಶಾ ಮುಂಬೈಗೆ ಆಗಮಿಸುವ ಮೊದಲು ಅಕೋಲಾ, ಜಲ್ಗಾಂವ್ ಮತ್ತು ಛತ್ರಪತಿ ಸಂಭಾಜಿ ನಗರದಲ್ಲಿ ಸಭೆ ಮತ್ತು ರ‍್ಯಾಲಿಗಳನ್ನು ನಡೆಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version